ಯಲ್ಲಾಪುರ: ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬಂತೆ ಕೃಷಿಯಲ್ಲಿ ಯಂತ್ರ, ಮಂತ್ರ, ತಂತ್ರ, ಆಧುನಿಕ ಕಾಲಘಟ್ಟದಲ್ಲಿರುವಾಗ ವೈಜ್ಞಾನಿಕತೆ ಅಳವಡಿಸಿಕೊಂಡರೆ ಜೀವನದಲ್ಲಿ ಕೃಷಿಕ ಎಂದಿಗೂ ತೊಂದರೆಯಲ್ಲಿ ಸಿಲುಕಲಾರ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಶ್ರೀ ನುಡಿದರು.
ಇದನ್ನು ಮನಗಂಡಿರುವ ರೈತರಿಗೆ ಮಲೆನಾಡು ಸಹಕಾರಿ ಸಂಘವು ೨೫ ವರ್ಷಗಳ ಹಿಂದೆ ಈ ಸಂಘ ಸ್ಥಾಪಿಸಿ, ಕೃಷಿ ಪೂರಕ ಯಂತ್ರೋಪಕರಣಗಳನ್ನು ಒದಗಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಸಂಘವು ಮುಂದಿನ ದಿನಗಳಲ್ಲಿ ಸುವರ್ಣ/ವಜ್ರ ಮಹೋತ್ಸವವನ್ನು ಆಚರಿಸುವಂತಾಗಲಿ ಎಂದರು.
ಹಿರಿಯ ಸಹಕಾರಿ ಪ್ರಮೋದ ಹೆಗಡೆ ಮಾತನಾಡಿ, ಕೆಲವು ಪಂಡಿತರ ವೈಯಕ್ತಿಕ ಅಭಿಮತದಂತೆ ಈ ದೇಶದ ಜೀವಾಳ ಐಟಿಬಿಟಿ ಎಂದು ವಾದಿಸಿರುವುದನ್ನು ನೋಡಿದರೆ ಕೃಷಿಯ ಮಹತ್ವದ ಅರಿವಿಲ್ಲ. ಯಾವ ವೈಜ್ಞಾನಿಕತೆಯಿಂದಲೂ ೧ ಕೆಜಿ ಅಕ್ಕಿ ಬೆಳೆಯಲಾಗದು. ಅನ್ನ ಮತ್ತು ಬಟ್ಟೆ ರೈತನೇ ನೀಡಬೇಕಾಗಿದೆ. ಇದನ್ನು ಇಂತಹ ಪಂಡಿತರೆಂದುಕೊಳ್ಳುವವರು ಅರ್ಥ ಮಾಡಿಕೊಳ್ಳಬೇಕು ಎಂದರು.ವಿಪ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿದರು. ಮಲೆನಾಡು ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಅಧ್ಯಕ್ಷತೆ ವಹಿಸಿದ್ದರು.
ಸ್ವರ್ಣವಲ್ಲೀ ಶ್ರೀಮಠದ ಅನ್ನದಾನ ಸೇವೆಗೆ ಸಂಘವು ನೀಡಿದ ₹೩೦,೦೦೦ ದೇಣಿಗೆಯನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.ಮೇ ೬ಕ್ಕೆ ಕೃಷಿ ಜಯಂತಿ:ಸ್ವರ್ಣವಲ್ಲಿ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಮೇ ೬ರಂದು ಟಿಎಸ್ಎಸ್, ಟಿಎಂಎಸ್, ಗ್ರಾಮಾಭ್ಯುದಯ, ಜಾಗೃತ ವೇದಿಕೆಗಳ ಸಹಯೋಗದಲ್ಲಿ ಶ್ರೀಮಠದಲ್ಲಿ ನಡೆಯಲಿರುವ ಕೃಷಿ ಜಯಂತಿ ಹಿನ್ನೆಲೆಯಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾರಕ ಎಲೆಚುಕ್ಕಿ ರೋಗದ ನಿರ್ಮೂಲನೆ ಹೇಗೆ? ಎಂಬ ಕುರಿತು ಚಿಂತನೆ-ಸಂವಾದವನ್ನು ಸಂಪನ್ಮೂಲ ವ್ಯಕ್ತಿಗಳ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದೆ.ಸಂಘದ ಮುಖ್ಯ ಕಾರ್ಯ ನಿರ್ವಾಹಕ ವಿನಾಯಕ ಹೆಗಡೆ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ವೇದಿಕೆಯಲ್ಲಿದ್ದರು. ಸಭೆಗೆ ಆಗಮಿಸಿದ ಶ್ರೀಗಳನ್ನು ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಿದರು.
ಶ್ರೀಮಠದ ಪಾಠಶಾಲಾ ವಿದ್ಯಾರ್ಥಿಗಳು ವೇದಘೋಷ ಪಠಿಸಿದರು. ಆಶಾ ಬಗನಗದ್ದೆ ಮತ್ತು ನವ್ಯಾ ಹೆಗಡೆ ಕುಂಬ್ರಿಗುಡ್ಡೆ ಪ್ರಾರ್ಥನೆ ಹಾಡಿದರು. ಉಪಾಧ್ಯಕ್ಷ ಎಂ.ಜಿ. ಭಟ್ಟ ಶೀಗೇಪಾಲ ಸ್ವಾಗತಿಸಿದರು. ರವಿ ಭಟ್ಟ ಬರಗದ್ದೆ, ಸಣ್ಣಪ್ಪ ಭಾಗ್ವತ ನಿರ್ವಹಿಸಿದರು. ನಿರ್ದೇಶಕ ಎಂ.ಆರ್.ಹೆಗಡೆ ತಾರೇಹಳ್ಳಿ ವಂದಿಸಿದರು.