ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್‍ಐಆರ್ ಸಂಬಂಧ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾರಾದರೂ ದುರುದ್ದೇಶ ಪೂರ್ವಕವಾಗಿ, ನಿರ್ಧಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಸುಳ್ಳು ಮಾಹಿತಿ ನೀಡಿ ‘ಫಾರಂ-7’ ಹೆಸರುಗಳನ್ನು ಕೈಬಿಡಲು ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರೆ, ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಎಫ್‍ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಅನಗತ್ಯವಾಗಿ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಸಮಯ ವ್ಯರ್ಥ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು.ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆ, ತಿದ್ದುಪಡಿ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆ. ಸಲ್ಲಿಕೆಯಾಗಿರುವ ಪ್ರತಿಯೊಂದು ಅರ್ಜಿದಾರರಿಗೂ ಮೊದಲಿಗೆ ನೋಟಿಸ್ ಜಾರಿ ಮಾಡಲಾಗುವುದು. ನಂತರ ದಾಖಲೆಗಳ ಸಮೇತ ವಿಚಾರಣೆಗೆ ಆಹ್ವಾನಿಸಿ, ಸೂಕ್ತ ಪರಿಶೀಲನೆ ನಡೆಸಲಾಗುತ್ತದೆ. ಸದ್ಯ ಸಲ್ಲಿಕೆಯಾಗಿರುವ ಸುಮಾರು 2,372 ಆಕ್ಷೇಪಣೆ ಅರ್ಜಿಗಳನ್ನು ಸಹಾಯಕ ಮತದಾರರ ನೋಂದಣಾಧಿಕಾರಿಗಳು ಕೂಲಂಕುಷವಾಗಿ ಪರಿಶೀಲಿಸಲಿದ್ದಾರೆ. ದಾಖಲೆಗಳು ಸರಿಯಾಗಿದ್ದರೆ ಮಾತ್ರ ಅಂಗೀಕರಿಸಲಾಗುವುದು, ಇಲ್ಲವಾದಲ್ಲಿ ತಿರಸ್ಕರಿಸಲಾಗುವುದು. ಅಂತಿಮವಾಗಿ ಇಡೀ ಪ್ರಕ್ರಿಯೆಯ ಅಂಕಿ-ಅಂಶಗಳನ್ನು ಪಾರದರ್ಶಕವಾಗಿ ಸಾರ್ವಜನಿಕವಾಗಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ರಮ್ಯಾ, ಯಾವುದೇ ಅರ್ಹ ಮತದಾರರ ಹೆಸರನ್ನು ಅನಗತ್ಯವಾಗಿ ಪಟ್ಟಿಯಿಂದ ಕೈಬಿಡಲು ಅವಕಾಶ ನೀಡುವುದಿಲ್ಲ. ಪ್ರತಿಯೊಂದು ಅರ್ಜಿಯ ಮೂಲ ಹಾಗೂ ಸತ್ಯಾಸತ್ಯತೆಯನ್ನು ಅಧಿಕಾರಿಗಳು ಖುದ್ದು ಪರಿಶೀಲಿಸಲಿದ್ದಾರೆ. ಸಾರ್ವಜನಿಕರು ಅಥವಾ ಯಾವುದೇ ವ್ಯಕ್ತಿಗಳು ಚುನಾವಣಾ ಸಿಬ್ಬಂದಿಗೆ ತಪ್ಪು ಮಾಹಿತಿ ನೀಡಿರುವುದು ದೃಢಪಟ್ಟರೆ ಅವರ ಮೇಲೆ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.
ಅರ್ಜಿ ಸಲ್ಲಿಸಿದವರು ಹಾಗೂ ಯಾರ ಹೆಸರು ತೆಗೆಯಲು ಆಕ್ಷೇಪಣೆ ಸಲ್ಲಿಸಲಾಗಿದೆಯೋ ಅವರಿಬ್ಬರಿಗೂ ಕಡ್ಡಾಯವಾಗಿ ನೋಟಿಸ್ ಜಾರಿಗೊಳಿಸಿ, ಖುದ್ದು ವಿಚಾರಣೆ ನಡೆಸಲಾಗುವುದು. ಮತದಾರರು ಮೃತಪಟ್ಟಿದ್ದಾರೆ ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬುದಕ್ಕೆ ಸೂಕ್ತ ದಾಖಲೆಗಳಿದ್ದರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ತಕ್ಷಣವೇ ತಿರಸ್ಕರಿಸಲಾಗುವುದು ಎಂದರು.