ಯಲ್ಲಾಪುರ: ಕಾಂಗ್ರೆಸಿಗರ ಮಾತು ಕೇಳಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದರೆ ಕಾರ್ಯಕರ್ತರು ಬಡಿಗೆ ಹಿಡಿದು ಠಾಣೆಗೆ ನುಗ್ಗುವ ದಿನಗಳು ದೂರವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಇಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಜನರಿಗೆ ಮೋಸ ಮಾಡಿ, ಎಡವಿ ಬಿದ್ದ ಸರ್ಕಾರ. ಜನಸಾಮಾನ್ಯರು, ರೈತರು ನಿತ್ಯ ಜೀವನಕ್ಕೆ ದುಬಾರಿ ಬೆಲೆ ತೆರಬೇಕಾದ ಸ್ಥಿತಿ ಬಂದಿದೆ. ಶಕ್ತಿ ಯೋಜನೆಯ ಮೂಲಕ ಕೆಎಸ್ಆರ್‌ಟಿಸಿಯನ್ನು ಸರ್ಕಾರವೇ ದಿವಾಳಿ ಮಾಡಿದೆ, ₹6500 ಕೋಟಿ ಬಾಕಿ ಉಳಿಸಿಕೊಂಡಿದೆ. ಕೆಪಿಟಿಸಿಎಲ್‌ನ ಸಾವಿರಾರು ಕೋಟಿ ಆಸ್ತಿಯನ್ನು ಕಡಿಮೆ ಲೆಕ್ಕ ತೋರಿಸಿ ಮಾರಾಟ ಮಾಡಿ, ದುಡ್ಡು ಹೊಡೆಯಲು ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದರು.ಮುಸ್ಲಿಂ ತುಷ್ಟೀಕರಣಕ್ಕೆ ಸರ್ಕಾರ ಮುಂದಾಗಿದೆ. ಹಿಂದೂಗಳಲ್ಲಿರುವ ಬಡವರು, ಅಶಕ್ತರು ಸರ್ಕಾರಕ್ಕೆ ಕಾಣುತ್ತಿಲ್ಲವೇ? ಹಿಂದೂಗಳು ಕಾಂಗ್ರೆಸ್‌ಗೆ ಮತ ನೀಡಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿ ಮುಸ್ಲಿಂ ವಿರೋಧಿಯಲ್ಲ, ಆದರೆ ದೇಶದ್ರೋಹಿಗಳನ್ನು ಸುಮ್ಮನೆ ಬಿಡುವ ಪ್ರಶ್ನೆ ಇಲ್ಲ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಭಟ್ಕಳ ಸೇರಿದಂತೆ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಹಲ್ಲೆ ಮಾಡಿದ್ದಾರೆ. ಪರಿಶಿಷ್ಟ ಜಾತಿಯ ಬಡವರಿಗೆ ನೀಡಬೇಕಾದ ಹಣವನ್ನು ಗ್ಯಾರಂಟಿಗೆ ಬಳಸಿ, ದ್ವೇಷದ ರಾಜಕಾರಣ, ಮುಸ್ಲಿಂ ಓಲೈಕೆ, ಮಿತಿ ಮೀರಿದ ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ರಾಜ್ಯ ಸರ್ಕಾರ ಜನರಿಗೆ ಸುಳ್ಳು ಭರವಸೆ ನೀಡಿ ಮೋಸ ಮಾಡಿ, ಲೂಟಿ ಹೊಡೆಯುವ ಕಾರ್ಯ ಮಾಡುತ್ತಿದೆ. ಯಲ್ಲಾಪುರದಲ್ಲಿ ಬಿಜೆಪಿ ಕಾರ್ಯಕರ್ತರು ಅತಂತ್ರರಾಗಿದ್ದರೂ ಅಧೀರರಾಗಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿದ್ದೇವೆ ಎಂದರು.
ಬಿಜೆಪಿ ಮಾಜಿ ಅಧ್ಯಕ್ಷ ನಳಿನಕುಮಾರ ಕಟೀಲು ಮಾತನಾಡಿ, ರಾಜ್ಯದಲ್ಲಿ ಆಳಿದ ಎಲ್ಲ ಕಾಂಗ್ರೆಸ್ ಮುಖ್ಯಮಂತ್ರಿಗಳು ಭ್ರಷ್ಟಾಚಾರ ನಡೆಸಿದ್ದಾರೆ. ಅವರಲ್ಲಿ ಸಿದ್ದರಾಮಯ್ಯ ಮಹಾಭ್ರಷ್ಟ ಮುಖ್ಯಮಂತ್ರಿ. ಸೋನಿಯಾ ಗಾಂಧಿ ಕಾಲು ಹಿಡಿದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಾಸಕರ ಅನುದಾನವೂ ಬರುತ್ತಿಲ್ಲ. ಅವರ ರಾಜೀನಾಮೆ ಪಡೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು.ವಿಪ ಸದಸ್ಯ ಎನ್. ರವಿಕುಮಾರ, ಶಾಸಕ ಹರೀಶ ಪೂಂಜಾ, ಮಾಜಿ ಶಾಸಕರಾದ ಶಿವಾನಂದ ನಾಯ್ಕ, ಸುನೀಲ ನಾಯ್ಕ, ಸುನೀಲ ಹೆಗಡೆ, ಎಸ್.ಎಲ್. ಘೋಟ್ನೆಕರ್, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಪ್ರಮುಖರಾದ ತಮ್ಮೇಶ ಗೌಡ, ಶರಣು ತಳ್ಳಿಕೇರಿ, ಎ.ಎಸ್. ಪಾಟೀಲ ನಡಹಳ್ಳಿ, ಅನಂತಮೂರ್ತಿ ಹೆಗಡೆ, ಎಲ್.ಟಿ. ಪಾಟೀಲ ಇದ್ದರು. ರೇಖಾ ಹೆಗಡೆ ವಂದೇ ಮಾತರಂ ಗೀತೆ ಹಾಡಿದರು. ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಸ್ವಾಗತಿಸಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ವಂದಿಸಿದರು.
ಗ್ರಾಮದೇವಿ ದೇವಸ್ಥಾನಕ್ಕೆ ಭೇಟಿ:ಸಮಾವೇಶಕ್ಕೂ ಮುನ್ನ ಗ್ರಾಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಿ.ವೈ. ವಿಜಯೇಂದ್ರ, ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಪಾದಯಾತ್ರೆ ಮೂಲಕ ಪಟ್ಟಣದ ವಿವಿಧೆಡೆ ಸಾಗಿ ವೈಟಿಎಸ್‌ಎಸ್ ಮೈದಾನಕ್ಕೆ ಆಗಮಿಸಿದರು. ಅಂಬೇಡ್ಕರ್ ಸರ್ಕಲ್ ಬಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಾದಯಾತ್ರೆಯಲ್ಲಿ ಪಕ್ಷದ ಪದಾಧಿಕಾರಿಗಳು, ಮುಖಂಡರು, ಸಾವಿರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.