ಹರಪನಹಳ್ಳಿ: ಪ್ರತಿಭೆಗೆ ಪ್ರೋತ್ಸಾಹಿಸಿದರೆ ಇನ್ನು ಹೆಚ್ಚಿನ ಸಾಧನೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಹೇಳಿದ್ದಾರೆ.
ವಿದ್ಯಾರ್ಥಿಗಳು ಕಷ್ಟ ಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದಬೇಕು. ಇಂದು ನಾವು ಎಲ್ಲ ರಂಗದಲ್ಲೂ ಮುಂದೆ ಇದ್ದೇವೆ. ಆದರೆ ಜಾತಿ ವ್ಯವಸ್ಥೆಯಲ್ಲೂ ಮುಂದೆ ಇರುವುದು ವಿಷಾದದ ಸಂಗತಿ, ಜಾತಿ ವ್ಯವಸ್ಥೆ ತೊಲಗಬೇಕು ಎಂದರು.
ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಆದರ್ಶವಾಗಿ ಬದುಕಲು ಕಲಿಸಬೇಕು ಎಂದು ನುಡಿದರು. ವೀರಶೈವ ಮಹಾಸಭಾದ ತಾಲೂಕು ಅದ್ಯಕ್ಷ ಎಂ.ರಾಜಶೇಖರ ಮಾತನಾಡಿ, ನಕಲು ಮಾಡಿ ಉತ್ತೀರ್ಣರಾಗುತ್ತೇವೆ ಎಂದು ಭಾವಿಸಬಾರದು, ಪೋಷಕರು ಮಕ್ಕಳನ್ನು ಆ ರೀತಿ ಬೆಳೆಸಬಾರದು. ಕಲೆ, ಸಾಹಿತ್ಯ ಸಂಸ್ಕೃತಿ ಇಂದು ನಶಿ ಸುತ್ತಿವೆ. ಅವುಗಳನ್ನು ಪುನಃ ಜೀವಂತಗೊಳಿಸಿ ಯುವ ಜನತೆಗೆ ಪರಿಚಯಿಸಬೇಕು ಎಂದು ತಿಳಿಸಿದರು.ಸಾನ್ನಿಧ್ಯ ವಹಿಸಿದ್ದ ನೀಲಗುಂದ ಗುಡ್ಡದ ವಿರಕ್ತಮಠದ ಚೆನ್ನಬಸವಶಿವಯೋಗಿಗಳು ಮಾತನಾಡಿ, ಸಂಸ್ಕೃತಿ, ಸಂಸ್ಕಾರ ಕಲಿಸದೇ ಹೋದರೆ ಎಷ್ಟು ಅಂಕ ಗಳಿಸಿದರೂ ಉಪಯೋಗವಿಲ್ಲ. ವಿದ್ಯೆಗಿಂತ ಮಾನವೀಯತೆ, ಹೃದಯವಂತಿಕೆ ಮುಖ್ಯ. ಆದರೆ ಇಂದು ಮಾನವೀಯತೆ ಮೌಲ್ಯಗಳು ಮಾಯವಾಗಿವೆ ಎಂದರು.
ಬಯಲಾಟ ನಾಟಕ ಅಕಾಡೆಮಿ ಸದಸ್ಯ, ರಂಗಕರ್ಮಿ ಬಿ.ಪರಶುರಾಮ ಸನ್ಮಾನ ಸ್ವೀಕರಿಸಿ ಮಾತನಾಡಿ, ವೈಚಾರಿಕೆ ವಿಚಾರಗಳನ್ನು ಯುವ ಪೀಳಿಗೆ ಅಳವಡಿಸಿಕೊಳ್ಳಬೇಕು. ಮಸ್ಕಕ ಸರಿ ಇದ್ದರೆ ಪುಸ್ತಕ ಬರೆಯಬಹುದು ಎಂದು ಹೇಳಿದರು.
ಸಮಸ್ತರು ಜಾಗೃತ ವೇದಿಕೆಯ ಸಂಚಾಲಕ ಪಿ.ಮೇಘರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜ ಜಾಗೃತಿ ಗೊಳಿಸಲು ಸಮಸ್ತರು ಜಾಗೃತಿ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.