ಜನಪದ ಉಳಿದರೆ ನಾಡಿನ ಸಂಸ್ಕೃತಿ ಉಳಿಯುತ್ತೆ: ಬಾಲಶೇಖರ ಬಂದಿ

KannadaprabhaNewsNetwork |  
Published : Jan 16, 2025, 12:47 AM IST
ಮೂಡಲಗಿ: ತಾಲ್ಲೂಕಿನ ಸುಣಧೋಳಿಯ ಜಡಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಸಂಕ್ರಮಣದ ಸುಗ್ಗಿ ಹಬ್ಬವನ್ನು ಶಿವಾನಂದ ಸ್ವಾಮಿಗಳು ಉದ್ಘಾಟಿಸಿದರು. ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮತ್ತು ಸಿಬ್ಬಂದಿಯವರು ಚಿತ್ರದಲ್ಲಿರುವರು. | Kannada Prabha

ಸಾರಾಂಶ

ಜನಪದ ಕಲೆ, ಸಾಹಿತ್ಯ, ಆಚರಣೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದು ಇಂದಿನ ಅವಶ್ಯಕತೆಯಲ್ಲಿ ಒಂದು. ಅದುಯುವ ಪೀಳಿಗೆಯ ಮೇಲೆ ಜವಾಬ್ದಾರಿ ಇದೆ

ಕನ್ನಡಪ್ರಭ ವಾರ್ತೆ ಮೂಡಲಗಿ

ಹಳ್ಳಿಯ ಬದುಕಿನಲ್ಲಿ ವೈಶಿಷ್ಟ್ಯವಾಗಿರುವ ಬುತ್ತಿ ಊಟದಂತೆ ವಿದ್ಯಾರ್ಥಿಗಳು ಕಲಿಕಾ ಅವಧಿಯಲ್ಲಿ ಜ್ಞಾನದ ಬುತ್ತಿ ಕಟ್ಟಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.

ತಾಲೂಕಿನ ಸುಣಧೋಳಿಯ ಜಡಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲಿ ಏರ್ಪಡಿಸಿದ್ದ ಸಂಕ್ರಮಣದ ಸುಗ್ಗಿ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾಡಿನ ಜನಪದ ಉಳಿದರೆ ನಾಡಿನ ಸಂಸ್ಕೃತಿ ಉಳಿಯುತ್ತದೆ. ಜನಪದ ಕಲೆ, ಸಾಹಿತ್ಯ, ಆಚರಣೆ, ಸಂಪ್ರದಾಯಗಳನ್ನು ಉಳಿಸಿ ಬೆಳೆಸುವುದು ಇಂದಿನ ಅವಶ್ಯಕತೆಯಲ್ಲಿ ಒಂದು. ಅದುಯುವ ಪೀಳಿಗೆಯ ಮೇಲೆ ಜವಾಬ್ದಾರಿ ಇದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶಿವಾನಂದ ಸ್ವಾಮಿಗಳು ಕಾರ್ಯಕ್ರಮವ ಉದ್ಘಾಟಿಸಿದರು. ಪ್ರಾಚಾರ್ಯ ಸುರೇಶ ಲಂಕೆಪ್ಪನ್ನವರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಜಾನಪದ ಸಂಸ್ಕೃತಿ ಮತ್ತು ನಾಡು, ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾಲೇಜುದಲ್ಲಿ ಸುಗ್ಗಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಗರತಿ ಹಾಡು, ಗಂಡ ಹೆಂಡಿರ ಜಗಳ ಗಂಧ ತೀಡಿದಂಗ ಜಾನಪದ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಜಾನಪದ ಸಿಹಿ ಉಣಬಸಿದರು.

ಹಳ್ಳೂರ ಸರ್ಕಾರಿ ಪಪೂ ಮಹಾವಿದ್ಯಾಲಯದ ವೈ.ಬಿ.ಕಳ್ಳಿಗುದ್ದಿ ಮಾತನಾಡಿ, ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯಾ ಬಯಲಾಟಗಳು ಮನರಂಜನೆಯ ಜೊತೆಗೆ ಬದುಕಿಗೆ ಸಂದೇಶಗಳನ್ನು ನೀಡುತ್ತಿದ್ದವು. ಅಂತಹ ಜನಪದ ಕಲೆಗಳನ್ನು ಬೆಳೆಸುವುದು ಅವಶ್ಯವಿದೆ ಎಂದು ವಿವರಿಸಿದರು.

ಉಪನ್ಯಾಸಕ ಎಸ್.ಡಿ.ವಾಲಿ ಮಾತನಾಡಿ, ಭಾರತೀಯ ಸಂಸ್ಕೃತಿಯು ವಿಶ್ವದಲ್ಲಿಯೇ ಗಮನಸೆಳೆದಿದೆ. ಭಾರತೀಯರ ಕಲೆ, ಸಾಹಿತ್ಯ, ಆಚರಣೆಗಳಿಗೆ ಅನೇಕ ವಿದೇಶಿಗರು ಆಕರ್ಷಿತರಾಗಿದ್ದು, ನಮ್ಮ ಸಂಸ್ಕೃತಿ ಪರಂಪರೆಯು ಸರ್ವ ಶ್ರೇಷ್ಠವಾಗಿದೆ ಎಂದರು.

ಉಪನ್ಯಾಸಕರಾದ ವಿ.ಪಿ.ಉದ್ದನ್ನವರ, ಎ.ಕೆ.ಬಡಿಗೇರ ಹಾಜರಿದ್ದರು. ಎಚ್.ಎಂ.ಹತ್ತರಕಿ ನಿರೂಪಿಸಿದರು.

ಸುಗ್ಗಿ ಸಂಭ್ರಮ

ವಿದ್ಯಾರ್ಥಿನಿಯರೆಲ್ಲ ಇಳಕಲ್ ಸೀರೆ ತೊಟ್ಟು, ಮೈಮೇಲೆ ಬೊರಮಾಳ, ಬೆಂಡವಲಿ, ಝುಮಕಿ, ನಡಪಟ್ಟಿಯಂತ ಮರೆಯಾಗುತ್ತಿರುವ ಸಂಪ್ರದಾಯ ಆಭರಣ ಹಾಕಿಕೊಂಡು ಬಂದು ಗಮನಸೆಳೆದರು. ವೇದಿಕೆಯನ್ನು ಜೋಳದ ರಾಶಿಯೊಂದಿಗೆ ಹಳ್ಳಿ ಕಟ್ಟೆ ಮಾಡಿದ್ದರು. ಡೊಳ್ಳು ಕುಣಿತ, ಸುಗ್ಗಿ ಹಾಡುಗಳು ಮೆರಗು ನೀಡಿದವು. ವಿದ್ಯಾರ್ಥಿನಿ ರಾಧಿಕಾ ದೇವನಗಳ ಕೊರವಂಜಿ ವೇಷದಲ್ಲಿ ಅತಿಥಿಗಳ ಖಣಿ ಹೇಳುವ ಮೂಲಕ ಎಲ್ಲರ ಮೊಗದಲ್ಲಿ ನಗೆ ತೇಲಿಸಿದರು. ಮನೆಗಳಿಂದ ಕಟ್ಟಿಕೊಂಡು ಬಂದಿದ್ದ ವಿದ್ಯಾರ್ಥಿಗಳು ಬುತ್ತಿ ಗಂಟು ಬಿಚ್ಚಿ ಸಹಭೋಜನ ಸವಿದರು. ಸಜ್ಜೆರೊಟ್ಟಿ, ಜುಣಕದ ವಡೆ, ಬದನೆಕಾಯಿ, ವಿವಿಧಚಟ್ನಿ, ಬೆಳ್ಳುಳ್ಳಿ ಖಾರ, ಖಾರದ ವಡೆ, ಬಾನ, ಮಾದೆಲಿ, ಶೇಂಗಾ ಹೋಳಿಗೆ ವೈವಿಧ್ಯಮಯ ಹಳ್ಳಿ ಖಾದ್ಯಗಳ ಘಮಲು ಕ್ಯಾಂಪಸ್‍ದಲ್ಲಿ ತುಂಬಿಕೊಂಡಿತ್ತು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌