ದಾಂಡೇಲಿ: ಶೈಕ್ಷಣಿಕ ಕ್ಷೇತ್ರ ಸದೃಢವಾಗಿ ಬೆಳೆದರೆ ಮಾತ್ರ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ನಾವು ನೀವೆಲ್ಲ ಸೇರಿ ಕೆಲಸ ಮಾಡಬೇಕು. ಶಿಕ್ಷಣವಂತ ಸಮಾಜ ನಿರ್ಮಾಣದಿಂದ ಮಾತ್ರ ರಾಷ್ಟ್ರ ಅಭಿವೃದ್ಧಿ ಸಾಧ್ಯ ಎಂದು ವೆಸ್ಟ್‌ಕೊಸ್ಟ್ ಕಾಗದ ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ ಹೇಳಿದರು.
ರೋಟರಿ ಕ್ಲಬ್ ಮತ್ತು ರೋಟರಿ ಶಿಕ್ಷಣ ಸಂಸ್ಥೆಗಳ ನಿಸ್ವಾರ್ಥ ಸೇವೆ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ ಪಾಟೀಲ ವೆಸ್ಟ್‌ಕೊಸ್ಟ್ ಕಾಗದ ಕಾರ್ಖಾನೆಯು ರೋಟರಿ ಶಿಕ್ಷಣ ಸಂಸ್ಥೆಗೆ ನೀಡುತ್ತಿರುವ ನೆರವು ಶ್ಲಾಘನೀಯವಾಗಿದೆ. ಪ್ರತಿ ಹಂತದಲ್ಲಿ ಕಾಗದ ಕಾರ್ಖಾನೆ ನಮ್ಮ ಶಿಕ್ಷಣ ಸಂಸ್ಥೆಗೆ ನೆರವು ನೀಡುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ ಎಂದರು.ರೋಟರಿ ಕ್ಲಬ್‌ನ ಅಧ್ಯಕ್ಷ ರಾಹುಲ್ ಬಾವಾಜಿ, ಪ್ರಧಾನ ಕಾರ್ಯದರ್ಶಿ ಅಶುತೋಷಕುಮಾರ ರಾಯ, ಖಜಾಂಚಿ ಮಿಥುನ ನಾಯಕ ಉಪಸ್ಥಿತರಿದ್ದರು.
ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಕೊಠಡಿಯನ್ನು ನಿರ್ಮಿಸಿಕೊಟ್ಟಿರುವ ವೆಸ್ಟ್‌ಕೊಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನರನ್ನು ರೋಟರಿ ಶಿಕ್ಷಣ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ರೋಟರಿ ಕ್ಲಬ್‌ನ ಪ್ರಮುಖರಾದ ಎಸ್. ಸೋಮಕುಮಾರ ಕಾರ್ಯಕ್ರಮ ನಿರೂಪಿಸಿದರು. ಡಾ. ಮೋಹನ ಪಾಟೀಲ ಸ್ವಾಗತಿಸಿದರು. ಮಿಥುನ ನಾಯಕ ವಂದಿಸಿದರು.