ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಲಕ್ಷಾಂತರ ಜನರು ಸರ್ಕಾರಿ ಜಾಗಗಳಲ್ಲಿ ಮನೆ, ಗುಡಿಸಲು ಕಟ್ಟಿಕೊಂಡಿದ್ದು ಅಂತಹ ಜನತೆಗೆ ಸರ್ಕಾರದಿಂದ ಯಾವುದೇ ಹಕ್ಕು ಪತ್ರಗಳಾಗಲಿ, ಮಂಜೂರಾತಿ ಆಗಲಿ ನೀಡಿರುವುದಿಲ್ಲ. ಅಂತಹ ಜನರ ಹೋರಾಟವನ್ನು ಬೆಂಬಲಿಸುವುದು ಅಗತ್ಯವಾಗಿದ್ದು, ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಬೇಕು ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ರಾಜ್ಯ ಸಮಿತಿ ಮುಖಂಡ ಸಿರಿಮನೆ ನಾಗರಾಜು ತಿಳಿಸಿದರು.
ಈ ಕುರಿತು ಸ್ಥಳೀಯ ರೈತರು ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಸಮಿತಿ ಗಮನಕ್ಕೆ ತಂದಿದ್ದು ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಪಕ್ಷದಲ್ಲಿ ಮುಂದೆ ರಾಜ್ಯಾದ್ಯಂತ ಹೋರಾಟ ರೂಪಿಸಲಾಗುವುದು ಎಂದರು.
ಮುಖಂಡ ರಮೇಶ್ ಸಂಕ್ರಾಂತಿ ಮಾತನಾಡಿ, ತಾಲೂಕಿನ ಬಡ ರೈತರ ಸಮಸ್ಯೆಗಳನ್ನು ಕುರಿತು ಸ್ಥಳೀಯ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸಾಕಷ್ಟು ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬಡ ರೈತರ ಭೂಮಿಯನ್ನು ಕಾನೂನಿನ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಿದ್ದು ಕಂದಾಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ರೈತರ ಒಕ್ಕಲೆಬ್ಬಿಸಿ ಅರಣ್ಯ ಪ್ರದೇಶ ಎಂದು ಬಾವುಟ ನೆಡುತ್ತಿರುವ ಅರಣ್ಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಕ್ತ ಮಾರ್ಗದರ್ಶನ ನೀಡಬೇಕಿದೆ. ಇದು ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶ್ರೀರಂಗಚಾರ್, ಸಂತೋಷ ನಾಯಕ್, ನಾಗರಾಜ್ ನಾಯಕ್, ಹನುಮಾ ನಾಯಕ್, ಪೆರುಮಗೊಂಡನಹಳ್ಳಿ ಮುನಿರಾಜು, ಕೊಟ್ಟಿಗೆ ಮಾಚೇನಹಳ್ಳಿ ನಾಗರಾಜ್ ಮೌರ್ಯ, ಸಮಿತಿಯ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
29ಕೆಡಿಬಿಪಿ4-ದೊಡ್ಡಬಳ್ಳಾಪುರದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಸುದ್ದಿಗೋಷ್ಠಿ ನಡೆಯಿತು.