ಪರಿಸರ ರಕ್ಷಿಸಿದರೆ ವಿಶ್ವದಲ್ಲೇ ಭಾರತ ನ. 1 : ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್

KannadaprabhaNewsNetwork | Updated : Dec 23 2024, 12:08 PM IST

ಸಾರಾಂಶ

 ಪರಿಸರ ರಕ್ಷಣೆಗೆ ಆದ್ಯತೆ ನೀಡಿದರೆ ಸಾಕು, ವಿಶ್ವದಲ್ಲಿಯೇ ಭಾರತ ನಂ.1  ರಾಷ್ಟ್ರವಾಗಿ ಮಿಂಚುವ ದಿನ ದೂರವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.  

 ವಿಜಯಪುರ : ಪರಿಸರ ರಕ್ಷಣೆಗೆ ಆದ್ಯತೆ ನೀಡಿದರೆ ಸಾಕು, ವಿಶ್ವದಲ್ಲಿಯೇ ಭಾರತ ನಂ.1 ರಾಷ್ಟ್ರವಾಗಿ ಮಿಂಚುವ ದಿನ ದೂರವಿಲ್ಲ ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನದ ಆಶ್ರಯದಲ್ಲಿ ಪರಿಸರ ರಕ್ಷಣೆಗಾಗಿ ಆಯೋಜಿಸಿದ್ದ ವೃಕ್ಷಥಾನ್‌ನಲ್ಲಿ ವಿಜೇತರಿಗೆ ಬಹುಮಾನ ಪಾರಿತೋಷಕ ವಿತರಿಸಿ ಮಾತನಾಡಿದರು. ಪರಿಸರ ರಕ್ಷಣೆಗೆ ಪ್ರಥಮಾದ್ಯತೆ ನೀಡಿದರೆ ಭಾರತ ವಿಶ್ವದಲ್ಲಿಯೇ ನಂ.೧ ರಾಷ್ಟ್ರವಾಗಿ ಕಂಗೊಳಿಸಲಿದೆ, ವೃಕ್ಷಥಾನ್ ಯಶಸ್ಸಿಗೆ ಪ್ರತಿಯೊಬ್ಬರು ಸಹಭಾಗಿತ್ವ ನೀಡಿ, ಈ ವೃಕ್ಷಥಾನ್ ಸಹ ವಿಶ್ವದಾಖಲೆಯಾಗಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ವಿದೇಶಿಗರು ಲಕ್ಷಾಂತರ ರೂಪಾಯಿ ಸಂಪತ್ತನ್ನು ಇರಿಸಿಕೊಂಡು ಭಾರತಕ್ಕೆ ಪ್ರವಾಸಕ್ಕೆ ಬರುತ್ತಾರೆ, ಯಾವ ಅಂಜಿಕೆಯೂ ಇಲ್ಲದೇ ಅವರು ಭಾರತವನ್ನು ಸುತ್ತುತ್ತಾರೆ. ನಮ್ಮ ಭಾರತ ಅಷ್ಟೊಂದು ಸುರಕ್ಷಿತವಾಗಿದ್ದು, ಇದೇ ಸಾಕ್ಷಿ. ಆದರೆ, ಉಳಿದ ದೇಶಗಳಲ್ಲಿ ಈ ರೀತಿ ಸುತ್ತಾಡಲು ಸಾಧ್ಯವಿಲ್ಲವೆಂದರೂ ತಪ್ಪಾಗಲಾರದು. ಭಾರತದಲ್ಲಿ ಮಾತ್ರ ಯಾವ ಅಂಜಿಕೆಯಲ್ಲದೇ ಪ್ರವಾಸಿಗರು ಸಂಚರಿಸಬಹುದಾಗಿದೆ.

 ಜಾಗತಿಕ ತಾಪಮಾನ ಏರಿಕೆ, ಅನೇಕ ಸಾಂಕ್ರಾಮಿಕ ರೋಗಗಳ ಹಾವಳಿ ಜಗತ್ತನ್ನು ಕಾಡುತ್ತಿವೆ. ಇದರ ಪರಿಹಾರ ಪರಿಸರದಲ್ಲಿಯೇ ಇದೆ ಹೊರತು ಬೇರೆಲ್ಲಿಯೂ ಇಲ್ಲ. ಈ ರೀತಿಯ ಸಮಸ್ಯೆಗಳು ಉಚ್ಛ್ರಾಯವಾಗಿರುವ ಕಾಲಘಟ್ಟದಲ್ಲಿ ಪರಿಸರ ರಕ್ಷಣೆಯೇ ಎಲ್ಲ ಸಮಸ್ಯೆಗಳಿಗೂ ದಿವ್ಯಔಷಧಿಯಾಗಲಿದೆ ಎಂದು ಹೇಳಿದರು. 

ಮನುಷ್ಯ ಪರಿಸರದಿಂದ ವಿಮುಖವಾಗಬಾರದು, ಜಾಗತಿಕ ಭೂ ತಾಪಮಾನ ಏರಿಕೆ, ಬೆಲೆ ಏರಿಕೆಯ ಕಷ್ಟದ ದಿನಗಳಲ್ಲಿ ಒಂದು ನಿರ್ಣಾಯಕ ಘಟ್ಟದಲ್ಲಿ ನಾವು ಬಂದು ತಲುಪಿದ್ದೇವೆ. ಹಿಂದೇ ಪೂರ್ವಜರು ಪರಿಸರವನ್ನೇ ತಮ್ಮ ಒಡನಾಡಿಗಳನ್ನಾಗಿಸಿಕೊಂಡ ಪರಿಣಾಮ ಹೆಚ್ಚು ಹೆಚ್ಚು ವರ್ಷ ಜೀವಿಸುತ್ತಿದ್ದರು. ಸ್ವಿಟ್ಜಲೆಂಡ್, ನ್ಯೂಜಿಲೆಂಡ್ ಮೊದಲಾದ ದೇಶದವರು ಪರಿಸರ ಕಾಪಾಡಿಕೊಳ್ಳುವ ವಿಷಯಕ್ಕೆ ಪ್ರಥಮಾದ್ಯತೆ ನೀಡಿದ್ದಾರೆ. ಈ ತೆರನಾದ ಆದ್ಯತೆ ನಮ್ಮಲ್ಲಿಯೂ ನೀಡಬೇಕಿದೆ ಎಂದರು. 

 ವೃಕ್ಷಥಾನ್ ರೂವಾರಿ ಸಚಿವ ಡಾ.ಎಂ.ಬಿ.ಪಾಟೀಲ ಮಾತನಾಡಿ, ಸದಾ ನಿಸರ್ಗದ ವಿಷಯಗಳನ್ನೇ ಸಾರವಾಗಿಸಿಕೊಂಡು ಪ್ರವಚನದ ಅಮೃತ ಉಣಬಡಿಸುತ್ತಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆಶಯವನ್ನು ಈಡೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಕೆಡಿಪಿ ಸಭೆ ನಡೆಸುವಾಗ ವಿಜಯಪುರದಲ್ಲಿರುವ ಅರಣ್ಯ ಭೂಮಿ ಪ್ರಮಾಣದ ಅಂಕಿ-ಅಂಶಗಳು ಆತಂಕ್ಕೀಡು ಮಾಡಿತ್ತು. ಸರಾಸರಿ ಅರಣ್ಯ ಪ್ರದೇಶ ಕಡಿಮೆ ಇತ್ತು, ಹೀಗಾಗಿಯೇ ಈ ಆತಂಕ ನಿವಾರಣೆಗಾಗಿ ವೃಕ್ಷಥಾನ್ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.

ಕೋಟಿ ಸಸಿಗಳನ್ನು ನೆಡಲಾಗಿದೆ, ಆದರೆ ಸರಾಸರಿ ಪ್ರಮಾಣಕ್ಕಾಗಿ ೧೦ ಸಹಸ್ರ ಕೋಟಿ ಸಸಿಗಳನ್ನು ನೆಡುವ ನಿಟ್ಟಿನಲ್ಲಿ ಸಂಕಲ್ಪ ಮಾಡಬೇಕಿದೆ, ಇನ್ನೂ ಕೆಲವು ವರ್ಷಗಳ ನಂತರ ಈ ಮ್ಯಾರಾಥಾನ್ ಯುವಕರೇ ಮುಂದಾಳತ್ವ ವಹಿಸಿಕೊಳ್ಳಬೇಕು. ಈ ಕಾರ್ಯಕ್ರಮ ನಿಮ್ಮದು ಎಂದು ಯುವಕರಿಗೆ ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ, ಸಿಇಒ ರಿಷಿ ಆನಂದ, ಕೆಪಿಸಿಸಿ ಸದಸ್ಯ ಅಬ್ದುಲ್‌ಹಮೀದ್ ಮುಶ್ರೀಫ್, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಪ್ರಮುಖರಾದ ಡಾ.ಮಹಾಂತೇಶ ಬಿರಾದಾರ, ಸಂಕೇತ ಬಗಲಿ, ಪ್ರೊ.ಮುರುಗೇಶ ಪಟ್ಟಣಶೆಟ್ಟಿ ಮುಂತಾದವರು ಇದ್ದರು. ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಕಾರ್ಯಕ್ರಮ ನಿರೂಪಿಸಿದರು.

Share this article