ಅಂತರಂಗ ಶುದ್ಧವಾಗಿದ್ದರೆ ದೇವರ ಒಲುಮೆ: ಬಸವ ಮರುಳಸಿದ್ಧ ಸ್ವಾಮೀಜಿ

KannadaprabhaNewsNetwork | Published : Mar 4, 2025 12:34 AM

ಸಾರಾಂಶ

ಚಿಕ್ಕಮಗಳೂರು, ಬಹಿರಂಗದ ಆಚರಣೆಗಳ ಜತೆಗೆ ಅಂತರಂಗದ ಆಚರಣೆಗಳು ಶುದ್ಧವಾಗಿದ್ದಲ್ಲಿ ದೇವರನ್ನು ಒಲಿಸಿಕೊಳ್ಳಬಹುದು ಎಂದು ಬಸವತತ್ತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.

ಜಯನಗರದ ಶ್ರೀ ಸಂಕಷ್ಟ ಹರ ಬಲಮುರಿ ಗಣಪತಿ ದೇವಸ್ಥಾನದ ರಜತ ಮಹೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬಹಿರಂಗದ ಆಚರಣೆಗಳ ಜತೆಗೆ ಅಂತರಂಗದ ಆಚರಣೆಗಳು ಶುದ್ಧವಾಗಿದ್ದಲ್ಲಿ ದೇವರನ್ನು ಒಲಿಸಿಕೊಳ್ಳಬಹುದು ಎಂದು ಬಸವತತ್ತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ನುಡಿದರು.

ಜಯನಗರದ ಶ್ರೀ ಸಂಕಷ್ಟ ಹರ ಬಲಮುರಿ ಗಣಪತಿ ದೇವಸ್ಥಾನದ ರಜತ ಮಹೋತ್ಸವದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ದೇವಾಲಯ 25 ವರ್ಷ ಪೂರೈಸಿದೆ ಎಂದರೆ ಅದು ದೊಡ್ಡ ಸಾಧನೆಯೇ ಸರಿ. ಶಕ್ತಿ, ಶ್ರದ್ಧೆ, ಜನಗಳ ನೈತಿಕ ಮೌಲ್ಯವನ್ನು ಪ್ರೇರೇಪಿಸುವಂತಹ ವಿಚಾರಗಳು ನಡೆಯುತ್ತಿದ್ದರೆ ಅಂತಹ ಧಾರ್ಮಿಕ ಕೇಂದ್ರಗಳು ಜೀವಂತವಾಗಿ ಉಳಿಯುತ್ತವೆ. ದೇವಾಲಯ ಸ್ಥಾಪನೆಯಾದಾಗಿನಿಂದ ಈವರೆಗೆ ಉತ್ತಮ ಬೆಳವಣಿಗೆ ಕಂಡಿದೆ ಎಂದರು. ದಾಸೋಹಕ್ಕೆ ಸಾಕಷ್ಟು ಅರ್ಥವಿದೆ, ನಾನು ದೇವರಿಗೆ ದಾಸನಾಗಿದ್ದೇನೆ ಎಂಬುದೇ ದಾಸೋಹ. ಅದು ಬರಿ ಭೋಜನವಲ್ಲ, ಉಪಾಸನೆ. ದೇವರನ್ನು ಒಲಿಸಿಕೊಳ್ಳುವುದು ಒಂದು ಮಾರ್ಗವಾದರೆ, ಶುದ್ಧ ಹೃದಯ ಇಟ್ಟುಕೊಂಡು ದೇವರ ಒಲುಮೆ ಪಡೆಯುವುದು ಇನ್ನೊಂದು ಮಾರ್ಗವಿದೆ ಎಂದು ಹೇಳಿದರು.ಶಾಸ್ತ್ರಗಳು ನಮಗೆ ದಾರಿ ತೋರಿಸುತ್ತವೆ. ಆದರೆ, ಆ ಮಾರ್ಗದಲ್ಲಿ ನಡೆಯದೆ ನಾವು ಬಹಿರಂಗದ ಆಚರಣೆಗಳಲ್ಲಿ ಕಳೆದು ಹೋಗುತ್ತಿದ್ದೇವೆ. ಅಂತರಂಗದ ಆಚರಣೆಗಳ ಕಡೆ ಗಮನಹರಿಸಬೇಕು. ಬಹಿರಂಗದ ಆಚರಣೆ ಮನಸನ್ನು ಕೇಂದ್ರೀಕರಿ ಸಿದರೆ, ಅಂತರಂಗದ ಆಚರಣೆಗಳು ದೇವರನ್ನು ಒಲಿಸಿಕೊಳ್ಳಲು ಕಾರಣವಾಗುತ್ತದೆ ಎಂದು ಎಲ್ಲಾ ದಾರ್ಶನಿಕರು ಹೇಳಿದ್ದಾರೆ ಎಂದರು.ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಮಾತನಾಡಿ, ನಮ್ಮ ಸನಾತನ ಪದ್ಧತಿ ಒಂದು ಬಗೆ ಆರಾಧನೆ ಅವಲಂಭಿಸಿಲ್ಲ. ಮುಕ್ತ ಆರಾಧನೆಗೆ ಅವಕಾಶ ಕಲ್ಪಿಸಿದೆ. ಮನುಷ್ಯರಾಗಿ ಎಲ್ಲರೂ ಒಂದೇ ಆದರೆ, ಸಂಸ್ಕೃತಿಯಲ್ಲಿ ಭಿನ್ನವಾಗಿದ್ದೇವೆ. ನಮ್ಮ ಸಂಸ್ಕೃತಿ ರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ. ನಮ್ಮದು ವಿಶ್ವಕಲ್ಯಾಣ ಬಯಸಿದ ಸಂಸ್ಕೃತಿ. ಇದು ನಾಶವಾದರೆ ಉಳಿಯುವುದು ಭಯ ಹುಟ್ಟಿಸುವ ಪದ್ಧತಿ. ಅದನ್ನು ರಕ್ಷಣೆ ಮಾಡಿಕೊಳ್ಳೋಣ, ನಮ್ಮೊಳಗೆ ಸದ್ಭಾವನೆ ಇಲ್ಲದಿದ್ದರೆ ದೇವರ ಹುಡುಕಾಟ ವ್ಯರ್ಥ. ಅಂತರಂಗದ ಕನ್ನಡಿ ಹಿಡಿಯಲು ದೇವಾಲಯ ಬೇಕು ಎಂದು ಹೇಳಿದರು.

ಗೌರಿಗದ್ದೆ ಆಶ್ರಮದ ಅವಧೂತ ವಿನಯ ಗುರೂಜಿ ಮಾತನಾಡಿ, ಹಿಂದುಗಳಿಗೆ ಇರುವುದು ಇದೊಂದೇ ದೇಶ. ಇಲ್ಲಿ ಪೂಜೆ, ಧ್ಯಾನ ಮಾಡಲು ಕೋರ್ಟ್ ಮೆಟ್ಟಿಲು ಹತ್ತಬೇಕಿರುವುದು ದುರ್ದೈವ. ಸನಾತನ ಮಠದಲ್ಲಿ ಚೌಕಟ್ಟು ಮೀರಿ ಕೆಲಸ ಮಾಡಲು ಗಟ್ಟಿತನ ಬೇಕು. ಅದನ್ನು ಹರಿಹರಪುರದ ಸ್ವಾಮೀಜಿ ಮಾಡಿದ್ದಾರೆ ಎಂದರು.ದೇವಸ್ಥಾನ ಸಮಿತಿ ಅಧ್ಯಕ್ಷ ದೇವರಾಜಶೆಟ್ಟಿ ಮಾತನಾಡಿ, ಬಲಮುರಿ ಗಣಪತಿ ದೇವಸ್ಥಾನ ನಿರ್ಮಾಣಗೊಂಡು 25 ವರ್ಷ ಆಗಿದೆ. ರತ್ನಾಕರ ಅವರು ಅಂದು ಯೋಚನೆ ಮಾಡದೆ ಹೋಗಿದ್ದರೆ ಇಂದು ಒಗ್ಗೂಡಿ ದೇವರ ದರ್ಶನ ಪಡೆಯಲು ಸಾಧ್ಯ ವಾಗುತ್ತಿರಲಿಲ್ಲ. ಹಿಂದಿನಿಂದಲೂ ಮಹಾಗಣಪತಿ ಯಾರನ್ನೂ ಕೈಬಿಟ್ಟಿಲ್ಲ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಅಧ್ಯಾತ್ಮಿಕದ ಕಡೆ ಒಲವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ದೇವಸ್ಥಾನ ಸಮಿತಿ ಸಂಸ್ಥಾಪಕ ಅಧ್ಯಕ್ಷ ದೇವೇಗೌಡ, ನಗರಸಭೆ ಉಪಾಧ್ಯಕ್ಷೆ ಪುಷ್ಪಾ ರಾಜೇಂದ್ರ,ಸದಸ್ಯೆ ಶೀಲಾ ದಿನೇಶ್, ಭೀಮೇಶ್, ಗೌರವಾಧ್ಯಕ್ಷ ರುದ್ರಪ್ಪ, ಈರೇಗೌಡ, ದೊಡ್ಡೇಗೌಡ, ರಾಜೇಗೌಡ, ಬಸವರಾಜ್, ಶಿವಕುಮಾರ್, ಪುಟ್ಟೇಗೌಡ, ದೇವರಾಜ್, ಮೋಹನ್, ಮಾದವ್, ರಂಗಸ್ವಾಮಿ, ಶಿವು ಉಪಸ್ಥಿತರಿದ್ದರು. 3 ಕೆಸಿಕೆಎಂ 2ಚಿಕ್ಕಮಗಳೂರಿನ ಜಯನಗರದ ಶ್ರೀ ಸಂಕಷ್ಟ ಹರ ಬಲಮುರಿ ಗಣಪತಿ ದೇವಸ್ಥಾನದ ರಜತ ಮಹೋತ್ಸವ ಕಾರ್ಯಕ್ರಮ ದಲ್ಲಿ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ, ದೇವರಾಜ್‌ ಶೆಟ್ಟಿ ಇದ್ದರು.--------------------------------

Share this article