ತುಂಗಭದ್ರಾ ನದಿಯಿಂದ ಕೊಮಾರನಹಳ್ಳಿ, ದೇವರಬೆಳಕೆರೆ, ಬನ್ನಿಕೋಡು, ಬಾತಿ, ಕೊಂಡಜ್ಜಿ ಸೇರಿದಂತೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭವಾದರೆ ಮಾತ್ರವೇ ರೈತರು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದ್ದಾರೆ.
- ಹನಗವಾಡಿಯಲ್ಲಿ ಹೋರಾಟ ಸಮಿತಿ ಪೂರ್ವಸಿದ್ಧತಾ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್
- - -
ಕನ್ನಡಪ್ರಭ ವಾರ್ತೆ ಹರಿಹರ
ತುಂಗಭದ್ರಾ ನದಿಯಿಂದ ಕೊಮಾರನಹಳ್ಳಿ, ದೇವರಬೆಳಕೆರೆ, ಬನ್ನಿಕೋಡು, ಬಾತಿ, ಕೊಂಡಜ್ಜಿ ಸೇರಿದಂತೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭವಾದರೆ ಮಾತ್ರವೇ ರೈತರು, ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.
ತಾಲೂಕಿನ ಹನಗವಾಡಿ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಹರಿಹರ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸುವ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಕಾಲಕ್ಕೆ ಮಳೆಯಾಗದೇ ಇರುವುದರಿಂದ ಕುಡಿಯುವ ನೀರಿನ ಅಭಾವ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಎಂದರೆ ಕ್ಷೇತ್ರದ ಎಲ್ಲ ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವುದು ಎಂದರು.
ಭದ್ರಾ ಡ್ಯಾಂನಿಂದ ಈಗಾಗಲೇ ಮಳೆಗಾಲ ಸಮಯದ ನೀರನ್ನು ಹರಿಸುತ್ತಿದ್ದರೂ ಕೊನೆಯ ಭಾಗದ ರೈತರಿಗೆ ನೀರು ತಲುಪಿಲ್ಲ. ಇನ್ನೂ ಬೇಸಿಗೆ ಸಮಯಕ್ಕೆ ನೀರು ಸಿಗುವ ಭರವಸೆ ಕಳೆದಹೋಗಿದೆ. ಭದ್ರಾ ಕಾಲುವೆಯಿಂದ ಬೇರೆ ಬೇರೆ ಹೊಸ ಜಿಲ್ಲೆಗಳಿಗೆ ನೀರನ್ನು ಹರಿಸುತ್ತಿರುವುದರಿಂದ ಭದ್ರಾ ಅಚ್ಚುಕಟ್ಟಿನ ರೈತರು ಮುಂದಿನ ದಿನಗಳಲ್ಲಿ ಭದ್ರಾ ನೀರನ್ನು ಪಡೆಯುವುದು ಮರೀಚಿಕೆ ಆಗಲಿದೆ ಎಂದರು.
ಆದ್ದರಿಂದ ಎಲ್ಲ ರೈತರು ಒಗ್ಗಟ್ಟಾಗಿ ಕುಡಿಯುವ ನೀರಿಗಾಗಿ ಹರಿಹರ ತಾಲೂಕಿನ ಎಲ್ಲ ಕೆರೆಗಳಿಗೆ ಭದ್ರಾ ನೀರನ್ನು ತುಂಬಿಸುವ ಯೋಜನೆ ಪ್ರಾರಂಭಿಸಲು ಹರಿಹರ ತಾಲೂಕಿನ ಎಲ್ಲ ಸಮಾಜದ ಮಠಾಧೀಶರ ನೇತೃತ್ವದಲ್ಲಿ ಸಭೆ ಸೇರಿ ಅವರ ಸಮ್ಮುಖದಲ್ಲಿಯೇ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಈ ಹೋರಾಟ ಯಾವುದೇ ಪಕ್ಷ, ಜಾತಿ, ಧರ್ಮಕ್ಕೆ ಸೀಮಿತವಾದದ್ದಲ್ಲ, ಬದಲಿಗೆ ರೈತರ ಅಭಿವೃದ್ಧಿಗಾಗಿ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ್ ಮಾತನಾಡಿ, ಈಗಾಗಲೇ ಭೈರನಪಾದ ಯೋಜನೆಗೆ ಡಿಪಿಆರ್ ಮಾಡಿಸಲಾಗಿದೆ. ಶೀಘ್ರವಾಗಿ ಕಾಮಗಾರಿ ಪ್ರಾರಂಭವಾಗಲಿದೆ. ಈ ಯೋಜನೆಯಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ನೀರು ಸಿಗಲಿದೆ. ಉಳಿದ ರೈತರಿಗೆ ನೀರಿನ ಸಮಸ್ಯೆ ಉದ್ಭವ ಆಗುವ ಕಾರಣ ಶಾಸಕರ ಸಲಹೆಯಂತೆ ತಾಲೂಕಿನ ಎಲ್ಲ ಊರುಗಳಲ್ಲಿನ ಕೆರೆಗಳನ್ನು ತುಂಬಿಸಿದರೆ ಕುಡಿಯುವ ನೀರಿಗೆ ಪರಿಹಾರ ಸಿಗುತ್ತದೆ. ವಿವಿಧ ಪಕ್ಷದ ನಾಯಕರು ಈ ರೈತರ ಪರವಾದ ಹೋರಾಟಕ್ಕೆ ಸಹಕಾರ ನೀಡಬೇಕು ಎಂದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಪೂಜಾರ್ ಮಾತನಾಡಿ, ರೈತರು ದೇಶದ ಆಸ್ತಿ. ಅವರು ಸಂತೋಷವಾಗಿ ಇರಬೇಕಾದರೆ ಸಕಾಲಕ್ಕೆ ಮಳೆ- ಬೆಳೆಗಳು ಆಗಬೇಕು. ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ನಾಲೆಗಳಲ್ಲಿ ನೀರು ಹರಿಯದೇ ಇರುವುದು ಒಂದು ಕಡೆಯಾದರೆ ಸರ್ಕಾರ ತಮ್ಮ ಲಾಭಕ್ಕೆ ನೀರನ್ನು ಬೇರೆಡೆ ಹರಿಸುತ್ತಿರುವುದು ಮತ್ತೊಂದು ಕಾರಣ. ಈ ರೀತಿಯ ಸಮಸ್ಯೆಗಳು ಉದ್ಭವವಾದಾಗ ರೈತರು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯ. ರೈತರ ಯಾವುದೇ ಹೋರಾಟಗಳು ನಡೆದಾಗ ಎಲ್ಲರೂ ಭಾಗವಹಿಸಿ ಬೆಂಬಲಿಸಬೇಕು ಆಗ ಮಾತ್ರ ಹೋರಾಟಕ್ಕೆ ಜಯ ಸಿಗುತ್ತದೆ ಎಂದ ಅವರು, ಕೆರೆಗಳಿಗೆ ನೀರು ತುಂಬಿಸುವ ಹೋರಾಟಕ್ಕೆ ಸಿದ್ಧ ಎಂದರು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ ಮಾತನಾಡಿ, ಒಂದು ಕಾಲದಲ್ಲಿ ಹರಪನಹಳ್ಳಿ ಭಾಗವು ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸೇರುತ್ತಿತ್ತು. ಕಾಲಕ್ರಮೇಣ ಆ ಭಾಗಕ್ಕೆ ನೀರು ತಲುಪದೇ ಹರಿಹರ ಭಾಗಕ್ಕೆ ನೀರು ತಲುಪುದು ಕೊನೆಯಾಯಿತು. ಆದರೆ ಇಂದು ಹರಿಹರ ಭಾಗಕ್ಕೂ ಭದ್ರಾ ನೀರು ತಲುಪುವುದು ಕಷ್ಟವಾಗಿದೆ. ಈ ನಿಟ್ಟಿನಲ್ಲಿ ರೈತರು ಒಗ್ಗಟ್ಟಾಗಿ ಹೋರಾಟ ಮಾಡುವ ಮೂಲಕ ತಾಲೂಕಿನ ಎಲ್ಲ ಗ್ರಾಮಗಳಲ್ಲಿರುವ ಕೆರೆಗಳಿಗೆ ಕುಡಿಯಲು ನೀರು ತುಂಬಿಸುವ ಯೋಜನೆಗೆ ಶ್ರಮಿಸಬೇಕಾಗಿದೆ. ಹೋರಾಟದ ಸಮಯದಲ್ಲಿ ನಮ್ಮ ಮೇಲೆ ಯಾವುದೇ ಪ್ರಭಾವಗಳು ಬಂದರೂ ನಾವುಗಳು ಯಾವುದಕ್ಕೂ ಜಗ್ಗದೇ ಜಯ ಸಾಧಿಸಬೇಕು ಎಂದು ರೈತರಿಗೆ ಕರೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಹನಗವಾಡಿ, ಹರಗನಹಳ್ಳಿ, ಕೋಡಿಹಳ್ಳಿ, ಬೆಳ್ಳೂಡಿ, ಶಿವನಹಳ್ಳಿ, ದೇವರಬೆಳಕೆರೆ, ಬೇವಿನಹಳ್ಳಿ, ಸೇರಿದಂತೆ ಅನೇಕ ಹಳ್ಳಿಗಳ ಜನರು ಭಾಗವಹಿಸಿದ್ದರು.
- - -
(ಬಾಕ್ಸ್)
ಹರಿಹರ ತಾಲೂಕಿನಲ್ಲಿರುವ ಎಲ್ಲ ಸಮಾಜಗಳ ಮಠಾಧೀಶರನ್ನು ಒಂದೆಡೆ ಸೇರಿಸಿ ಅವರ ಸಲಹೆ ಪಡೆದು, ಅವರದ್ದೇ ಮಾರ್ಗದರ್ಶನದಲ್ಲಿ ಎಲ್ಲ ಗ್ರಾಮಗಳಲ್ಲಿರುವ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಹರಿಸುವ ಮೂಲಕ ರೈತರಿಗೆ ಹಾಗೂ ಜಾನುವಾರುಗಳ ಉಳಿವಿಗೆ ಹೋರಾಟ ಮಾಡಲು ಮುಂದಾಗಬೇಕು ಎಂಬ ಅಂತಿಮ ತೀರ್ಮಾನವನ್ನು ಪೂರ್ವಭಾವಿ ಸಭೆಯಲ್ಲಿ ಕೈಗೊಳ್ಳಲಾಯಿತು.
- - -
-1ಎಚ್.ಆರ್.ಆರ್.1:
ಹನಗವಾಡಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.