ಹಕ್ಕು ಚ್ಯುತಿಯಾದರೆ ವಿಕಲಚೇತನರಿಗೆ ಕಾನೂನಿದೆ

KannadaprabhaNewsNetwork |  
Published : Jan 11, 2026, 02:15 AM IST
ಹ | Kannada Prabha

ಸಾರಾಂಶ

ವಿಕಲಚೇತನರ ಹಕ್ಕು ಉಲ್ಲಂಘನೆಯಾದರೆ ರಕ್ಷಣೆ ನೀಡಲು ವಿಕಲಚೇತನರ ಸಂರಕ್ಷಣಾ ಕಾಯಿದೆಯ ನೆರವು ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ನೂರುನ್ನೀಸಾ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ವಿಕಲಚೇತನರು ಸಮಾಜದಲ್ಲಿ ಎಲ್ಲರಂತೆ ಘನತೆಯಿಂದ, ನೆಮ್ಮದಿಯಿಂದ ಬದುಕಲು ಸಂವಿಧಾನ ಎಲ್ಲಾ ರೀತಿಯ ಹಕ್ಕು, ರಕ್ಷಣೆ ನೀಡಿದೆ. ಕುಟುಂಬದವರಿಂದಾಗಲಿ, ಇಲಾಖೆ, ಸಂಸ್ಥೆ, ಸಮಾಜ ಯಾರಿಂದಲಾದರೂ ವಿಕಲಚೇತನರ ಹಕ್ಕು ಉಲ್ಲಂಘನೆಯಾದರೆ ರಕ್ಷಣೆ ನೀಡಲು ವಿಕಲಚೇತನರ ಸಂರಕ್ಷಣಾ ಕಾಯಿದೆಯ ನೆರವು ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ನೂರುನ್ನೀಸಾ ಹೇಳಿದರು.

ವಿಶ್ವ ಅಂಗವಿಕಲರ ದಿನಾಚರಣೆ ಪ್ರಯುಕ್ತ ಇಕ್ಬಾಲ್ ಮಜೀದ್ ಫೌಂಡೇಷನ್ ಹಾಗೂ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಸಿಐಟಿಯು ಜಿಲ್ಲಾ ಶಾಖೆ ಸಹಯೋಗದಲ್ಲಿ ನಗರದ ಮೆಳೆಕೋಟೆ ರಿಂಗ್ ರಸ್ತೆಯ ಸ್ಟಾರ್ ಕನ್ವೆನ್ಷನ್ ಹಾಲ್‌ನಲ್ಲಿ ವಿಕಲಚೇತನರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಹುಟ್ಟಿನಿಂದಾಗಿನಿಂದ ಅಥವಾ ಅಪಘಾತದಿಂದ ಅಂಗವೈಕಲ್ಯ ಉಂಟಾಗಬಹುದು. ಅಂಗವೈಕಲ್ಯತೆಯನ್ನು ಕೊರತೆ ಎಂದು ಭಾವಿಸದೆ, ಆತ್ಮವಿಶ್ವಾಸದಿಂದ ಬದುಕುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ನಮ್ಮ ಸಂವಿಧಾನ ವಿಕಲಚೇತನರಿಗೆ ವಿಶೇಷ ಅನುಕೂಲ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಸವಲತ್ತಿನಲ್ಲಿ ಮೀಸಲಾತಿ ಇದೆ. ಉದ್ಯೋಗಾವಕಾಶಗಳೂ ಇವೆ. ವಿಕಲಚೇತನರ ಹಕ್ಕುಗಳ ಉಲ್ಲಂಘನೆಯಾದಾಗ ಕಾನೂನು ನೆರವಿಗೆ ಬರುತ್ತದೆ. ಕುಟುಂಬದವರೂ ವಿಕಲಚೇತನರನ್ನು ಕಡೆಗಣಿಸದೆ ಎಲ್ಲರಂತೆ ಘನತೆಯಿಂದ ಸಹಜವಾಗಿ ಬಾಳುವ ವಾತಾವರಣ ನಿರ್ಮಿಸಬೇಕು ಎಂದರು.

ಇದೇ ವೇಳೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗಿರುವ ಪ್ರೇರಣಾ ವಿಕಲಚೇತನರ ವಧು-ವರದ ವೇದಿಕೆ ಉದ್ಘಾಟಿಸಿ, ವಿಕಲಚೇತನರಲ್ಲೂ ಇರುವ ಸಹಜವಾದ ಭಾವನೆಗಳನ್ನು ಅರ್ಥ ಮಾಡಿಕೊಂಡು ವಿವಾಹ ಮಾಡಿಕೊಳ್ಳಲು ವೇದಿಕೆ ಆರಂಭಿಸಿರುವುದು ಉತ್ತಮ ಕಾರ್ಯ. ವಿಕಲಚೇತನರು ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ವಿವಾಹವಾಗಿ ಸಾಂಸಾರಿಕ ಬದುಕು ಆರಂಭಿಸಿ ಸಖವಾಗಿ ಬಾಳುವಂತೆ ಹಾರೈಸಿದರು.

ಇಕ್ಬಾಲ್ ಮಜೀದ್ ಫೌಂಡೇಷನ್ ಮುಖ್ಯಸ್ಥ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹ್ಮದ್ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಅಸಮಾನತೆ ಇದೆ. ಬಡವರು-ಶ್ರೀಮಂತರು, ಅಕ್ಷರಸ್ಥರು-ಅನಕ್ಷರಸ್ಥರು, ಬಲ-ದುರ್ಬಲರು, ಅಧಿಕಾರವುಳ್ಳವರು-ಅಧಿಕಾರ ಇಲ್ಲದವರು ಇಂತಹ ತಾರತಮ್ಯ ತೊಡೆದುಹಾಕಲು ಇವರುವವರು ಇಲ್ಲದವರಿಗೆ ನೀಡಿ ಸಮಾಜದಲ್ಲಿ ಸಮಾನತೆಯಿಂದ ಬಾಳಲು ಅವಕಾಶ ಮಾಡಿಕೊಡಬೇಕು ಎನ್ನುವ ಕಾರಣಕ್ಕೆ ದೇವರು ಕೆಲವರಿಗೆ ಹೆಚ್ಚು ಕೊಟ್ಟಿರುತ್ತಾನೆ ಎಂಬದನ್ನು ತಿಳಿಯಬೇಕು ಎಂದು ಹೇಳಿದರು.

ಡಾ.ತಮೀಮ್ ಅಹಮದ್, ಟ್ರಸ್ಟ್ ಕಾರ್ಯದರ್ಶಿ ಎಸ್. ಬಾಬು, ಡಾ.ಶರಣ್ ಶ್ರೀನಿವಾಸನ್, ಡಾ.ದರ್ಶನ್, ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಅಧ್ಯಕ್ಷ ಜಿ.ಎನ್.ನಾಗರಾಜು, ಡಾ.ರವಿಶಂಕರ್ ತಿವಾರಿ, ಲೇಖಕಿ ಡಾ.ಶೈಲಾ ನಾಗರಾಜು, ಡಿಡಿ ಡಾ.ಎಸ್.ಸಿದ್ಧರಾಮಯ್ಯ, ಗುರುಪ್ರಸಾದ್, ಚಶನ್ ಸ್ಪೀಚ್ ಆ್ಯಂಡ್‌ ಹಿಯರಿಂಗ್ ಸೆಂಟರ್‌ನ ಚೈತ್ರ ಕೊಟ್ಟ ಶಂಕರ್, ವಿ.ಮುರುಗೇಶ್, ಜಿ.ಯಶೋಧ, ಶಬ್ಬೀರ್ ಪಾಷಾ, ಮಂಜುಳಾ ಮೊದಲಾದವರು ಭಾಗವಹಿಸಿದ್ದರು.

ಈ ವೇಳೆ ವಿಕಲಚೇತನರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಫಲಾನುಭವಿಗಳಿಗೆ ಶ್ರವಣ ಯಂತ್ರ ಸೇರಿದಂತೆ ವಿವಿಧ ಸವಲತ್ತುಗಳ ವಿತರಣೆ, ಸ್ವಯಂ ಉದ್ಯೋಗಗಳ ಬಗ್ಗೆ ಮಾಹಿತಿ ಪಡೆಯುವ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರ ಜಾತ್ರೆಗೆ ರಾಜ್ಯದಿಂದ 25 ಸಾವಿರ ಭಕ್ತರು
ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಲಿ: ಸಮ್ಮೇಳನಾಧ್ಯಕ್ಷ ಸುರೇಶ್ ಸಂಸ್ಕೃತಿ