ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು. ಹೊಸ ಜಿಲ್ಲೆ ಘೋಷಿಸೋಣ ಎನ್ನುವ ಮನಸ್ಸಿನಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಗೆ ಬಂದಿದ್ದರು. ಎಲ್ಲರನ್ನೂ ಕರೆದು ಮಾತನಾಡೋಣ ಎಂದುಕೊಂಡಿದ್ದರು. ಎಲ್ಲರೂ ನಿಯೋಗ ತೆಗೆದುಕೊಂಡು ಬಂದಿದ್ದರಿಂದ ಜಿಲ್ಲಾ ವಿಭಜನೆ ಬಗ್ಗೆ ಇನ್ನೂ ಚಿಂತನೆ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು. ಹೊಸ ಜಿಲ್ಲೆ ಘೋಷಿಸೋಣ ಎನ್ನುವ ಮನಸ್ಸಿನಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿಗೆ ಬಂದಿದ್ದರು. ಎಲ್ಲರನ್ನೂ ಕರೆದು ಮಾತನಾಡೋಣ ಎಂದುಕೊಂಡಿದ್ದರು. ಎಲ್ಲರೂ ನಿಯೋಗ ತೆಗೆದುಕೊಂಡು ಬಂದಿದ್ದರಿಂದ ಜಿಲ್ಲಾ ವಿಭಜನೆ ಬಗ್ಗೆ ಇನ್ನೂ ಚಿಂತನೆ ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದರು.ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು ಎನ್ನುವ ಇರಾದೆ ಮುಖ್ಯಮಂತ್ರಿಗಳಿಗಿದೆ. ಬೆಳಗಾವಿ ತಾಲೂಕು ಹನ್ನೊಂದುವರೇ ಲಕ್ಷ ಜನಸಂಖ್ಯೆ ಹೊಂದಿದೆ. ಇಷ್ಟು ಜನರಿಗೆ ಒಬ್ಬರೇ ತಹಸೀಲ್ದಾರ್ ಇದ್ದಾರೆ. ಕೆಲಸ ಮಾಡಲು ಬಹಳಷ್ಟು ತೊಂದರೆ ಆಗುತ್ತದೆ. ನಮ್ಮ ಜಿಲ್ಲೆ 15 ತಾಲೂಕು, 18 ವಿಧಾನಸಭೆ ಕ್ಷೇತ್ರ ಹೊಂದಿದೆ ಎಂದರು.
ಅಲ್ಲದೇ, ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಅನುಮೋದನೆ ನೀಡಿದ್ದಾರೆ. ಈ ಸೋಮವಾರದಿಂದ ಶನಿವಾರದೊಳಗೆ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟದ ವಿಸ್ತರಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಇವೆರಡೂ ವಿಚಾರಗಳ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ಹೈಕಮಾಂಡ್ ಇದನ್ನು ನಿರ್ಧರಿಸುತ್ತದೆ. ಅದು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.ಈ ಭಾಗದ ಅಭಿವೃದ್ಧಿ ಪರವಾಗಿ ಬಹಳಷ್ಟು ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಟ್ಟಿದ್ದೇವೆ. ಈ ಭಾಗದ ಬಹಳಷ್ಟು ದಿನಗಳ ಬೇಡಿಕೆಯಾಗಿರುವ ಅನೇಕ ಯೋಜನೆಗಳಿಗೆ ಚಾಲನೆ ಕೊಡಬೇಕು. ಆದರೆ, ಏನು ಮಾಡುವುದು ಕೆಲವರು ರಾಜಕಾರಣ ಮಾಡಬೇಕು ಅಂತಾನೇ ಬರುತ್ತಾರೆ. ಕೆಲವರು ಮಾಧ್ಯಮದ ಮೂಲಕ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ನಾನು ಅಧಿವೇಶನಕ್ಕೂ ಮೊದಲ ದಿನವೇ ಹೇಳಿದ್ದೆ, ರಾಜಕಾರಣ ಮಾಡುವುದು ಬಿಟ್ಟು ಉತ್ತರ ಕರ್ನಾಟಕ ಅಭಿವೃದ್ಧಿ ಪರವಾಗಿ ಚಿಂತನೆ ಮಾಡೋಣ ಅಂತ. ಆದರೆ, ಚರ್ಚೆಯಿಂದ ತೃಪ್ತಿಯೂ ಆಗಿಲ್ಲ, ಅತೃಪ್ತಿಯೂ ಆಗಿಲ್ಲ. ಒಂದು ರೀತಿ 50:50 ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬರೀ ಚರ್ಚೆ ಆಗಿದೆ ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ಯಾರು ಯಾವ ಕಣ್ಣಿನಿಂದ ನೋಡಿದರೆ ಏನು ಕಾಣಿಸಬೇಕೊ ಅದು ಕಾಣಿಸುತ್ತದೆ. ನನ್ನ ಪ್ರಕಾರ ನಮ್ಮ ಸರ್ಕಾರ ಈ ಭಾಗದ ಅಭಿವೃದ್ಧಿ ಪರವಾಗಿ ಅನೇಕ ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದೆ ಎಂದು ಸಮರ್ಥಿಸಿಕೊಂಡರು.ಬಾಗಲಕೋಟೆಯ ಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬುದ್ಧಿಮಾಂಧ್ಯ ಬಾಲಕ ದೀಪಕ ರಾಠೋಡ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ. ಇದೊಂದು ಅಮಾನವೀಯ ಘಟನೆ. ಮಕ್ಕಳ ರಕ್ಷಣಾ ಹಕ್ಕುಗಳೆಲ್ಲ ಉಲ್ಲಂಘನೆಯಾಗಿವೆ. ಈಗ ದೈಹಿಕವಾಗಿ ಸದೃಢವಿರುವ ಮಕ್ಕಳನ್ನು ಹೊಡೆದರೆ ಅಪರಾಧ ಎಂದು ಪರಿಗಣಿಸಿ ಶಿಕ್ಷೆ ನೀಡುತ್ತೇವೆ. ಹೀಗಿರುವಾಗ, ಬುದ್ಧಿಮಾಂಧ್ಯ ಮಕ್ಕಳ ಮೇಲಿನ ಹಲ್ಲೆ ಸಹಿಸುವ ಮಾತೇ ಇಲ್ಲ ಎಂದು ಎಚ್ಚರಿಸಿದರು.ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ ಬಾಗಲಕೋಟೆಯಲ್ಲಿ ಅನಧಿಕೃತವಾಗಿ ಸಂಸ್ಥೆ ತೆರೆದಿದ್ದಾರೆ. ಸಮಾಜಕ್ಕೆ ಕಳಂಕ ತರುವ ಈ ಘಟನೆಯಿಂದ ನಮಗೂ ಮುಜುಗರವಾಗುತ್ತದೆ. ಘಟನೆ ಬೆಳಕಿಗೆ ಬಂದ ತಕ್ಷಣ ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿದ್ದೇನೆ. ಜಿಲ್ಲಾಧಿಕಾರಿ ಜತೆಗೆ ಮಾತನಾಡಿ, ವಸತಿ ಶಾಲೆ ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇನೆ. ಅಲ್ಲಿನ ಬೇರೆ ಮಕ್ಕಳನ್ನೂ ಸರ್ಕಾರಿ ಅನುದಾನಿತ ಮಕ್ಕಳ ರಕ್ಷಣಾ ನಿಲಯಕ್ಕೆ ಸ್ಥಳಾಂತರಿಸುತ್ತೇವೆ. ಪಾಲಕರ ಅನುಮತಿ ಮೇರೆಗೆ ಈ ಕ್ರಮ ವಹಿಸುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
----ಕೋಟ್‌ಬರುವ ದಿನಗಳಲ್ಲಿ ಹೊಸದಾಗಿ 3 ತಾಲೂಕು ಮಾಡುವ ಎಲ್ಲ ಲಕ್ಷಣಗಳಿವೆ. 2-3 ಜಿಲ್ಲೆ ಮಾಡಬೇಕು ಎನ್ನುವ ಬಗ್ಗೆ ನನ್ನ ಮತ್ತು ಸತೀಶ ಜಾರಕಿಹೊಳಿ ಅವರ ಮುಂದೆ ಮುಖ್ಯಮಂತ್ರಿಗಳು ಅಧಿವೇಶನದ ಮೊದಲ ದಿನವೇ ಚರ್ಚಿಸಿದ್ದರು. ನಮ್ಮದು ಜಿಲ್ಲೆ ಆಗಬೇಕು ಅಂತ ಎಲ್ಲರೂ ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಬಂದರು. ಎಲ್ಲರಿಗೂ ಅವರ ತಾಲೂಕು ಜಿಲ್ಲೆ ಆಗಬೇಕು ಎನ್ನುವ ಆಸೆ ಸಹಜ. ಆದ್ದರಿಂದ ಅಳೆದು ತೂಗಿ ಜಿಲ್ಲಾ ವಿಭಜನೆ ಮಾಡಲಿದ್ದಾರೆ.ಲಕ್ಷ್ಮೀ ಹೆಬ್ಬಾಳಕರ, ಸಚಿವೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
