- ಅ.ಭಾ.ವೀ.ಲಿಂ. ಮಹಾಸಭಾ ತಾಲೂಕುಮಟ್ಟದ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅಭಿಮತ
- - -ಕನ್ನಡಪ್ರಭ ವಾರ್ತೆ ಹರಿಹರ
ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳು ಒಂದಾಗದಿದ್ದರೆ ಭವಿಷ್ಯದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅ.ಭಾ.ವೀ.ಲಿಂ. ಮಹಾಸಭಾ ರಾಷ್ಟ್ರೀಯ ಮಹಿಳಾ ಘಟಕ ಅಧ್ಯಕ್ಷೆ ವೀಣಾ ಕಾಶಪ್ಪನವರ್ ಅಭಿಪ್ರಾಯಪಟ್ಟರು.ಅ.ಭಾ.ವೀ.ಲಿಂ. ಮಹಾಸಭಾ ತಾಲೂಕು ಘಟಕದಿಂದ ಶುಕ್ರವಾರ ನಗರದ ಎಚ್.ಕೆ.ವೀರಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಸಮಾವೇಶ, ನಗರ, ಯುವ ಹಾಗೂ ಮಹಿಳಾ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ನಮ್ಮ ನಮ್ಮಲ್ಲೇ ಹೊಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಇದರಿಂದ ಬೇಗ ನಾವು ಎಚ್ಚೆತ್ತು ಕೊಳ್ಳಬೇಕಿದೆ. ಇಲ್ಲದಿದ್ದರೆ ಕೇವಲ ಪುಸ್ತಕದಲ್ಲಿ ಮಾತ್ರ ನಾವು ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಕಾಯಕದ ಮೇಲೆ ಜಾತಿಗಳು ಉಪಪಂಗಡಗಳು ನಿರ್ಮಾಣವಾಗಿದೆ ಎನ್ನುವುದನ್ನು ಅರಿಯಬೇಕಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಸದೃಢ ಆಗಬೇಕಾದರೆ, ತಾಲೂಕುಮಟ್ಟದ ಸಮಾವೇಶಗಳು ನಿರಂತರವಾಗಿ ನಡೆಸುವುದು ಅವಶ್ಯಕ. ವೀರಶೈವ ಸಮಾಜದಲ್ಲಿ ಸಾವಿರ ಮಠ ಹಾಗೂ ನೂರಾರು ಜಗದ್ಗುರುಗಳು ಇರುವುದು ಒಳ್ಳೆಯದಕ್ಕೋ ಆಥವಾ ದಾರಿತಪ್ಪಿಸುವುದಕ್ಕೊ ಎನ್ನುವುದು ನನಗೆ ತಿಳಿಯದಂತಾಗಿದೆ ಎಂದರು.
ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡಿ ವೀರಶೈವ ಲಿಂಗಾಯತ ಸ್ವಾತಂತ್ರ ಧರ್ಮಕ್ಕಾಗಿ ಈಗಾಗಲೇ ಹೋರಾಟ ಆರಂಭವಾಗಿದೆ. ಸ್ವತಂತ್ರ ಧರ್ಮವಾಗುವವರೆಗೂ, ಮಹಾಸಭಾ ವಿರಮಿಸುವುದಿಲ್ಲ. ಕಲಿತ ಆಕ್ಷರ ಹಾಗೂ ಉತ್ತಮ ಸಂಸ್ಕಾರ ಹೊಂದಿರುವ ಎಂಥ ವ್ಯಕ್ತಿಯಾದರು ಉತ್ತಮ ಜೀವನ ಸಾಗಿಸಲು ಸಾಧ್ಯ. ನಿಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುವಂತೆ ಸಲಹೆ ನೀಡಿದರು.ರಾಜ್ಯ ಕಾರ್ಯದರ್ಶಿ ಶಶಿಕಲಾ ಮೂರ್ತಿ ಮಾತನಾಡಿ, ಅಧಿಕಾರಕ್ಕಾಗಿ ಸಂಘಟನೆಯನ್ನು ಬಳಸಿಕೊಳ್ಳದೇ ಸಮಾಜದ ಅಭಿವೃದ್ಧಿಗೆ ಶ್ರಮಿಸಿದಾಗ ಮಾತ್ರ ಸಧೃಡ ಸಮಾಜ ಕಟ್ಟಲು ಸಾಧ್ಯ. ನೂರಾರು ವರ್ಷಗಳ ಇತಿಹಾಸವಿರುವ ಮಹಾಸಭಾದಲ್ಲಿ ಕೇವಲ ೨.೫೦ ಲಕ್ಷ ಮಾತ್ರ ಸದಸ್ಯರು ನೋಂದಣಿ ಗಮನಸಿದರೆ, ನಮ್ಮಲ್ಲಿ ಸಮಾಜದ ಬಗ್ಗೆಯಿರುವ ಕಾಳಜಿ ತೋರುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ ಮಾತನಾಡಿ ತಾಲೂಕಿನಲ್ಲಿ ಬೇರುಮಟ್ಟದಿಂದ ಸಮಾಜದ ಸಂಘಟನೆ ಮಾಡುವ ಸಂಕಲ್ಪದ ಹಿನ್ನೆಲೆ ವಿವಿಧ ಘಟಕಗಳನ್ನು ಪದಾಧಿಕಾರಿಗಳನ್ನು ನೇಮಕ ಮಾಡಿದ್ದು, ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವಂತೆ ತಿಳಿಸಿದರು.ಇದೇ ವೇಳೆ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಹಾಗೂ ಸಮಾಜದ ವಿವಿಧ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಮಾಜ ಸಂಘಟನೆಯಲ್ಲಿ ಯುವಕರ ಮತ್ತು ಮಹಿಳೆಯರ ಪಾತ್ರ ಕುರಿತು ಹೊಳೆಸಿರಿಗೆರೆಯ ಆಧ್ಯಾತ್ಮಿಕ ಚಿಂತಕ ಡಿ.ಸಿದ್ದೇಶ್ ಮಾತನಾಡಿದರು.
ನಗರ ಅಧ್ಯಕ್ಷ ಟಿ.ಜೆ.ಮುರುಗೇಶಪ್ಪ, ಮಹಿಳಾ ಅಧ್ಯಕ್ಷೆ ಸುನೀತಾ ಮಾರವಳ್ಳಿ, ಜಿ.ಕೆ.ಮಲ್ಲಿಕಾರ್ಜುನ, ಎನ್.ಪಿ.ತಿಮ್ಮನಗೌಡ, ವೀರಣ್ಣ ಯಾದವಾಡ್, ನಾಗರಾಜ್ ಕುರುವತ್ತಿ, ಶಶಿಧರ ಗೌಡ, ಜಿಪಂ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಮಾಜಿ ಸದಸ್ಯ ಬಿ.ಎಂ. ವಾಗೀಶ ಸ್ವಾಮಿ, ಮುಖಂಡ ಚಂದ್ರಶೇಖರ್ ಪೂಜಾರ್, ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ಜಿ.ಬಿ. ಹಾಲೇಶ್ ಗೌಡ, ಡಿಡಿಸಿಸಿ ಉಪಾಧ್ಯಕ್ಷ ಡಿ.ಕುಮಾರ್, ಸುಷ್ಮಾ ಪಾಟೀಲ್, ಎನ್.ಜಿ.ನಾಗನಗೌಡ, ನಿಖಿಲ್ ಕೊಂಡಜ್ಜಿ, ಐಗೂರು ಚಂದ್ರಶೇಖರ್, ಜೆ.ಶಿವರಾಜ್, ಎಚ್.ಎನ್. ಬಸವರಾಜ್, ಮಂಜುನಾಥ ಪಾಟೀಲ್, ಡಿ.ಹೇಮಂತ್ ರಾಜ್, ರೂಪಾ ನಾಗರಾಜ್, ಎಚ್.ಕೊಟ್ರೇಶಪ್ಪ, ಎಚ್.ಮಹದೇವಪ್ಪ, ಅಂಜು ಸುರೇಶ್, ಜಿ.ಆರ್.ಕವಿತಾ, ರಾಜೇಶ್‌ಗೌಡ, ರಾಜೇಶ್ ಕರೂರು, ಎಚ್.ಎಂ. ವೀರಯ್ಯ, ನಾಗರಾಜ್ ಕೊಡಿಹಳ್ಳಿ, ಸ್ವಾಮಿಲಿಂಗಪ್ಪ ಹಾಗೂ ಇತರರಿದ್ದರು.- - -
-22HRR.04.ಜೆಪಿಜಿ: ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.