ಕಾರ್ಯಕರ್ತರು ಎದ್ದರೆ ನೀವ್ಯಾರು ಇಲ್ಲಿ ಕಾಲಿಡೋಕಾಗಲ್ಲ

KannadaprabhaNewsNetwork |  
Published : Oct 30, 2026, 01:45 AM IST
29ಕೆಡಿವಿಜಿ2-ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ಜಿಲ್ಲೆಯ ಬಿಜೆಪಿಯಲ್ಲಿನ ಪ್ರತಿ ಬೆಳವಣಿಗೆ, ಆಗುಹೋಗುಗಳ ಬಗ್ಗೆ ರಾಜ್ಯ ನಾಯಕರು ಗಮನಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಹ ಯಾರು ನಿಜವಾದ ನಾಯಕರು, ಕಾರ್ಯಕರ್ತರೆಂಬ ವರದಿ ನೀಡುತ್ತಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ತಿಳಿಸಿದ್ದಾರೆ.

- ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ಮತ್ತು ತಂಡದ ವಿರುದ್ಧವೇ ಸ್ವಪಕ್ಷದ ಯಶವಂತ ರಾವ್‌ ಜಾಧವ್‌ ಆಕ್ರೋಶ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಜಿಲ್ಲೆಯ ಬಿಜೆಪಿಯಲ್ಲಿನ ಪ್ರತಿ ಬೆಳವಣಿಗೆ, ಆಗುಹೋಗುಗಳ ಬಗ್ಗೆ ರಾಜ್ಯ ನಾಯಕರು ಗಮನಿಸುತ್ತಿದ್ದು, ಜಿಲ್ಲಾ ಉಸ್ತುವಾರಿ ಸಹ ಯಾರು ನಿಜವಾದ ನಾಯಕರು, ಕಾರ್ಯಕರ್ತರೆಂಬ ವರದಿ ನೀಡುತ್ತಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2028ರ ವಿಧಾನಸಭೆ ಚುನಾವಣೆ ಹೊತ್ತಿಗೆ ಯಾರು ಪ್ರಾಮಾಣಿಕರು, ಯಾರು ಅಪ್ರಮಾಣಿಕರೆಂಬುದು ಗೊತ್ತಾಗುತ್ತದೆ. ನಾವೆಲ್ಲಾ ಕಾರ್ಯಕರ್ತರು 35-40 ವರ್ಷದಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಪಕ್ಷದ ಬೆಳವಣಿಗೆಗಳ ಬಗ್ಗೆ ಶಾಸಕ ಬಿ.ಪಿ.ಹರೀಶ ಸಹ ರಾಜ್ಯ ನಾಯಕರ ಗಮನಕ್ಕೆ ತರುತ್ತಾರೆ ಎಂದರು.

ಯಾವುದೇ ಅಧಿಕಾರ, ಸ್ಥಾನಮಾನ ಇಲ್ಲದೇ ಪಕ್ಷದ ಕೆಲಸ ಮಾಡುತ್ತಾ ಬಂದ ಹಿರಿಯರು, ನಿಷ್ಟಾವಂತ ಕಾರ್ಯಕರ್ತರು ಸುಮ್ಮನಿದ್ದಾರೆಂದು ಇಲ್ಲಿಗೆ ಬಂದು ಹೀಗೆಲ್ಲಾ ವರ್ತಿಸುತ್ತಿದ್ದೀರಾ? ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾವೂ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಇನ್ನಿಲ್ಲದಂತೆ ತೊಂದರೆ ಅನುಭವಿಸುತ್ತಿದ್ದೇವೆ. ನಾವಷ್ಟೇ ಪ್ರಾಮಾಣಿಕವಾಗಿದ್ದರೆ ಸಾಲದು, ಪಕ್ಷದಿಂದ ಸ್ಥಾನಮಾನ, ಅಧಿಕಾರ, ಅವಕಾಶ ಪಡೆದ ನೀವೂ ಪ್ರಾಮಾಣಿಕರಿರಬೇಕಲ್ಲವೇ ಎಂದು ಅವರು ಪ್ರಶ್ನಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಎಂ.ಬಸವರಾಜ ನಾಯ್ಕ ಪಕ್ಷದಲ್ಲಿ ಹಿರಿಯರಲ್ಲ. ಈ ಎಲ್ಲರಿಗಿಂತಲೂ ಹಿರಿಯರು ಇಲ್ಲಿದ್ದಾರೆ. ಆದರೆ, ಅಂತಹವರೆಲ್ಲಾ ಸುಮ್ಮನಿದ್ದಾರೆ ಎಂದುಕೊಳ್ಳಬೇಡಿ. ಕಾಂಗ್ರೆಸ್ಸಿನ ವಿರುದ್ಧ ಇಲ್ಲಿ ಸೆಡ್ಡು ಹೊಡೆದು ನಮ್ಮೆಲ್ಲಾ ಕಾರ್ಯಕರ್ತರು ರಾಜಕಾರಣ ಮಾಡುತ್ತೇವೆ. ನಮ್ಮ ಮುಖಂಡರು, ಕಾರ್ಯಕರ್ತರು ಹಗಲಿರುಳು ಪಕ್ಷಕ್ಕೆ ದುಡಿಯುತ್ತಾರೆ. ಕಾಂಗ್ರೆಸ್‌ನವರು ನೀಡುವ ಎಲ್ಲ ರೀತಿಯ ತೊಂದರೆ ಅನುಭವಿಸಿ, ಚುನಾವಣೆ ಮಾಡುತ್ತಾರೆ. ಆದರೆ, ನೀವು ಅದೇ ಕಾಂಗ್ರೆಸ್ಸಿನವರ ಜೊತೆಗೆ ಯಾಕೆ ಅಷ್ಟೊಂದು ಪ್ರೀತಿ, ಅಪ್ಪುಗೆ ಎಂದು ಅವರು ಕಿಡಿಕಾರಿದರು.

ದಾವಣಗೆರೆಯಲ್ಲಿ ಕಾಂಗ್ರೆಸ್ಸಿನ ನಾಯಕರಿಂದ ಬಿಜೆಪಿಯವರು ಯಾವುದೇ ವ್ಯವಹಾರ ಮಾಡುವುದು ಕಷ್ಟವಾಗಿದೆ. ಲೇಔಟ್‌ಗೆ ಅನುಮೋದನೆ ನೀಡದೇ ಸತಾಯಿಸುವುದು, ಯಾವುದೇ ಗುತ್ತಿಗೆ ಕೆಲಸ ಸಹ ನೀಡುವುದಿಲ್ಲ. ರೇಣುಕಾಚಾರ್ಯ ಅವರಿಗೆ 2008ರಲ್ಲಿ ಬಿಜೆಪಿ ಬಿ ಫಾರಂ ನೀಡಿದ್ದು, ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಬಿಜೆಪಿಗೆ ಕರೆ ತಂದಿದ್ದು ಜಿ.ಎಂ.ಸಿದ್ದೇಶ್ವರ. ಮಾಜಿ ಶಾಸಕ ಬಸವರಾಜ ನಾಯ್ಕಗೆ ಬಿಜೆಪಿಗೆ ಕರೆ ತಂದಿದ್ದು ಅಣಬೇರು ಜೀವನಮೂರ್ತಿ. ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆ ಇದ್ದರೆ ನಾಲ್ಕು ಗೋಡೆ ಮಧ್ಯೆ ಕುಳಿತು ಚರ್ಚಿಸಲಿ. ಯಾರಿಗೆ ಯಾರೂ ಸೋಲಿಸಲು ಆಗುವುದಿಲ್ಲ, ಗೆಲ್ಲಿಸೋಕೂ ಆಗುವುದಿಲ್ಲ ಎಂದು ರೇಣುಕಾಚಾರ್ಯ ಮತ್ತು ತಂಡಕ್ಕೆ ತಾಕೀತು ಮಾಡಿದರು.

ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಎದ್ದರೆ ನೀವ್ಯಾರೂ ದಾವಣಗೆರೆಗೆ ಕಾಲಿಡುವುದಕ್ಕೂ ಆಗುವುದಿಲ್ಲ. ನೂತನ ಎಂಎಲ್‌ಸಿ ಕೆ.ಎಂ.ಸುರೇಶ ನಮಗ್ಯಾರಿಗೂ ವಿರೋಧಿಯಲ್ಲ. ಇದೇ ಸುರೇಶ ಎಂಎಲ್‌ಸಿ ಆಗಲೆಂದು ಹಾರೈಸಿದವನು ನಾನು. ಗೆದ್ದ ನಂತರ ಕೆ.ಎಂ.ಸುರೇಶ ನನಗೆ ಕರೆ ಮಾಡಿದ್ದರು. ದಕ್ಷಿಣ ಕ್ಷೇತ್ರದ ಮತದಾರರು ಈ ಚುನಾವಣೆಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಆಟೋ ರಿಕ್ಷಾಗಳಲ್ಲಿ ಮತದಾರರು ಕರೆ ತರುವ, ನೋಂದಣಿ ಮಾಡಿಸಲು ತಿಂಗಳುಗಟ್ಟಲೇ ಮನೆ ಬಿಟ್ಟು ಸುತ್ತಾಡಿದ್ದಾರೆ ಎಂದು ಯಶವಂತ ರಾವ್‌ ತಿಳಿಸಿದರು.

ಪಕ್ಷದ ಹಿರಿಯ ಮುಖಂಡ ಅಣಬೇರು ಜೀವನಮೂರ್ತಿ, ಬಿ.ರಮೇಶ ನಾಯ್ಕ, ಟಿಂಕರ್ ಮಂಜಣ್ಣ, ಅಂಜಿನಪ್ಪ, ರಾಜಕುಮಾರ, ಗೋವಿಂದರಾಜ, ಶಿವನಗೌಡ ಟಿ.ಪಾಟೀಲ, ವೀರಣ್ಣ, ಅಶೋಕ ಕುಮಾರ, ಗುರು ಸೋಗಿ, ಪಿ.ಎನ್. ಜಗದೀಶ ಕುಮಾರ ಪಿಸೆ, ಕಿಶೋರ ಕುಮಾರ ಇತರರು ಇದ್ದರು.

- - -

(ಬಾಕ್ಸ್‌)

* ಮೋದಿ, ಎಸ್ಐಆರ್‌ ವಿರುದ್ಧ ಟೀಕೆಗೆ ಫಲಿತಾಂಶವೇ ಉತ್ತರ

- ಕಾಂಗ್ರೆಸ್‌ ವರಿಷ್ಠರಿಂದ ವೈಯಕ್ತಿಕ ಟೀಕೆ, ಅನಗತ್ಯ ಆರೋಪ ಒಳ್ಳೆಯ ರಾಜಕೀಯ ಸಂಸ್ಕೃತಿಯಲ್ಲ

ದಾವಣಗೆರೆ: ವಿಧಾನ ಪರಿಷತ್‌ನ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಭಾರೀ ಜಯ ದಾಖಲಿಸಿದ್ದು, 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಈ ಫಲಿತಾಂಶ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಹೇಳಿದ್ದಾರೆ.

ಮೇಲ್ಮನೆಯ ನಾಲ್ಕೂ ಕ್ಷೇತ್ರ ಪದವೀಧರರು, ಶಿಕ್ಷಕರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಈ ಫಲಿತಾಂಶ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ ಈ ಫಲಿತಾಂಶವು ಸಾಕಷ್ಟು ಬಲ ತುಂಬಿದೆ. ಎಸ್ಐಆರ್‌ ಬಗ್ಗೆ, ನರೇಂದ್ರ ಮೋದಿ ಬಗ್ಗೆ ಕೀಳು ಮಟ್ಟದಲ್ಲಿ ಟೀಕಿಸುತ್ತಿದ್ದ ಕಾಂಗ್ರೆಸ್ಸಿಗರಿಗೆ ಇದೇ ಫಲಿತಾಂಶ ಉತ್ತರವಾಗಿದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹೀಗೆ ಕಾಂಗ್ರೆಸ್‌ ನಾಯಕರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ತೀರಾ ಕೆಳಮಟ್ಟಕ್ಕಿಳಿದು ಟೀಕಿಸುತ್ತಿದ್ದಾರೆ. ವೈಯಕ್ತಿಕ ಟೀಕೆ ಮಾಡುತ್ತಾ, ಅನಗತ್ಯ ಆರೋಪಗಳಲ್ಲಿ ತೊಡಗಿರುವುದು ಸರಿಯಾದ ರಾಜಕೀಯ ಸಂಸ್ಕೃತಿಯಲ್ಲ. ಪ್ರಜಾಪ್ರಭುತ್ವದಲ್ಲಿ ಆಡಳಿತವನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಟೀಕೆಗಳು ಆಧಾರರಹಿತ ಆರೋಪವಾಗದೇ, ಜನರ ಸಮಸ್ಯೆಗೆ ಸಂಬಂಧಿಸಿದ ರಚನಾತ್ಮಕ ಚರ್ಚೆ ಆಗಿರಬೇಕು ಎಂದು ಹೇಳಿದರು.

ದೇಶದ ಜನತೆ ಅಭಿವೃದ್ಧಿ, ಉತ್ತಮ ಆಡಳಿತ, ಶಿಕ್ಷಣ, ಉದ್ಯೋಗ, ಆರೋಗ್ಯ, ಮೂಲ ಸೌಕರ್ಯ, ಭವಿಷ್ಯದ ಭದ್ರತೆಯಂತಹ ವಿಚಾರಕ್ಕೆ ಮಹತ್ವ ನೀಡುತ್ತಾರೆಂಬುದನ್ನು ಕಾಂಗ್ರೆಸ್‌ ನಾಯಕರು ಅರ್ಥ ಮಾಡಿಕೊಳ್ಳಲಿ. ಮೋದಿ, ಅಮಿತ್ ಶಾ ಬಗ್ಗೆ ಮಾತನಾಡುವುದನ್ನು ಮಲ್ಲಿಕಾರ್ಜುನ ಖರ್ಗೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಿಲ್ಲಿಸಲಿ. ಈ ತಂದೆ, ಮಗ ತಮ್ಮ ಮಾತು, ಹೇಳಿಕೆ ಮೇಲೆ ಹಿಡಿತ ಹೊಂದಲಿ ಎಂದು ಸೂಚ್ಯವಾಗಿ ಎಚ್ಚರಿಸಿದರು.

ನಾಲ್ಕು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಂಡಿದೆ. ಹತಾಶ ಖರ್ಗೆ ಇತರರು 2028ರ ಚುನಾವಣೆಯಲ್ಲಿ ಮತ್ತೆ ಸೋಲುವ ಭೀತಿಯಿಂದ ನರೇಂದ್ರ ಮೋದಿಯವರಿಗೆ ಟೀಕಿಸುತ್ತಿದ್ದಾರೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಲೋಪವಿದ್ದರೆ ಅದನ್ನು ಆಯೋಗದ ಗಮನಕ್ಕೆ ತರುವ ಕೆಲಸ ಮಾಡಲಿ. ದಾವಣಗೆರೆ ಜಿಲ್ಲೆಯಲ್ಲಿ ಎಸ್ಐಆರ್‌ ಬಗ್ಗೆ ಒಂದೇ ಒಂದು ದೂರು ಕೇಳಿಬಂದಿಲ್ಲ. ಹೀಗಿದ್ದರೂ ಇಲ್ಲಿನ ಕಾಂಗ್ರೆಸ್ಸಿಗರು ಎಸ್ಐಆರ್ ವಿರುದ್ಧ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

- - -

(ಟಾಪ್‌ ಕೊಟ್‌)

ಕಾಂಗ್ರೆಸ್ಸಿನ ಸಚಿವರನ್ನು ನೀವು ಅಪ್ಪಿಕೊಳ್ಳುತ್ತಿದ್ದೀರಿ. ಇಲ್ಲಿ ಸೆಡ್ಡು ಹೊಡೆದು ರಾಜಕಾರಣ ಮಾಡುವ ನಮ್ಮೆಲ್ಲಾ ಕಾರ್ಯಕರ್ತರ ಗತಿ ಏನು? ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ ಮಾಡುವುದು, ಹೆದರಿಸುವುದು, ಬೆದರಿಸುವುದನ್ನು ಮಾಡುತ್ತಿದ್ದಾರೆ. ಇನ್ನಿಲ್ಲದ ತೊಂದರೆ ಹಿಂದಿನಿಂದಲೂ ಕೊಡುತ್ತಿದ್ದಾರೆ. ಅದ್ಯಾವುದೂ ನಿಮ್ಮ ಗಮನಕ್ಕೆ ಬಂದಿಲ್ಲವೇ? ಜಿಲ್ಲೆ ಜನತೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

- ಯಶವಂತ ರಾವ್ ಜಾಧವ್‌, ಬಿಜೆಪಿ ಮುಖಂಡ.

- - -

-29ಕೆಡಿವಿಜಿ2: ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು