ಶಾಲೆಗಳು ಉಳಿದರೆ ಕನ್ನಡವೂ ಉಳಿಯುತ್ತದೆ

KannadaprabhaNewsNetwork |  
Published : Dec 30, 2025, 01:30 AM IST
 | Kannada Prabha

ಸಾರಾಂಶ

ಶಾಲೆಗಳು ಉಳಿದರೆ ಕನ್ನಡವೂ ಉಳಿಯುತ್ತದೆ. ಆದ್ದರಿಂದ ಸರ್ಕಾರ ಸಣ್ಣಪುಟ್ಟ ಕಾರಣ ಹೇಳಿ ಶಾಲೆಗಳನ್ನು ಮುಚ್ಚಬಾರದು ಎಂದು 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ, ವಿದ್ವಾಂಸ ಡಾ. ಕರೀಗೌಡ ಬೀಚನಹಳ್ಳಿ ಅಭಿಪ್ರಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಶಾಲೆಗಳು ಉಳಿದರೆ ಕನ್ನಡವೂ ಉಳಿಯುತ್ತದೆ. ಆದ್ದರಿಂದ ಸರ್ಕಾರ ಸಣ್ಣಪುಟ್ಟ ಕಾರಣ ಹೇಳಿ ಶಾಲೆಗಳನ್ನು ಮುಚ್ಚಬಾರದು ಎಂದು 17ನೇ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ, ವಿದ್ವಾಂಸ ಡಾ. ಕರೀಗೌಡ ಬೀಚನಹಳ್ಳಿ ಅಭಿಪ್ರಾಯಿಸಿದ್ದಾರೆ.

ತುಮಕೂರಿನ ಅಮಾನಿಕೆರೆ ಗಾಜಿನಮನೆಯಲ್ಲಿ 17ನೇ ತುಮಕೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಸರ್ವಾಧ್ಯಕ್ಷರ ಭಾಷಣ ಪ್ರತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕರ್ನಾಟಕದ ಶಿಕ್ಷಣ ಇಲಾಖೆಯ ವರದಿಗಳ ಪ್ರಕಾರ ರಾಜ್ಯದಲ್ಲಿ 3222 ಸರ್ಕಾರಿ ಶಾಲೆಗಳು ಶತಮಾನ ಕಂಡಿವೆ. ಈ ಶಾಲೆಗಳು ದುರಸ್ತಿಯಾಗಿ ಸಬಲೀಕರಣಗೊಳ್ಳಬೇಕಿದೆ. ಅವುಗಳ ಜೀರ್ಣೋದ್ಧಾರದ ಅವಶ್ಯಕತೆ ಇದೆ. ಕೆಲವು ಊರುಗಳಲ್ಲಿ ಶಾಲಾ ಕಟ್ಟಡಗಳಿಲ್ಲ. ಕೆಲವೆಡೆ ಶಿಕ್ಷಕರಿಲ್ಲ, ಕೆಲವೆಡೆ ಮಕ್ಕಳೇ ಇಲ್ಲ ಎಂಬ ವೈರುಧ್ಯಗಳು ಇವೆ. ಆದರೆ ಸರ್ಕಾರ ಇದರ ಸುಧಾರಣೆಗೆ ಕ್ರಮ ವಹಿಸಬೇಕೆ ವಿನಃ ಕೊರತೆಯ ಕಾರಣ ಹೇಳಿ ಶಾಲೆಗಳನ್ನು ಮುಚ್ಚುವ ಕ್ರಮಕ್ಕೆ ಮುಂದಾಗಬಾರದು ಎಂದು ಅವರು ಹೇಳಿದರು.

ಕರ್ನಾಟಕದ ವಿಶ್ವ ವಿದ್ಯಾಲಯಗಳು ಆರ್ಥಿಕ ಅನುದಾನವಿಲ್ಲದೆ, ಬೋಧಕರ ಕೊರತೆಯಿಂದ ದಿನೇ ದಿನೇ ಅವನತಿಯ ಹಾದಿ ಹಿಡಿದಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ನಿಕಾಯಕ್ಕೊಂದು ವಿಶ್ವವಿದ್ಯಾಲಯ ತೆರೆದು ಅದಕ್ಕೊಬ್ಬ ಕುಲಪತಿ ನೇಮಿಸಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಯುಜಿಸಿ ನಿಯಮಗಳು ಹಾಗೂ ರಾಜ್ಯ ಸರ್ಕಾರದ ನಿಯಮಗಳ ಗೊಂದಲಗಳಲ್ಲಿ ಉನ್ನತ ಶಿಕ್ಷಣ ವ್ಯವಸ್ಥೆ ಅಪಾಯದಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕನಿಷ್ಠ 10ನೇ ತರಗತಿವರೆಗಾದರೂ ಶಿಕ್ಷಣ ರಾಷ್ಟ್ರೀಕರಣವಾಗುವುದು ಅನಿವಾರ್ಯ ಎಂದು ಪ್ರತಿಪಾದಿಸಿದ ಅವರು, ಮಹಿಳೆಯರ ಧ್ವನಿಗಳು ಅವರ ದೃಷ್ಟಿಕೋನಗಳನ್ನು ವಿಶ್ಲೇಷಿಸುವ ಚಿಂತನೆಗಳು ರೂಪುಗೊಳ್ಳಬೇಕಾಗಿದೆ. ಸಾಮಾಜಿಕವಾಗಿ, ರಾಜಕೀಯವಾಗಿ, ವೈಚಾರಿಕವಾಗಿ ಸಮಸ್ಯೆಗಳ್ನು ಅನ್ವೇಷಿಸುವತ್ತ ಲೇಖಕಿಯರು ಧಾವಿಸಬೇಕು ಎಂದರು.

ಹಿಂದಿ ಭಾಷೆಯನ್ನು ಕೇಂದ್ರ ಸರ್ಕಾರ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಾದೇಶಿಕ ಭಾಷೆಗಳ ಮೇಲೆ ಹೇರುತ್ತಿರುವುದು ಕಳವಳಕಾರಿ ಎಂದ ಅವರು, ಹಿಂದಿ ಒಂದು ಆಕ್ರಮಣಕಾರಿ ಭಾಷೆ. ಈ ಮನೋಭಾವ ಭಾರತದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಲುವು ಎಂದು ಡಾ. ಬೀಚನಹಳ್ಳಿ ಹೇಳಿದರು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಜಾತಿ ಧರ್ಮಗಳ ಪ್ರಶ್ನೆ ವಿಜೃಂಭಿಸುತ್ತಿರುವುದು ಬಹುತ್ವ ಭಾರತಕ್ಕೆ ಆರೋಗ್ಯಕಾರಿಯಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ದೇಶ, ನಾಡು, ನುಡಿ ರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಕರೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣಿತ ವಿಶ್ವದ ಶೈಕ್ಷಣಿಕ ವ್ಯವಸ್ಥೆಯಲ್ಲಿ ನರವ್ಯೂಹವಿದ್ದಂತೆ: ಸ್ವರ್ಣಾಂಬಾ ರಾಜಶೇಖರ್
ಉತ್ತಮ ದಿಕ್ಕಿನಲ್ಲಿ ಸಾಗಿದರೆ ಮಾತ್ರ ಭವಿಷ್ಯ ಉಜ್ವಲ