ಮಂಡ್ಯ ಮಂಜುನಾಥ
ಕನ್ನಡ ತಾಯಿ ನಮಗೆ ಬದುಕು ಕಟ್ಟಿಕೊಟ್ಟರೆ, ನೆಲೆಯೇ ಇಲ್ಲದಿದ್ದ ಸಮಯದಲ್ಲಿ ಅಂಬರೀಶ್ ನಮಗೆ ಮನೆ ಕಟ್ಟಿಕೊಟ್ಟರು. ಕನ್ನಡ ಸೇವೆಯಲ್ಲಿ ನಮಗೆ ತೃಪ್ತಿ ದೊರಕಿದೆ ಎಂದು ಬೆಂಗಳೂರಿನ ಶಂಕರ್ ಮತ್ತು ಗೀತಾ ಹೇಳುವಾಗ ಕಣ್ಣಿನಲ್ಲಿ ಖುಷಿ ಜಿನುಗುತ್ತಿತ್ತು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸ್ಥಳದಲ್ಲಿ ಕನ್ನಡ ಬಾವುಟ, ಬ್ಯಾನರ್, ಶಾಲು, ಸ್ಟಿಕರ್, ಬ್ಯಾಡ್ಜ್‌ಗಳನ್ನು ಮಾರುತಿ ಕಾರಿನಲ್ಲಿಟ್ಟು ಮಾರಾಟ ಮಾಡುತ್ತಾ ಉತ್ಸಾಹದಿಂದಲೇ ‘ಕನ್ನಡಪ್ರಭ’ದೊಂದಿಗೆ ಸಂಭ್ರಮ ಹಂಚಿಕೊಂಡರು.ನಾವು 25 ವರ್ಷಗಳಿಂದ ಕನ್ನಡ ಬಾವುಟ, ಶಾಲುಗಳು ಸೇರಿ ಪ್ರಚಾರಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಕನ್ನಡ ಕಾರ್ಯಕ್ರಮಗಳು, ಅಭಿಮಾನಿ ಸಂಘದವರು, ಚಿತ್ರರಂಗದವರು ಆಯೋಜಿಸುವ ಕಾರ್ಯಕ್ರಮಗಳು, ಕನ್ನಡ ರಾಜ್ಯೋತ್ಸವ, ಸಾಹಿತ್ಯ ಸಮ್ಮೇಳನಗಳು, ಕನ್ನಡ ಭಾಷಿಗರು ಸೇರುವ ಕಡೆಗಳಲ್ಲೆಲ್ಲ ನಾವು ಹಾಜರಿರುತ್ತೇವೆ.
ಕನ್ನಡ ಪ್ರಚಾರ ಸಾಮಗ್ರಿಗಳ ಮಾರಾಟ ಎಲ್ಲೆಡೆ ಉತ್ತಮವಾಗಿ ನಡೆಯುತ್ತದೆ. ಜೀವನಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ, ನಮಗೆ ಮನೆಯಿಲ್ಲವೆಂಬ ಕೊರಗು ಕಾಡುತ್ತಿತ್ತು.
ನಮ್ಮ ಸಂಕಷ್ಟಕ್ಕೆ ತಕ್ಷಣವೇ ಸ್ಪಂದಿಸಿದ ಅಂಬರೀಶ್ ಬೆಂಗಳೂರಿನ ತಾವರೆಕೆರೆಯಲ್ಲಿ ಜಾಗವನ್ನೂ ಕೊಟ್ಟು ಮನೆಯನ್ನು ಕಟ್ಟಿಕೊಟ್ಟರು ಎಂದು ಹೇಳುತ್ತಾರೆ. ಕನ್ನಡ ಪ್ರಚಾರ ಸಾಮಗ್ರಿಗಳ ಮಾರಾಟದಲ್ಲೇ ನಮಗೆ ತೃಪ್ತಿ ಇದೆ. ನಮ್ಮ ಜೀವನದ ಕೊನೆಯ ಉಸಿರಿರುವವರೆಗೂ ಕನ್ನಡ ಸೇವೆನಿರಂತರವಾಗಿರುತ್ತದೆ ಎಂದು ತೃಪ್ತ ಭಾವದಿಂದ ಹೇಳಿದರು.ನಾವು ನಿನ್ನೆ ಸಮ್ಮೇಳನ ನಡೆಯುವ ಜಾಗಕ್ಕೆ ಬಂದೆವು. ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ. ಕನ್ನಡಾಭಿಮಾನಿಗಳೆಲ್ಲರೂ ಬಾವುಟ, ಶಾಲು ಇನ್ನಿತರ ಪ್ರಚಾರ ಸಾಮಗ್ರಿಗಳನ್ನು ಕೊಳ್ಳುತ್ತಿದ್ದಾರೆ. ಭಾನುವಾರ ಸಂಜೆಯವರೆಗೂ ವ್ಯಾಪಾರ ಮಾಡಿ ಬೆಂಗಳೂರಿಗೆ ಮರಳುತ್ತೇವೆ. ಕನ್ನಡ ಬಾವುಟ, ಶಾಲು ಸೇರಿದಂತೆ ಇತರ ಸಾಮಗ್ರಿಗಳ ಮಾರಾಟದಲ್ಲೇ ಜೀವನದಲ್ಲಿ ಆನಂದ ಕಂಡಿದ್ದೇವೆ.