ಆರ್‌ವಿಡಿ ಲೋಕಸಭೆಗೆ ಸ್ಪರ್ಧಿಸಿದರೆ ಗೆಲುವು

KannadaprabhaNewsNetwork | Published : Nov 2, 2023 1:01 AM

ಸಾರಾಂಶ

ಕೇಂದ್ರದಲ್ಲಿ ೨೦೦೬ರಲ್ಲಿ ಕಾಂಗ್ರೆಸ್ ಇದ್ದಾಗ ಅತಿಕ್ರಮಣದಾರರಿಗೆ ಹಕ್ಕುಪತ್ರ ವಿತರಿಸಲು ಆದೇಶಿಸಿತ್ತು. ೨೦೧೩-೧೮ರ ವರೆಗೆ ತಾವು ಶಾಸಕರಿದ್ದಾಗ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅತಿಕ್ರಮಣ ಜಾಗ ಜಿಪಿಎಸ್ ಮಾಡಿ ೧೦ ಸಾವಿರಕ್ಕೂ ಅಧಿಕ ಹಕ್ಕುಪತ್ರ ನೀಡಲಾಗಿದೆ.

ಕಾರವಾರ:

ಶಾಸಕ ಆರ್.ವಿ. ದೇಶಪಾಂಡೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ಗೆಲುವು ಸಾಧಿಸುತ್ತಾರೆ. ಇವರನ್ನು ಬಿಟ್ಟು ಬೇರೆ ಯಾರೇ ನಿಂತರೂ ಗೆಲುವು ಖಚಿತ ಎಂದು ಸಚಿವ ಮಂಕಾಳು ವೈದ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಾರಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುತ್ತದೆ. ನಿವೇದಿತ್ ಆಳ್ವಾ ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಮ್ಮ ಬಳಿ ಚರ್ಚಿಸಿಲ್ಲ. ನಾವು ಅವರ ಬಳಿ ಕೇಳಲಿಲ್ಲ. ಪಕ್ಷದಲ್ಲಿ ಮೇಧಾವಿಗಳಿದ್ದು, ಯಾರು ಸ್ಪರ್ಧಿಸಬೇಕು ಎನ್ನುವ ನಿರ್ಧಾರವನ್ನು ಅವರು ತೆಗೆದುಕೊಳ್ಳುತ್ತಾರೆ. ಈ ಬಾರಿ ಗೆಲವು ನಿಶ್ಚಿತ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಹಕ್ಕುಪತ್ರ ನೀಡಿದೆ:

ಅತಿಕ್ರಮಣದಾರರು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪ್ರಶ್ನಿಸಿದಾಗ, ಮಾಜಿ ಸಚಿವರು, ಬಿಜಿಪಿಗರಿಗೆ ಬೇಡದ ಮಾತನಾಡಲು ವಿನಂತಿಸಿಕೊಳ್ಳುತ್ತೇನೆ. ಕೇಂದ್ರದಲ್ಲಿ ೨೦೦೬ರಲ್ಲಿ ಕಾಂಗ್ರೆಸ್ ಇದ್ದಾಗ ಅತಿಕ್ರಮಣದಾರರಿಗೆ ಹಕ್ಕುಪತ್ರ ವಿತರಿಸಲು ಆದೇಶಿಸಿತ್ತು. ೨೦೧೩-೧೮ರ ವರೆಗೆ ತಾವು ಶಾಸಕರಿದ್ದಾಗ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅತಿಕ್ರಮಣ ಜಾಗ ಜಿಪಿಎಸ್ ಮಾಡಿ ೧೦ ಸಾವಿರಕ್ಕೂ ಅಧಿಕ ಹಕ್ಕುಪತ್ರ ನೀಡಲಾಗಿದೆ. ೨೦೧೮ರ ನಂತರ ಬಿಜೆಪಿ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಎಷ್ಟು ಹಕ್ಕುಪತ್ರ ನೀಡಿದ್ದಾರೆ ಎನ್ನುವುದನ್ನು ತೋರಿಸಲಿ? ಅವರ ಅವಧಿಯಲ್ಲಿ ಏನು ಮಾಡುತ್ತಿದ್ದರು? ಈಗ ರಾಜಕಾರಣ ಮಾಡುತ್ತಾರೆ. ಬಿಜೆಪಿಗರು ೫ ವರ್ಷ ಏನು ಮಾಡದಿರುವುದರಿಂದ ಇಂತಹ ಘಟನೆ ನಡೆಯುತ್ತಿದೆ. ಅವರ ಅವಧಿಯಲ್ಲಿ ಅತಿಕ್ರಮಣದಾರರ ಒಂದೇ ಒಂದು ಸಭೆಯನ್ನೂ ಮಾಡಿಲ್ಲ. ಅವರ ಉದ್ದೇಶ ಬೇರೆಯವರ ಹೆಸರು ಹಾಳುಮಾಡುವುದಾಗಿದೆ ಎಂದು ಕಿಡಿಕಾರಿದರು.

ಅತಿಕ್ರಮಣದಾರರಿಗೆ ನ್ಯಾಯಕೊಡಿಸಲು ನಮ್ಮ ಜತೆ ಕೈ ಕೋಡಿಸಲಿ, ಅದಾಗದೇ ಇದ್ದರೆ ಸುಮ್ಮನಿರಲಿ. ಬಿಜೆಪಿಗರೇ ಇಂದಿನ ಪರಿಸ್ಥಿತಿಗೆ ನೇರ ಕಾರಣರಾಗಿದ್ದಾರೆ. ನಮ್ಮ ಸರ್ಕಾರ ಬಡವರ ಪರವಿದೆ. ಅತಿಕ್ರಮಣದಾರರಿಗೆ ನ್ಯಾಯ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಗಡಿ ಭಾಗದಲ್ಲಿ ಕನ್ನಡ ಶಾಲೆ ಮುಚ್ಚುತ್ತಿರುವ ಬಗ್ಗೆ, ಹಳ್ಳಿಯಲ್ಲಿ ಇರುವವರು ಪಟ್ಟಣಕ್ಕೆ ವಲಸೆ ಹೊಗಿದ್ದಾರೆ. ಹೀಗಾಗಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಶಾಲೆ ಮುಚ್ಚುವ ಉದ್ದೇಶ ಸರ್ಕಾರಕ್ಕಿಲ್ಲ. ಒಂದು ಮಗುವಿದ್ದರು ಶಾಲೆ ಮುಚ್ಚಬಾರದು. ಆ ಮಗುವಿನ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂದು ಡಿಸಿ, ಸಿಇಒಗೆ ಸೂಚಿಸಲಾಗಿದೆ. ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಅಧಿಕಾರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಬಿಜೆಪಿಗರು ಏನು ಮಾಡುತ್ತಿದ್ದಾರೆ:

ರಾಷ್ಟ್ರೀಯ ಹೆದ್ದಾರಿ ೬೬ರ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವ ಪ್ರಶ್ನೆಗೆ, ಭಟ್ಕಳದಿಂದ ಕಾರವಾರ ವರೆಗೆ ಎಲ್ಲಿಯೂ ಕೆಲಸ ಆಗುತ್ತಿಲ್ಲ. ಕೈಗಾ, ಸೀಬರ್ಡ್, ಕೆಪಿಸಿ ಇತ್ಯಾದಿ ಯೋಜನೆಗೆ ತ್ಯಾಗ ಮಾಡಿದ್ದಾರೆ. ಕಾಮಗಾರಿ ಬೇಗ ಮುಗಿದು ಜನ ಸುಖವಾಗಿರಲಿ ಎಂದು ಬಯಸಿ ಸುರಂಗ, ಟೋಲ್ ಬಂದ್ ಮಾಡಿಸಲಾಗಿತ್ತು. ಆದರೆ ಎಂಎಲ್‌ಸಿ ಗಣಪತಿ ಉಳ್ವೇಕರ ಸುರಂಗ ಒಪನ್ ಮಾಡಬೇಕು ಎಂದು ಹೇಳಿ ಪ್ರತಿಭಟನೆ ನಡೆಸಿದರು ಎಂದು ಅಸಮಾಧಾನ ಹೊರಹಾಕಿದರು.

ಬಿಜೆಪಿಗರಿಗೆ ಅವ್ಯವಸ್ಥೆ ಕಾಣುವುದಿಲ್ಲವೇ? ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಅಲ್ಲಿ ಅವರದ್ದೇ ಸರ್ಕಾರವಿದೆ. ಕೇಂದ್ರ ಸಚಿವ ನಿತಿನ ಗಡ್ಕರಿ ಕಂಪನಿಯೇ ಕಾಮಗಾರಿ ಕೈಗೆತ್ತಿಕೊಂಡಿದೆ. ಬಿಜೆಪಿಗರು ಏನು ಮಾಡುತ್ತಿದ್ದಾರೆ. ಅವರು ಸಹಕಾರ ಕೊಟ್ಟರೆ ಈಗಲೂ ಟೋಲ್ ಬಂದ್ ಮಾಡಿಸುತ್ತೇವೆ. ಕಾಮಗಾರಿ ವೇಗ ಪಡೆದುಕೊಳ್ಳಲು ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಒಂದೇ ಒಂದು ಕಾಗದ ಪತ್ರ ಸರಿಯಿಲ್ಲ. ಎನ್‌ಎಚ್‌ಎಐ ಕೇಳಿದರೆ ಐಆರ್‌ಬಿ, ಐಆರ್‌ಬಿ ಕೇಳಿದರೆ ಎನ್‌ಎಚ್‌ಎಐ ಅತ್ತ ಬೊಟ್ಟು ಮಾಡುತ್ತಾರೆ. ಹೆದ್ದಾರಿಯಲ್ಲಿ ಎಷ್ಟು ಜನ ಸತ್ತಿದ್ದಾರೆ? ಬಿಜೆಪಿಗರು ಈ ಬಗ್ಗೆ ಯೋಚಿಸಿದ್ದಾರಾ? ಎಂದು ಆಕ್ರೋಶ ಹೊರಹಾಕಿದರು. ಶಾಸಕ ಸತೀಶ ಸೈಲ್ ಇದ್ದರು.ಆರ್‌ವಿಡಿಗೆ ಅಸಮಾಧಾನವಿಲ್ಲ: ಸಚಿವ ವೈದ್ಯ

ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ವೈದ್ಯ, ಅವರು ಹಿರಿಯರು, ನಮ್ಮ ಮಾರ್ಗದರ್ಶಕರು. ಕಾರವಾರಕ್ಕೆ ಆಗಮಿಸಿದ್ದ ವೇಳೆ ಕಡಲ ತೀರದಲ್ಲಿ ಕಸ ಕಂಡಿದೆ. ಜನರಿಂದ, ಪ್ರಕೃತಿಯಿಂದ ಕಸವಾಗುತ್ತಿದೆ. ಪ್ರತಿನಿತ್ಯ ಕಸ ತೆಗೆಯಬೇಕು. ಇಲ್ಲಿನ ಸಮಸ್ಯೆ ಅವರಿಗೂ ತಿಳಿದಿದೆ. ಅಗತ್ಯ ಮಾರ್ಗದರ್ಶನ ಮಾಡಿದ್ದಾರೆ. ಅವರಿಗೆ ಯಾವುದೇ ಅಸಮಾಧಾನವಿಲ್ಲ. ಅವರೆ ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ. ಏನೇ ಕೆಲಸ ಮಾಡಲು ಹೋದರೂ ವಿರೋದ ಮಾಡುವವರು ಹೆಚ್ಚು. ಮೊದಲು ೨ ತಾಲೂಕಿನ ಸಮಸ್ಯೆ ಅರಿವಿತ್ತು. ೫ ತಿಂಗಳಿನಿಂದ ಜಿಲ್ಲೆಯ ಸಮಸ್ಯೆ ನೋಡುತ್ತಿದ್ದೇನೆ. ಬಗೆಹರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಹಂತ-ಹಂತವಾಗಿ ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವರು ಹೇಳಿದರು.

Share this article