ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟ ಏರ್ಪಡಿಸಿರುವ ಪ.ಮಲ್ಲೇಶ್- 90 ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಆಶಯ ಭಾಷಣ ಮಾಡಿದರು.
ನಮ್ಮಲ್ಲಿ ಅಸಮಾನತೆ ಇದೆ. ಎಲ್ಲಿವರೆಗೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ದೊರೆಯುವುದಿಲ್ಲವೋ, ಅಲ್ಲಿಯವರೆಗೆ ಸಮಾನತೆ ಬರಲಾರದು. ಪ್ರಜಾಪ್ರಭುತ್ವದ ತಳಹದಿಯ ಮೇಲೆ ರಾಜಕೀಯ ಪ್ರಜಾಪ್ರಭುತ್ವ ನಿಲ್ಲದಿದ್ದರೆ ಸ್ವಾತಂತ್ರ್ಯ ಸಾರ್ಥಕವಾಗದು. ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನ ಶಕ್ತಿ ಇರಬೇಕು. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಬೇರ್ಪಡಿಸಲು ಸಾಧ್ಯವೇ ಇಲ್ಲ. ಬೆಸೆದುಕೊಂಡಿವೆ. ಈ ಮೂರು ಇಲ್ಲದ ಸ್ವಾತಂತ್ರ್ಯನಿರರ್ಥಕ ಎಂದರು.ಬದ್ಧತೆ ಉಳ್ಳವರು ಕೈಯಲ್ಲಿ ಅಧಿಕಾರ ಇದ್ದರೆ ಸಂವಿಧಾನ ಶ್ರೇಷ್ಠವಾಗುತ್ತದೆ. ಗೌರವ ಇಲ್ಲದವರ ಕೈಲಿದ್ದರೆ ಶ್ರೇಷ್ಠ ಹೇಗಾಗುತ್ತದೆ. ಇದು ನಮ್ಮ ಮುಂದಿರುವ ಸವಾಲು. ಸಂವಿಧಾನದಲ್ಲಿನ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ದುರ್ಬಲವಾದರೆ, ಅವುಗಳನ್ನು ಭ್ರಷ್ಟಗೊಳಿಸಿದರೆ ಸಂವಿಧಾನ ಹೇಗೆ ಉಳಿಯುತ್ತದೆ. ಅದರ ಧೇಯೋದ್ದೇಶ ಈಡೇರಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಅನೇಕ ಶೂದ್ರರೂ ಕೂಡ ಬಿಜೆಪಿಗೆ ಹೋದರು. ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ಅವರೂ ಸಮರ್ಥಿಸಿಕೊಳ್ಳುತ್ತಿದ್ದಾರೆ. ಹಿಂದುತ್ವ ಎಂಬುದು ಹಿಂದುತ್ವವಷ್ಟೇ. ಅದರಲ್ಲಿ ಗಟ್ಟಿಯಾದ ಹಿಂದುತ್ವ, ಮೃದು ಹಿಂದುತ್ವ ಎಂಬ ಎರಡು ಇದೆಯೇ? ಹಾಗೆ ಇರಲು ಸಾಧ್ಯವೇ? ಆದರೆ ಹೀಗೆ ಅಡ್ಡಗೋಡೆ ಮೇಲೆ ದೀಪ ಇಟ್ಟು, ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಒಂದು ವಿಷಯವನ್ನು ವಿಮರ್ಶೆ ಮಾಡುವ ಶಕ್ತಿ ಇಲ್ಲವಾದರೆ ಬಹಳ ಕಷ್ಟವಾಗುತ್ತದೆ. ಬಹಳಷ್ಟು ಮಂದಿಗೆ ಸಂವಿಧಾನದ ಪೀಠಿಕೆ ಗೊತ್ತಿಲ್ಲ. ಆದ್ದರಿಂದ ಈ ಬಾರಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿಯನ್ನು ರಾಜ್ಯದಾದ್ಯಂತ ಆಯೋಜಿಸಿದೆ ಎಂದರು.
ರಾಜಕೀಯವಾಗಿ ಅನ್ಯಾಯವನ್ನು ಅನ್ಯಾಯ ಎಂದು ಹೇಳಲು ಧ್ವನಿ ಇಲ್ಲವಾದರೆ ಪ್ರಜಾಪ್ರಭುತ್ವ ಎಂದು ಕರೆಯಬೇಕಾ? ನಾನು ಸುಳ್ಳು ಹೇಳುತ್ತಿರುವುದಾಗಿ ನನ್ನ ಮೇಲೆ ಬಿಜೆಪಿಯವರು ಆರೋಪ ಮಾಡಿದರು. ರೈಲ್ವೆ ಯೋಜನೆ, ರಸ್ತೆ ನಿರ್ಮಾಣ ಮಾಡುವುದಿಲ್ಲವೇ ಎಂದರು. ರೈಲ್ವೆಯಿಂದ ಸಂಗ್ರಹವಾಗುವ ಆದಾಯದಲ್ಲಿ ರಾಜ್ಯಕ್ಕೆ ಪಾಲು ನೀಡುತ್ತಾರೆಯೇ? ದೇಶ ಸರಿ ದಾರಿಯಲ್ಲಿ ಹೋಗುತ್ತಿಲ್ಲ ಎಂಬುದಕ್ಕೆ ಇದು ನಿದರ್ಶನ ಎಂದರು.
ಮನುಸ್ಮೃತಿಯ ಪರಿಣಾಮವಾಗಿ ಶೂದ್ರರು, ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಇದಕ್ಕೆ ಜಾತಿ ವ್ಯವಸ್ಥೆ ಕಾರಣ. ಅಸಮಾನತೆ ಇರುವವತೆಗೆ ಸ್ವಾತಂತ್ರ್ಯ ಸಾರ್ಥಕವಾಗಿದೆ ಎನ್ನಲಾಗದು. ವಸವಾದಿ ಶರಣರು, ಬುದ್ದ, ಗಾಂಧಿ, ಅಂಬೇಡ್ಕರ್ ಬದಲಾವಣೆಗೆ ಪ್ರಯತ್ನ ಮಾಡಿದರು. ಶರಣರು ಕಾಯಕ, ದಾಸೋಹದ ಮಹತ್ವ ಸಾರಿದರು. ಉತ್ಪಾದನೆ ಮತ್ತು ವಿತರಣೆ ಸಮಾನವಾಗಿರಬೇಕು ಎಂಬ ಕಾರಣಕ್ಕೆ ಶರಣರು ಎಲ್ಲರೂ ಕಾಯಕ ಮಾಡಬೇಕು ಎಂದರು. ಪ್ರಜಾಪ್ರಭುತ್ವ ಎಂಬುದು ಬಸವಾದಿ ಶರಣರು ಮತ್ತು ಬುದ್ದನ ಕಾಲದಲ್ಲಿತ್ತು. ಇಂದಿನ ಅಸೆಂಬ್ಲಿ, ಪಾರ್ಲಿಮೆಂಟ್ ಅಂದೇ ಅನುಭವ ಮಂಟಪವಾಗಿತ್ತು ಎಂದು ಅವರು ಪ್ರತಿಪಾದಿಸಿದರು.
ಸಂವಿಧಾನ ಉಳಿದರೆ ನಾವೆಲ್ಲಾ ಉಳಿಯುತ್ತೇವೆ. ಮನುವಾದಿಗಳು ಇಂದಿಗೂ ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ. ಗೋಲ್ವಾಲ್ಕರ್, ಸಾವರ್ಕರ್ ಏನೇಳಿದ್ದರು ತಿಳಿದುಕೊಳ್ಳಿ. ದೇಶಭಕ್ತಿ ಇಲ್ಲದವರೇ ದೇಶಭಕ್ತಿಯ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಎಂದು ಟೀಕಿಸಿದರು.
ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಅನ್ಷೂಲ್ ಲಾಲಜಿತ್ ಸಿಂಗ್, ಹಿರಿಯ ಪತ್ರಕರ್ತ ಪರಂಜೋಯ್, ಪ್ರೊ. ಕಾಳಚನ್ನೇಗೌಡ, ಉಮಾದೇವಿ, ಅಭಿರುಚಿ ಗಣೇಶ್, ಟಿ. ಗುರುರಾಜ್, ಸವಿತಾ ಮಲ್ಲೇಶ್ ಇದ್ದರು.ಜಾತಿ ವ್ಯವಸ್ಥೆ ಲಂಭವಾಗಿರಬಾರದು. ಹಿಟ್ಲರ್ ಹೇಳಿದ್ದು ಹೀಗೆ. ಆರ್.ಎಸ್.ಎಸ್ ಹಿಟ್ಲರ್ ಮತ್ತು ಮುಸಲೋನಿ ಹೇಳಿದನ್ನು ಫಾಲೋ ಮಾಡುತ್ತಿದ್ದಾರೆ. ಅದಕ್ಕೆ ಬಸವಾದಿ ಶರಣರು ಜಾತಿ ವ್ಯವಸ್ಥೆಯು ಸಮಾನ ಮಾದರಿಯಲ್ಲಿರಬೇಕು ಎಂದಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ