ಕಲಘಟಗಿ:
ತಾಲೂಕಿನ ವಿವಿಧ ಗ್ರಾಮಗಳಿಗೆ ಸರಿಯಾಗಿ ಬಸ್ ಬಿಡದೆ ಹೋದರೆ ಬಸ್ ಡಿಪೋ ಮುಚ್ಚಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹುಬ್ಬಳ್ಳಿ-ಧಾರವಾಡ ಡಿಪೋ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡರು.ತಾಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಕಲಘಟಗಿಯಲ್ಲಿ ಬಸ್ ಡಿಪೋ ಮಾಡಿದರು ಸಮಸ್ಯೆ ಹೋಗಿಲ್ಲ. ಸಮರ್ಪಕ ಬಸ್ ಬಿಡದೆ ಇರುವು ಕುರಿತು ವಿವಿಧ ಗ್ರಾಮಗಳಿಂದ ದೂರು ಕೇಳಿ ಬರುತ್ತಿವೆ. ಡಿಪೋ ಕತ್ತೆ ಕಾಯಲು ಇಟ್ಟುಕೊಂಡಿದ್ದೇವಾ , ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಆಗ, ಅಧಿಕಾರಿಗಳು 55 ಸಿಬ್ಬಂದಿ ಗೈರು ಹಾಜರಿಯಿಂದ ಸಮಸ್ಯೆಯಾಗಿದೆ ಎಂದು ವಿವರಿಸಿದರು.
ಹುಬ್ಬಳ್ಳಿಯಿಂದ ಸಂಜೆ 7 ಗಂಟೆ ಬಳಿಕ ಕಲಘಟಗಿಗೆ ಯಾವುದೇ ಬಸ್ ಸೌಕರ್ಯವಿಲ್ಲ ಎಂದು ದೂರು ಕೇಳಿ ಬಂದಾಗ ಅಧಿಕಾರಿಗಳು ತಾಲೂಕಿಗೆ ಹೊಸದಾಗಿ 10 ಬಸ್ ನೀಡಲಾಗಿದೆ ಎಂದರು.ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕಿನಲ್ಲಿ ಕೋ-ಆಪರೇಟಿವ್ ಸೊಸೈಟಿ ಮತ್ತು ಫಾರ್ಮಿಂಗ್ ಸೊಸೈಟಿ ಜಮೀನುಗಳ ರೈತರಿಗೆ ಪಟ್ಟಾ ನೀಡಲಾಗುವುದು ಮತ್ತು ಬಗರ್‌ಹುಕಂನ 1521 ಅರ್ಜಿಗಳನ್ನು ಸರ್ವೇ ಮಾಡಿ ಪರಿಶೀಲಿಸಬೇಕು. ನನ್ನ ಜತೆ ಚರ್ಚಿಸದೆ ಯಾವ ಅರ್ಜಿಗಳನ್ನು ತಿರಸ್ಕರಿಸಬಾರದು ಎಂದು ತಹಸೀಲ್ದಾರ್ ವೀರೇಶ ಮುಳಗುಂದಮಠ ಅವರಿಗೆ ಸಚಿವರು ಖಡಕ್ ಸೂಚನೆ ನೀಡಿದರು.
ತಾಲೂಕಿನ ಮಿಶ್ರೀಕೋಟಿ, ಗಂಜಿಗಟ್ಟಿ ಹಾಗೂ ವಿವಿಧ ಗ್ರಾಮಗಳಲ್ಲಿ ಹಲವಾರು ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ಕುಟುಂಬಗಳಿಗೆ ಉಪ ಗ್ರಾಮ ಮಾಡಲಾಗುವುದು ಎಂದು ಸಚಿವರು ಹೇಳಿದರು.ಕಲಘಟಗಿಗೆ ಬೆನಚಿಕೆರೆಯಿಂದ ವಾರಕ್ಕೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿತು. ಈಗ 10 ದಿನಕ್ಕೊಮ್ಮೆ ಶುದ್ಧ ಕುಡಿಯುವ ನೀರು ಬರುತ್ತಿದೆ. ಇದರಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಸಭೆಯಲ್ಲಿ ದೂರು ಕೇಳಿ ಬಂದವು. ಸಚಿವರು, ಒಂದು ವಾರದಲ್ಲಿ ಹೆಚ್ಚಿನ ಪಂಪ್‌ಸೆಟ್ ಮೋಟಾರ್ ಅಳವಡಿಸಿ ಜನರಿಗೆ 5 ದಿನಕ್ಕೊಮ್ಮೆ ಆದರೂ ಕುಡಿಯುವ ನೀರು ಕೊಡಿ. ಸಾಧ್ಯವಾದರೆ ಟ್ಯಾಂಕರ್ ಮೂಲಕ ನೀರು ಪೂರೈಸಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಹೇಳಿದರು.
ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕೆಲಸ ನಿಗದಿತ ಸಮಯದೊಳಗೆ ಮುಗಿಸಿ ಎಂದು ಗುತ್ತಿಗೆದಾರನಿಗೆ ಸಚಿವರು ತಿಳಿಸಿದರು. ಕಲಘಟಗಿ ತಾಲೂಕು ಆಸ್ಪತ್ರೆ ಒಳಗೆ-ಹೊರಗೆ ಸ್ವಚ್ಛತೆ ಕಾಪಾಡಿ. ಹೆರಿಗೆಗೆ ಬರುವವರ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು ಎಂದ ಸಚಿವರು, ತಾಲೂಕು ವೈದ್ಯಾಧಿಕಾರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಆಗ ಅವರು ಉತ್ತರಿಸಲು ತಡವರಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಉಪವಿಭಾಗಾಧಿಕಾರಿ ಶಾಲಂ ಹುಸೇನ, ಜಿಲ್ಲಾ ಸಮಾಜ ಕಲ್ಯಾಣ ಜಂಟಿ ನಿರ್ದೇಶಕಿ ಶುಭಂ ಎಸ್.ಆರ್. ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಶುಭಾ ಪಿ, ಮಂಜುನಾಥಗೌಡ ಮುರಳ್ಳಿ, ಶಿವಲಿಂಗಪ್ಪ ಯಲಿವಾಳ, ಇಒ ಪರಶುರಾಮ ಸಾವಂತ, ವೀರೇಶ ಮುಳಗುಂದಮಠ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.