ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತೆತ್ತಿದರೆ ಹೋರಾಟ

KannadaprabhaNewsNetwork | Published : Jul 2, 2024 1:38 AM

ಸಾರಾಂಶ

ಅಹಿಂದ ವರ್ಗದ ನಾಯಕ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳ ಬೇಕಾಗುತ್ತದೆ ಎಂದು ಕುರುಬರ ಸಂಘದ ಜಿಲ್ಲಾಧ್ಯಕ್ಷ ಸಿ.ಎಚ್.ಪರಶುರಾಮಪ್ಪ ಎಚ್ಚರಿಸಿದರು.

- ಚನ್ನಗಿರಿ ಶಾಸಕ ಬಸವರಾಜಗೆ ಕುರುಬ ಸಮಾಜ ಜಿಲ್ಲಾ ಘಟಕ ಎಚ್ಚರಿಕೆ - - - ಕನ್ನಡಪ್ರಭ ವಾರ್ತೆ ದಾವಣಗೆರೆಅಹಿಂದ ವರ್ಗದ ನಾಯಕ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳ ಬೇಕಾಗುತ್ತದೆ ಎಂದು ಕುರುಬರ ಸಂಘದ ಜಿಲ್ಲಾಧ್ಯಕ್ಷ ಸಿ.ಎಚ್.ಪರಶುರಾಮಪ್ಪ ಎಚ್ಚರಿಸಿದರು.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 5 ವರ್ಷ ಯಶಸ್ವಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯ 2023ರಲ್ಲಿ ಅಹಿಂದ ವರ್ಗಗಳ ಬೆಂಬಲದೊಂದಿಗೆ 136 ಕ್ಷೇತ್ರ ಗೆದ್ದು ಸಿಎಂ ಆಗಿದ್ದಾರೆ ಎಂದರು.

ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಪದೇಪದೇ ಸಿಎಂ ಸ್ಥಾನದ ವಿಚಾರವಾಗಿ ಮಾತನಾಡುತ್ತಿದ್ದಾರೆ. ಒಂದು ವೇಳೆ ಬಸವರಾಜರಿಗೆ ಧೈರ್ಯವಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರ ಅಭ್ಯರ್ಥಿಯಾಗಿ ಚನ್ನಗಿರಿ ಕ್ಷೇತ್ರದಿಂದ ಗೆದ್ದು ತೋರಿಸಲಿ ನೋಡೋಣ. ರಾಜ್ಯದಲ್ಲಿ ಶೇ.80ರಷ್ಟಿರುವ ಅಹಿಂದ ವರ್ಗಗಳನ್ನೇ ಮತ ಬ್ಯಾಂಕ್ ಮಾಡಿಕೊಂಡ ರಾಜಕೀಯ ಪಕ್ಷಗಳು ಶೇ.20ರಷ್ಟಿರುವ ಸಮುದಾಯಗಳಿಗೆ ರಾಜ್ಯದ ಆಡಳಿತ ಚುಕ್ಕಾಣಿ ನೀಡುತ್ತಾ ಬಂದಿವೆ ಎಂದು ದೂರಿದರು.ಸಿದ್ದರಾಮಯ್ಯ 2ನೇ ಬಾರಿ ಜನಾರ್ಶಿವಾದದಿಂದ ಮುಖ್ಯಮಂತ್ರಿಯಾದವರು. ಹೀಗಿರುವಾಗ ಸರ್ಕಾರಿ ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಬಹಿರಂಗವಾಗಿ ಡಿಸಿಎಂ ಡಿ.ಕೆ.ಶಿವಕುಮಾರಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ವೇದಿಕೆಯಲ್ಲಿ ಒತ್ತಾಯಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಗಿರಿ ಕ್ಷೇತ್ರದ ಅಹಿಂದ ವರ್ಗಗಳು ಕಾಂಗ್ರೆಸ್ ಪರ ನಿಂತಿವೆ. ಮೊನ್ನೆ ನಡೆದ ಲೋಕಸಭೆ ಚುನಾವಣೆಯಲ್ಲೂ ಅಹಿಂದ ವರ್ಗಗಳು ಕಾಂಗ್ರೆಸ್ ಪರ ಮತ ನೀಡಿವೆ. ಆದ್ದರಿಂದ ಬಸವರಾಜ ಶಿವಗಂಗಾ ಅವರು ಸಿಎಂ ಬದಲಾವಣೆ ವಿಚಾರ ಬಿಟ್ಟು ಆಡಳಿತದಲ್ಲಿ ಏನಾದರೂ ತಮಗೆ ಸಮಸ್ಯೆಗಳಿದ್ದರೆ ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಮಾತನಾಡಿ ಉತ್ತರ ಕಂಡುಕೊಳ್ಳಲಿ ಎಂದು ಕಿವಿಮಾತು ಹೇಳಿದರು.

ಮುಂದಿನ 4 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಅಧಿಕಾರಾವಧಿ ಪೂರ್ಣಗೊಳಿಸುತ್ತಾರೆ. ಒಂದು ವೇಳೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆಯಾದರೆ ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವಕ್ಕೆ ತಾನೇ ಧಕ್ಕೆ ತಂದುಕೊಂಡಂತಾಗುತ್ತದೆ. ಯಾವುದೇ ಕಾರಣಕ್ಕೂ ಅಂತಹ ದುಸ್ಸಾಹಸ ಬೇಡ. ಸಿಎಂ ವಿರುದ್ಧ ಬಸವರಾಜ ಶಿವಗಂಗಾ ಸೇರಿದಂತೆ ಯಾರೇ ಅಪಸ್ವರ ಎತ್ತಿದರೂ ರಾಜ್ಯವ್ಯಾಪಿ ಕುರುಬ ಸಮಾಜ ಮತ್ತು ಅಹಿಂದ ವರ್ಗಗಲು ಜತೆಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸಿ.ಎಚ್‌.ಹನುಮಂತಪ್ಪ ಎಚ್ಚರಿಸಿದರು.

ಸಮಾಜದ ಮುಖಂಡ ಹಿರಿಯ ವಕೀಲ ಬಿ.ಟಿ.ಸಿದ್ದಪ್ಪ, ಜಿಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಮಾಯಕೊಂಡ ಎಸ್.ವೆಂಕಟೇಶ, ಮಾಜಿ ಸದಸ್ಯ ಹದಡಿ ಡಿ.ಸಿ.ನಿಂಗಪ್ಪ, ಪೈಲ್ವಾನ್ ಸಂಗಪ್ಪ, ಶಶಿಧರ್, ಚಂದ್ರು ದೀಟೂರು, ಎಂ.ಮಂಜುನಾಥ, ಎಚ್.ಎ.ರುದ್ರಪ್ಪ ಹಾಗೂ ಇತರರು ಇದ್ದರು. - - - -1ಕೆಡಿವಿಜಿ4:

ದಾವಣಗೆರೆಯಲ್ಲಿ ಸೋಮವಾರ ಕುರುಬ ಸಮಾಜದ ಜಿಲ್ಲಾ ಮುಖಂಡ ಸಿ.ಎಚ್. ಹನುಮಂತಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

Share this article