ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಆರಂಭವೇ ಆಗಿಲ್ಲ

KannadaprabhaNewsNetwork |  
Published : Mar 04, 2025, 12:34 AM IST
ಸಿಕೆಬಿ- 3    ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ   ಕ್ಷೇತ್ರದ ಜನರಿಗಾಗಿ ನಡೆಸಿದ ಜನತಾದರ್ಶನ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ  ಸಂಸದ ಡಾ.ಕೆ. ಸುಧಾಕರ್  ಜನತೆಯ ಅಹವಾಲು ಸ್ವೀಕರಿಸಿದರು | Kannada Prabha

ಸಾರಾಂಶ

ಆರ್ಥಿಕವಾಗಿ ದಿವಾಳಿಯಾಗಿರುವ ಈ ಸರ್ಕಾರ ಇರುವ ಅಧಿಕಾರಿಗಳಿಗೆ ಸಂಬಳ ಕೊಡಲು ಹಣವಿಲ್ಲ, ಹೊಸ ಯೋಜನೆ ಮಾಡಲು ಹಣವಿಲ್ಲ. ಪರಿಸ್ಥಿತಿ ಹೀಗಿರುವಲ್ಲಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವುದು ಆಶ್ಚರ್ಯ ತರುವ ವಿಚಾರವೇನೂ ಅಲ್ಲ. ಈ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಸರಾಸರಿ ಸುಮಾರು 75 ಸಾವಿರ ಕೋಟಿ ಸಾಲ ಮಾಡಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮ್ಮದು ಜನಪರ ಸರ್ಕಾರ ಎನ್ನುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಸಮೀಪಿಸಿದರೂ ಕೂಡ ಅಭಿವೃದ್ಧಿಯ ಪರ್ವ ಆರಂಭವೇ ಆಗಿಲ್ಲ. ಗ್ಯಾರಂಟಿಗಳ ಭಾರದಲ್ಲಿ ನಲುಗುತ್ತಿರುವ ಈ ಸರ್ಕಾರ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿಯ ಹಣವನ್ನು ದುರ್ಬಳಕೆ ಮಾಡಿಕೊಂಡು ಆವರ್ಗಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಕಿಡಿ ಕಾರಿದರು.

ನಗರ ಹೊರವಲಯದ ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಸೋಮವಾರ ಕ್ಷೇತ್ರದ ಜನರಿಗಾಗಿ ನಡೆಸಿದ ಜನತಾದರ್ಶನ ಮತ್ತು ಅಹವಾಲು ಸ್ವೀಕಾರದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಸಾಲ ಹೊರಿಸುವ ಸರ್ಕಾರ

ಕರ್ನಾಟಕದ ನವ ನಿರ್ಮಾಣಕ್ಕೆ ಗ್ಯಾರಂಟಿ ಸರ್ಕಾರ ಎಂದು ಪ್ರಚಾರ ಪಡೆಯುವ ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಮಂಡಲಕ್ಕೆ ಕರ್ನಾಟಕದ ಜನ ಹಿಡಿಶಾಪ ಹಾಕುತ್ತಿರುವುದು ಗಮನಕ್ಕೆ ಬಂದಂತಿಲ್ಲ. ಆರ್ಥಿಕವಾಗಿ ದಿವಾಳಿಯಾಗಿರುವ ಈ ಸರ್ಕಾರ ಇರುವ ಅಧಿಕಾರಿಗಳಿಗೆ ಸಂಬಳ ಕೊಡಲು ಹಣವಿಲ್ಲ, ಹೊಸ ಯೋಜನೆ ಮಾಡಲು ಹಣವಿಲ್ಲ. ಪರಿಸ್ಥಿತಿ ಹೀಗಿರುವಲ್ಲಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಮುಂದಾಗಿರುವುದು ಆಶ್ಚರ್ಯ ತರುವ ವಿಚಾರವೇನೂ ಅಲ್ಲ. ಈ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಸರಾಸರಿ ಸುಮಾರು 75 ಸಾವಿರ ಕೋಟಿ ಸಾಲ ಮಾಡಿದೆ ಎಂದರು.

ನಾನು ಸಚಿವನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಬಡವರಿಗೆ ಹಂಚಿಕೆ ಮಾಡಿದ್ದ 22 ಸಾವಿರ ನಿವೇಶನಗಳನ್ನು ಸರಿಯಾದ ರೀತಿಯಲ್ಲಿ ಅಭಿವೃದ್ದಿ ಪಡಿಸಿ ಜನತೆಗೆ ನೀಡಿದರೆ ಎಲ್ಲಿ ಡಾ.ಕೆ.ಸುಧಾಕರ್ ಅವರಿಗೆ ಒಳ್ಳೆಯ ಹೆಸರು ಬರುವುದೋ ಎಂದು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಈ 22 ಸಾವಿರ ಸೈಟುಗಳಿಗೆ ಒಂದು ತಾರ್ಕಿಕ ಅಂತ್ಯ ಕಾಣಿಸಲು ಹೋರಾಟ ಮಾಡಿಯಾದರೂ ಫಲಾನುಭವಿಗಳಿಗೆ ನ್ಯಾಯಕೊಡಿಸುತ್ತೇನೆ ಎಂದರು.ರಂಗಮಂದಿರ ಹೆಸರು ಬದಲಾಗಿದೆ

ತಮ್ಮ ಅವಧಿಯಲ್ಲಿ ರಂಗ ಕಲಾವಿಧರಿಗೆ ನೆರವು ನೀಡುವ ಉದ್ದೇಶದಿಂದ ರಂಗಮಂದಿರ ಕಟ್ಟಲು ಪ್ರಾರಂಭಿಸಿದೆ. ಈ ವಿಚಾರದಲ್ಲಿ ಅಂದಿನ ಸಂಸದ ಡಾ.ವೀರಪ್ಪ ಮೊಯಿಲಿ ಅವರ ಸಹಕಾರವನ್ನು ನೆನಪು ಮಾಡಿಕೊಳ್ಳುತ್ತೇನೆ. ಇದಕ್ಕೆ ರಂಗಮಂದಿರ ಎಂದು ಹೆಸರು ಇಟ್ಟಿದ್ದೆವು. ಆದರೆ ಈಗ ಅದಕ್ಕೆ ಕನ್ನಡ ಭವನ ಅಂತ ಹೆಸರಿಟ್ಟಿದ್ದಾರಲ್ಲ. ಉಸ್ತುವಾರಿ ಸಚಿವರಿಗೆ ಅಲ್ಲಿನ ಚರಿತ್ರೆ ಗೊತ್ತಾ. ಇದು ಇವರು ಚಿಂತಾಮಣಿಯಿಂದ ಚಿಕ್ಕಬಳ್ಳಾಪುರಕ್ಕೆ ಬಂದು ಮಾಡಿರುವ ಉದ್ಧಾರ ಕಾರ್ಯ ಎಂದು ಗುಡುಗಿದರು.ಗುತ್ತಿಗೆದಾರರಿಗೆ ಅನುಕೂಲ

ಇಲ್ಲಿನ ಎಂಎಲ್‌ಎ ಮತ್ತು ಮಂತ್ರಿಗೆ ನಗರೋತ್ಥಾನದಲ್ಲಿ ನಮ್ಮ ಕಾಲದಲ್ಲಿ ಅಭಿವೃದ್ದಿಗೆ ಹಣ ನೀಡಿದ್ದರೂ ಈವರೆಗೆ ಕಾಮಗಾರಿ ಪ್ರಾರಂಭಿಸಲಾಗಿಲ್ಲ. ಕೇಂದ್ರದ ಸಿಆರ್‌ಎಫ್ ಅನುದಾನದಲ್ಲಿ ಪ್ರತಿ ಕ್ಷೇತ್ರಕ್ಕೆ 6 ಕೋಟಿ ರೂಪಾಯಿ ಅನುದಾನ ಬರುತ್ತದೆ. ಇಲ್ಲಿನ ಶಾಸಕರು ಯಾವುದಾರೂ ಹೊಸ ರಸ್ತೆಗೆ ಅನುದಾನ ಬಳಸಿಕೊಳ್ಳುವ ಬದಲಿಗೆ ಗುತ್ತಿಗೆದಾರರಿಗೆ ಅನುಕೂಲ ಮಾಡಲು ಚೆನ್ನಾಗಿರುವ ರಸ್ತೆಗೆ ಮತ್ತೆ ಟಾರು ಹಾಕಲು ಈ ಅನುದಾನ ಬಳಸಲು ಬೇಡಿಕೆ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.

ಹಕ್ಕಿಜ್ವರದ ಬಗ್ಗೆ ಭಯ ಬೇಡ

ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಜನತೆ ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಒಂದು ಟಾಸ್ಕ್ ಪೋರ್ಸ್ ರಚನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವರದಹಳ್ಳಿ ಗ್ರಾಮದಲ್ಲಿ ಕೇವಲ 30 ನಾಟಿಕೋಟಿಗಳಲ್ಲಿ ಈ ರೋಗ ಕಾಣಿಸಿಕೊಂಡಿತ್ತು ಎಂದು ಲ್ಯಾಬ್ ವರದಿ ತಿಳಿಸಿದೆ.ಕೋಳಿಮಾಂಸ ಬೇಯಿಸಿ ತಿನ್ನುವುದರಿಂದ ಯಾವ ಸಮಸ್ಯೆಯೂ ಇಲ್ಲ. ಕೋಳಿಸಾಕಣೆದಾರರಿಗೆ ಪ್ರತಿ ಕೋಳಿಗೆ 400 ರುಪಾಯಿ ಪರಿಹಾರ ಕೊಡಬೇಕು ಎಂದು ಆಗ್ರಹಿಸುತ್ತೇನೆ ಎಂದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ