ಬ್ಯಾಡಗಿ: ಅ. 5ರೊಳಗೆ ಪಟ್ಟಣದಲ್ಲಿನ ಮಲ್ಲೂರ ರಸ್ತೆಯಲ್ಲಿ ಖರೀದಿ ಮಾಡಲಾದ 10 ಎಕರೆ ಜಾಗದಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡದೆ ಇದ್ದಲ್ಲಿ ಅ. 6ರಿಂದ ಪಟ್ಟಣದ ಪುರಸಭೆ ಎದುರು ಅನಿರ್ದಿಷ್ಟಾವಧಿ ವರೆಗೆ ಧರಣಿ ನಡೆಸಲಾಗುವುದು ಎಂದು ಆಶ್ರಯ ನಿವೇಶನ ಹೋರಾಟ ಸಮಿತಿ ಸದಸ್ಯ ಸುರೇಶ ಛಲವಾದಿ ಎಚ್ಚರಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬ್ಯಾಡಗಿಯಲ್ಲಿ ಬಡವರು ರಾಜಕಾರಣಿಗಳ ಹಗ್ಗ ಜಗ್ಗಾಟದಿಂದ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಜಮೀನು ಖರೀದಿ ಮಾಡಿ 10 ವರ್ಷವಾಗುತ್ತ ಬಂದಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದ ಜನಪ್ರತಿನಿಧಿಗಳು ಬಣ್ಣದ ಮಾತುಗಳಿಂದ ಸುಳ್ಳು ಭರವಸೆ ನೀಡಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲ. ನಿವೇಶನಕ್ಕಾಗಿ ಇನ್ನೆಷ್ಟು ವರ್ಷ ಕಾಯಬೇಕು? ಬಡವರು ತಮ್ಮ ಹಕ್ಕು ಪಡೆಯಲು ಸಹ ಹೋರಾಟ ಮಾಡಲೇಬೇಕಾಗಿದೆ ಎಂದು ಆರೋಪಿಸಿದರು.ಇನ್ನೆಷ್ಟು ವರ್ಷ ಹೋರಾಟ?: ಫರೀದಾಬಾನು ನದೀಮುಲ್ಲಾ ಮಾತನಾಡಿ, ಕಳೆದ 20 ವರ್ಷದಿಂದ ಪಟ್ಟಣದಲ್ಲಿನ ಬಡ ನಿರ್ಗತಿಕರಿಗೆ ಸರ್ಕಾರ ನಿವೇಶನ ನೀಡಿಲ್ಲ. ಕಳೆದ 20 ವರ್ಷದಿಂದ ಬಡವರು ದುಬಾರಿ ಬಾಡಿಗೆ ಕೊಟ್ಟು ಬದುಕನ್ನು ನಡೆಸುವಂತಾಗಿದೆ. ಮೊದಲಿದ್ದ 10 ಎಕರೆ ನಿವೇಶನದಲ್ಲಿ ಫಲಾನುಭವಿಗಳಿಗೆ ನಿವೇಶನ ನೀಡಲು ಸಾಧ್ಯವಾಗಿಲ್ಲ. ಇನ್ನೂ ಹೊಸ ಜಾಗ ಖರೀದಿಸಿ ಅರ್ಜಿ ಸಲ್ಲಿಸಿದ 2 ಸಾವಿರ ಜನರಿಗೆ ಬಡವರಿಗೆ ನೀಡುವುದು ಕನಸಿನ ಮಾತು. ಕೂಡಲೇ ಈಗಿರುವ ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿದರು.ಮಾಡು ಇಲ್ಲವೇ ಮಡಿ ಹೋರಾಟ: ಜಯಕರ್ನಾಟಕ ಸಂಘಟನೆ ವಿನಾಯಕ ಕಂಬಳಿ ಮಾತನಾಡಿ, ಪುರಸಭೆ ಎದುರು ಧರಣಿ ನಡೆಸಿದ ವೇಳೆ ಆಶ್ರಯ ಸಮಿತಿ ನೂತನ ಅಧ್ಯಕ್ಷ ಮುನಾಫ್ ಎರೆಶೀಮಿ ಅವರು ಮಾರ್ಚ್‌ನೊಳಗೆ ನಿವೇಶನ ಹಂಚಿಕೆ ಮಾಡುವ ಭರವಸೆ ನೀಡಿದ್ದರು. ಬಳಿಕ ಮಾತಿಗೆ ಆ. 15ರೊಳಗೆ ನಿವೇಶನ ಹಂಚಿಕೆ ಮಾಡಿಯೇ ತೀರುತ್ತೇವೆ ಎಂಬುದಾಗಿ ಮಾತು ಕೊಟ್ಟಿದ್ದರು. ಅದರೆ ಮಾತು ಕೂಡ ತಪ್ಪಿದ್ದು, ಹಾಗಾದರೆ ಇನ್ನೆಷ್ಟು ವರ್ಷ ಬೇಕು? ಹಂಚಿಕೆ ಮಾಡಲು ಎಂದು ಪ್ರಶ್ನಿಸಿದರಲ್ಲದೇ ಈ ಬಾರಿ ಈ ಹೋರಾಟಕ್ಕೆ ಜಯಕರ್ನಾಟಕ ಹಾಗೂ ಇನ್ನಿತರ ಹೋರಾಟ ಸಂಘಗಳು ಕೈಜೋಡಿಸಲಿದ್ದು, ನಿವೇಶನ ಹಂಚಿಕೆ ಮಾಡುವ ವರೆಗೂ ಹಿಂದೆ ಸರಿಯಲ್ಲ ಎಂದು ಎಚ್ಚರಿಸಿದರು.ಈ ವೇಳೆ ಗುತ್ತೆಮ್ಮ ಮಾಳಗಿ, ಪಾಂಡುರಂಗ ಸುತಾರ, ಪ್ರವೀಣ ಶಿಲ್ಪಿ, ಜಾವೇದ ಬಳಿಗಾರ, ದಾದಾಪೀರ ಶಿರಹಟ್ಟಿ, ಮಾಬುಲಿ ನದಾಫ್, ಬಶೀರ ಬೆಳಗಾವಿ, ನಾಸಿರ ಬಿಜಾಪುರ, ರವಿಚಂದ್ರ ವಡ್ಡರ, ಇಮ್ರಾನ ಹಲಗೇರಿ, ಹನುಮಂತಪ್ಪ ರಾರಾವಿ, ಸುರೇಶ ಅಗಡಿ, ಕರಿಬಸಮ್ಮ ಮಡಿವಾಳರ ಗೌರಮ್ಮ ಹರಿಜನ ಮಂಜುಳಾ ಬಂಡಿವಡ್ಡರ, ಶಹನಾಜ ಮೆಡ್ಲೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.