ಕನ್ನಡಪ್ರಭ ವಾರ್ತೆ ವಿಜಯಪುರ
ಪಟ್ಟಣದ ರೋಜ್ ಗಾರ್ ಕಚೇರಿಯಲ್ಲಿ ಪುರಸಭೆ ಅಧ್ಯಕ್ಷೆ ಎನ್.ಭವ್ಯಾ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ, ಪ್ಲಾಸ್ಟಿಕ್ ಕವರುಗಳು ಬಳಕೆ ಮಾಡಿದರೆ, ಇನ್ನು ಮುಂದೆ ದಂಡ ವಿಧಿಸುವುದಿಲ್ಲ, ಕೇಸು ದಾಖಲಿಸಲಾಗುತ್ತದೆ ಎಂದು ಪುರಸಭೆಯ ಅಧಿಕಾರಿಗಳು ನೀಡಿದ ಎಚ್ಚರಿಕೆಯನ್ನು ಆಧರಿಸಿ ವ್ಯಾಪಾರಿಗಳು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಡಿ.ಮಾರ್ಟ್ ಆರಂಭವಾದ ನಂತರ, ದಿನಸಿ ವ್ಯಾಪಾರಿಗಳಿಗೆ ವ್ಯಾಪಾರಗಳಿಲ್ಲ. ಬರುವಂತಹ ಗ್ರಾಹಕರಿಗೆ ಕವರುಗಳು ಕೊಡದಿದ್ದರೆ, ಅವರು ಖರೀದಿಸಿರುವ ವಸ್ತುಗಳನ್ನು ಅಂಗಡಿಯಲ್ಲೇ ಬಿಟ್ಟು ಹೋಗುತ್ತಾರೆ. ನಮಗೆ ವಿಧಿಯಿಲ್ಲ. ೪೦ ಮೈಕ್ರಾನ್ ಮೇಲ್ಪಟ್ಟ ಕವರುಗಳನ್ನು ಬಳಕೆ ಮಾಡಿಕೊಳ್ಳಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಕೊಟ್ಟಿದ್ದರೂ, ವಿನಃ ಕಾರಣ ಪುರಸಭೆಯ ಅಧಿಕಾರಿಗಳು ಬಂದು, ಪ್ಲಾಸ್ಟಿಕ್ ವಶಪಡಿಸಿಕೊಂಡು ದಂಡ ವಿಧಿಸುವುದು ಯಾಕೆ? ಎಣ್ಣೆ, ಚಾಕೋಲೇಟ್, ಶಾಂಪೂ ಸೇರಿದಂತೆ ಬಹಳಷ್ಟು ಉತ್ಪನ್ನಗಳು ಪ್ಲಾಸ್ಟಿಕ್ ಕವರುಗಳಲ್ಲೇ ಬರುತ್ತವೆ. ನಾವೇನು ಮಾಡಲು ಸಾಧ್ಯ? ನೀವು ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋಗುವಾಗ ಪ್ಲಾಸ್ಟಿಕ್ ಕವರುಗಳ ಸಮೇತ ಹಿಡಿದು ದಂಡ ವಿಧಿಸಿರಿ, ಆಗಲಾದರೂ ಗ್ರಾಹಕರು ಪ್ಲಾಸ್ಟಿಕ್ ಕವರುಗಳ ಕೇಳುವುದನ್ನು ತಪ್ಪಿಸಲು ಅನುಕೂಲವಾಗುತ್ತದೆ. ನಾವು ಪ್ಲಾಸ್ಟಿಕ್ ಕವರ್ ಕೊಡದಿದ್ದರೆ, ಬೇರೆ ಅಂಗಡಿಗಳಲ್ಲಿ ಕೊಡುತ್ತಾರೆ. ಗ್ರಾಹಕರು ಅಲ್ಲಿಗೆ ಹೋಗುತ್ತಾರೆ ಎಂದು ಸಲಹೆ ನೀಡಿದರು.ಪುರಸಭೆ ಅಧ್ಯಕ್ಷೆ ಎನ್. ಭವ್ಯಾ ಮಹೇಶ್ ಮಾತನಾಡಿ, ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಬೇಕು. ಜನರ ಆರೋಗ್ಯ ಕಾಪಾಡಬೇಕು, ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾದರೆ, ನಾವು ಈಗಿನಿಂದಲೇ, ಕಷ್ಟವಾದರೂ ಪ್ಲಾಸ್ಟಿಕ್ ಕವರುಗಳ ಬಳಕೆಯನ್ನು ಬಿಟ್ಟು, ಬಟ್ಟೆಯ ಬ್ಯಾಗುಗಳನ್ನು ಬಳಕೆ ಮಾಡಿ ಎಂದರು.
ಪುರಸಭೆ ವ್ಯವಸ್ಥಾಪಕ ಸತ್ಯನಾರಾಯಣ, ಆರೋಗ್ಯ ನಿರೀಕ್ಷಕಿ ಲಾವಣ್ಯ, ಪೃಥ್ವಿ, ಶಿವನಾಗೇಗೌಡ ಹಾಗೂ ವ್ಯಾಪಾರಿಗಳು ಹಾಜರಿದ್ದರು.