ರಾಣಿಬೆನ್ನೂರು: ವಿರೋಧ ಪಕ್ಷದವರು ವಿದೇಶಿ ನಾಯಕರ ಮಾತುಗಳನ್ನು ಕೇಳಿಕೊಂಡು ದೇಶದ ಆಡಳಿತವನ್ನು ಮುನ್ನಡೆಸಲು ಹೋದರೆ ದೇಶವು ಸಂಪೂರ್ಣವಾಗಿ ನಾಶವಾಗುತ್ತದೆ ಮತ್ತು ಪ್ರಜಾಪ್ರಭುತ್ವ ಕೊನೆಗೊಳ್ಳುತ್ತದೆ ಎಂದು ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ.
ಸಂಕನೂರ ಅವರು ಪದವಿ ಪಡೆದು, ಕಾಲೇಜು ಪ್ರಾಧ್ಯಾಪಕರಾಗಿ ಸುಮಾರು 30 ವರ್ಷಗಳಿಗಿಂತ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಅವರು ಪಿ.ಯು.ಸಿ. ಕಾಲೇಜು ಟೀಚರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಮತ್ತು ಕರ್ನಾಟಕದ ಸೈಂಟಿಫಿಕ್ ಅಸೋಸಿಯೇಷನ್ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಎತ್ತಿ ಪರಿಹಾರ ಕಲ್ಪಿಸುವಲ್ಲಿ ಅವರು ಮುಂದಾಗಿದ್ದಾರೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ 15,000 ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿದೆ. ಕೋರ್ಟ್‌ನಿಂದ ಸ್ಟೇ ತಂದಿದ್ದರಿಂದ ನೇಮಕಾತಿಗೆ ಮೂರು ವರ್ಷಗಳ ಕಾಲ ತಡವಾಯಿತು. ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದ್ದು ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಿ ನೌಕರರು ಸರ್ವಸ್ವತಂತ್ರರಾಗಿದ್ದು, ಯಾವುದೇ ರಾಜಕೀಯ ಪಕ್ಷದ ಕಟ್ಟುಪಾಡುಗಳಿಗೆ ಒಳಪಡದೆ ನ್ಯಾಯಸಮ್ಮತವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು. ನೌಕರರು ತಮ್ಮ ಸೇವೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಬೇಕು ಎಂದು ಕರೆ ನೀಡಿದರು.ನಮ್ಮ ಅವಧಿಯಲ್ಲಿ ವರ್ಗಾವಣೆಗಳಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲದೆ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿಯಡಿ ಸಿಗುವ ಹಣಕ್ಕೆ ರಾಜ್ಯ ಸರ್ಕಾರವು ತನ್ನ ಪಾಲನ್ನು ಸೇರಿಸಿ ಒಟ್ಟು ರು.10,000 ರೈತರಿಗೆ ನೀಡಲಾಗುತ್ತಿತ್ತು. ಅದನ್ನು ಈ ಸರ್ಕಾರ ಬಂದ ಮೇಲೆ ಸ್ಥಗಿತಗೊಳಿಸಿದೆ. ತಮ್ಮ ಸರ್ಕಾರದ ಅವಧಿಯಲ್ಲಿ ಬಡವರ ಪರವಾಗಿ ಮತ್ತು ರೈತರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಸರ್ಕಾರ ತಮ್ಮದಾಗಿತ್ತು ಎಂದರು.
ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ, ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನ, ನಗರ ಮಂಡಳ ಅಧ್ಯಕ್ಷ ಮಂಜುನಾಥ ಕಾಟೆ, ಗ್ರಾಮೀಣ ಮಂಡಳ ಅಧ್ಯಕ್ಷ ಸುಭಾಷ ಸಿರಿಗೆರೆ, ಮುಖಂಡರುಗಳಾದ ಕೆ.ಶಿವಲಿಂಗಪ್ಪ, ಎಸ್.ಎಸ್ ರಾಮಲಿಂಗಣ್ಣವರ, ಡಾ. ಬಸವರಾಜ ಕೇಲಗಾರ, ಚೋಳಪ್ಪ ಕಸವಾಳ, ಭೋಜರಾಜ ಕರೂದಿ, ಸಿದ್ದು ಚಿಕ್ಕಬಿದರಿ, ಮಲ್ಲಿಕಾರ್ಜುನ ಅಂಗಡಿ, ಜಿ.ಬಿ. ಮಾಸಣಗಿ, ಭಾರತಿ ಜಂಬಗಿ ಹಾಗೂ ನಿವೃತ್ತ ನೌಕರರ ಸಂಘದ ಸದಸ್ಯರು, ಅಗ್ರಿ ಅಸೋಸಿಯೇಶನ್ ಸದಸ್ಯರು, ಐ.ಟಿ.ಐ ಅಸೋಸಿಯೇಶನ್ ಸದಸ್ಯರು, ನಿವೃತ್ತ ಶಿಕ್ಷಕ ವೃಂದ, ನಿವೃತ್ತ ಕಾಲೇಜು ಉಪನ್ಯಾಸಕ ಬಳಗದ ಸದಸ್ಯರು ಉಪಸ್ಥಿತರಿದ್ದರು.