ಹುಬ್ಬಳ್ಳಿ: ಚಿತ್ರನಟಿ ಹಾಗೂ ಸಂಸದೇ ಸುಮಲತಾ ಮಂಡ್ಯದಿಂದ ಬಿಜೆಪಿಯಿಂದಲೇ ಸ್ಪರ್ಧಿಸಿದರೆ ಜೆಡಿಎಸ್ ಸ್ವಾಗತಿಸುತ್ತದೆ. ಆದರೆ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂದು ಚಾಮುಂಡೇಶ್ವರಿ ಶಾಸಕ ಜಿ.ಟಿ. ದೇವೇಗೌಡ ಶಂಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಅವರು, ಜೆಡಿಎಸ್‌ಗೆ 6 ಕ್ಷೇತ್ರ ಬಿಟ್ಟುಕೊಡುವಂತೆ ಬಿಜೆಪಿಯನ್ನು ಕೇಳುತ್ತಿದ್ದೇವೆ ಎಂದರು.ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ಶ್ರಮಿಸಿದ್ದ ನಾರಾಯಣಗೌಡ ಈಗ ಸಿದ್ದರಾಮಯ್ಯ ಮನೆಯಲ್ಲಿದ್ದಾರೆ. ಹೀಗಾಗಿ, ಸುಮಲತಾ ಕಾಂಗ್ರೆಸ್ಸಿಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಸುಮಲತಾ ಬಿಜೆಪಿ ಅಭ್ಯರ್ಥಿಯಾದರೆ ಅವರ ಪರ ಕೆಲಸ ಮಾಡುತ್ತೇವೆ ಎಂದರು.
ಎಚ್.ಡಿ. ದೇವೇಗೌಡರ ಕುಟುಂಬದಿಂದ ಎಚ್.ಡಿ. ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಇಬ್ಬರೂ ಸ್ಪರ್ಧಿಸುತ್ತಾರೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಿದರೆ ಪ್ರಜ್ವಲ ಮಾತ್ರ ಕಣಕ್ಕಿಳಿಯಲಿದ್ದು, ಎಚ್‌ಡಿಕೆ ಮತ್ತು ನಿಖಿಲ ಕುಮಾರಸ್ವಾಮಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.6 ಕ್ಷೇತ್ರ ನಮ್ಮ ಬೇಡಿಕೆ
ಜೆಡಿಎಸ್ ನೆಲೆ ಇರುವ ಮಂಡ್ಯ, ಮೈಸೂರ, ಹಾಸನ, ಕೋಲಾರ, ತುಮಕೂರ, ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದೇವೆ. ಬಿಜೆಪಿಯವರು ಎಷ್ಟು ಕೊಡುತ್ತಾರೆ ನೋಡಬೇಕು. ಮಂಡ್ಯ ಕೊಡದಿದ್ದರೆ ಅದರ ಬದಲಾಗಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದರು.ಬಿಜೆಪಿ ಜತೆ ಮೈತ್ರಿ ಕುರಿತಾಗಿ ಜೆಡಿಎಸ್‌ನಲ್ಲಿ ವಿರೋಧವಾಗಿಲ್ಲ. ಬಿಜೆಪಿ ತತ್ವ ಸಿದ್ದಾಂತವನ್ನು ಯಾವುದೇ ಕಾರಣಕ್ಕೂ ಜೆಡಿಎಸ್‌ನಲ್ಲಿ ಬಿಟ್ಟುಕೊಡುವುದಿಲ್ಲ. ಮೋದಿ ಕಾರಣಕ್ಕೆ ಹೊಂದಾಣಿಕೆಯಾಗಿದ್ದೇವೆ ಎಂದು ತಿಳಿಸಿದ ದೇವೇಗೌಡ, ಕೆರೆಗೋಡು ಧ್ವಜ ಪ್ರಕರಣದಲ್ಲಿ ಕುಮಾರಸ್ವಾಮಿ ಕೆಸರಿ ಶಾಲು ಹಾಕಿದ್ದರಷ್ಟೆ. ಅದೇನು ಬಿಜೆಪಿ ಶಾಲು ಅಲ್ವಲ್ಲ, ತಪ್ಪೇನು ಎಂದು ಸಮರ್ಥಿಸಿಕೊಂಡರು.
ಲೋಕಸಭೆ ಅಷ್ಟೆ ಅಲ್ಲ ಮುಂದಿನ ವಿಧಾನಸಭೆ ಚುನಾವಣೆಗೂ ಹೊಂದಾಣಿಕೆ ಆಗಬೇಕು ಎಂಬುದು ಜೆಡಿಎಸ್‌ನ ಇರಾದೆ. ಮುಂದೇನಾಗುತ್ತದೆ ನೋಡೋಣ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದರು ಜಿಡಿ ದೇವೇಗೌಡರು.ರಾಜ್ಯ ಸರ್ಕಾರ ವಿಫಲ
ರಾಜ್ಯ ಸರಕಾರದ ಯೋಜನೆಗಳು ವಿಫಲಗೊಂಡಿವೆ. ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆ ಬಗ್ಗೆ ಜಿಗುಪ್ಸೆ ಬಂದಿದೆ. ಗ್ಯಾರಂಟಿಗಳಿಗೆ ಹಣ ವಿನಿಯೋಗಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಇಲ್ಲವಾಗಿದೆ. ಇಲ್ಲಿಯ ವರೆಗೆ ₹50 ಲಕ್ಷ ಕೊಟ್ಟಿದ್ದಾರೆ. ಇದನ್ನು ಮರೆಮಾಚಲು ಕೇಂದ್ರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.ಪಕ್ಷದ ಮುಖಂಡರಾದ ವೀರಭದ್ರಪ್ಪ ಹಾಲಹರವಿ, ಬಿ.ಬಿ. ಗಂಗಾಧರಮಠ, ಗುರುರಾಜ ಹುಣಸಿಮರದ, ಎಂ.ವೈ. ಮುಧೋಳ, ಮಂಜುನಾಥಗೌಡ , ಸಿದ್ಧಲಿಂಗೇಶ್ವರಗೌಡ ಮಹಾಂತಒಡೆಯರ, ಪ್ರಕಾಶ್ ಅಂಗಡಿ, ನವೀನಕುಮಾರ ಹಾಗೂ ಅನೇಕರು ಇದ್ದರು.
ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಐದು ವರ್ಷ ಇರುತ್ತದೆಯೋ ಅಥವಾ ಬದಲಾಗುತ್ತದೆ ಎಂಬುದನ್ನು ಈಗಲೇ ಏನೂ ಹೇಳಲಾಗಲ್ಲ. ಕಾಂಗ್ರೆಸ್ಸಿನಲ್ಲಿ ಭಾರ ಹೆಚ್ಚಿದ್ದು, ಆ ಭಾರದಿಂದಲೇ ಅದು ಕುಸಿಯಬಹುದು. ಇಲ್ಲವೇ ಕುಮಾರಸ್ವಾಮಿ ಸರಕಾರದಂತೆ ಆಗಬಹುದು ಎಂದರು.