ಕನ್ನಡಪ್ರಭ ವಾರ್ತೆ ಬೆಳಗಾವಿ ಭಾರತ ಪೋಲಿಯೋ ಮುಕ್ತ ದೇಶವಾಗಿದ್ದು, ಎರಡು ಹನಿ ಪೋಲಿಯೋ ಲಸಿಕೆ ಮಕ್ಕಳ ಅಂಗವೈಕಲ್ಯತೆಯನ್ನು ತಪ್ಪಿಸಿ ಮಕ್ಕಳ ಸರ್ವತೋಮುಖ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಭಾರತ ಪೋಲಿಯೋ ಮುಕ್ತ ದೇಶವಾಗಿದ್ದು, ಎರಡು ಹನಿ ಪೋಲಿಯೋ ಲಸಿಕೆ ಮಕ್ಕಳ ಅಂಗವೈಕಲ್ಯತೆಯನ್ನು ತಪ್ಪಿಸಿ ಮಕ್ಕಳ ಸರ್ವತೋಮುಖ ಹಾಗೂ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಗೋಕಾಕ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ ಭಾನುವಾರ ಜರುಗಿದ ಬೆಳಗಾವಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನಕ್ಕೆ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹನಿ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇತರೆ ದೇಶಗಳಲ್ಲಿ ಪೋಲಿಯೋ ಸೋಂಕು ಇರುವುದರಿಂದ ಮಕ್ಕಳ ಹಿತಾಸಕ್ತಿಗಾಗಿ ಸರ್ಕಾರ ಪೋಲಿಯೋ ಅಭಿಯಾನ ನಡೆಸಿಕೊಂಡು ಬರುತ್ತಿದೆ. ದೇಶದಲ್ಲಿ 2011ರಲ್ಲಿ ಕೊನೆಯದಾಗಿ ಪೋಲಿಯೋ ಪ್ರಕರಣ ಕಂಡು ಬಂದಿದ್ದು, ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ 1998 ರಲ್ಲಿ ಕೊನೆಯ ಪ್ರಕರಣ ದೃಢಪಟ್ಟಿತ್ತು. ಆ ನಂತರ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ಹೇಳಿದರು.
ಪಲ್ಸ್ ಪೋಲಿಯೋ ಅಭಿಯಾನದಲ್ಲಿ ಭಾಗವಹಿಸಿ ತಪ್ಪದೆ ಮಕ್ಕಳಿಗೆ ಪೋಲಿಯೋ ಲಸಿಕೆ ಕೊಡಿಸಬೇಕು. ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಸಾರ್ವಜನಿಕರ ಸಹಕಾರದೊಂದಿಗೆ ಶೇ.100 ಸಾಧನೆಗೆ ಶ್ರಮಿಸುವಂತೆ ಸೂಚನೆ ನೀಡಿದರು.ಗೋಕಾಕ ಸಾರ್ವಜನಿಕ ಆಸ್ಪತ್ರೆ ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆ ಮಾಡಲು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಈಶ್ವರಪ್ಪ ಗಡಾದ ಮಾತನಾಡಿ, ಪೋಲಿಯೋ ಲಸಿಕೆಯನ್ನು ಬಾಯಿ ಮೂಲಕ ಹಾಗೂ ಲಸಿಕೆಯೊಂದಿಗೆ ಮಗುವಿನ 6 ವಾರಕ್ಕೆ ಮತ್ತು 14 ವಾರಕ್ಕೆ ಇಂಜೆಕ್ಷನ್ ಮೂಲಕ ಕೂಡ ಲಸಿಕೆ ನೀಡುತ್ತಿರುವ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಸಂತಾನೋತ್ಪತ್ತಿ ತಾಯಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿಗಳಾದ ಡಾ.ಎಸ್.ಎಸ್.ಸಾಯನ್ನವರ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಬಿ.ಈಶ್ವರಪ್ಪಗೋಳ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ.ಬಸ್ಸಾಪೂರ, ಜಿಲ್ಲಾ ನೋಡಲ್ ಅಧಿಕಾರಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ರೋಟರಿ, ಲೈಯನ್ಸ್, ಸ್ಕೌಟ್ಸ್, ಗೈಡ್ಸ್, ಮುಂತಾದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಮತ್ತು ತಾಯಂದಿರು, ಮಕ್ಕಳು, ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು.