ಸಭೆ ಅರ್ಧಕ್ಕೆ ಮೊಟಕು, ಪಕ್ಷಾತೀತವಾಗಿ ಅಧ್ಯಕ್ಷರ ರಾಜೀನಾಮೆ ಸದಸ್ಯರ ಆಗ್ರಹಕನ್ನಡಪ್ರಭ ವಾರ್ತೆ ಯಲಬುರ್ಗಾ
ಎಲ್ಲಾ ೧೫ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಸಾಮಾನ್ಯ ಸಭೆ ನಿಗದಿ ಮಾಡದೆ ಏಕಾಏಕಿ ಸಭೆ ಯಾಕೆ ಕರೆದಿದ್ದೀರಿ. ಸಮಸ್ಯೆಗಳ ಇತ್ಯರ್ಥಕ್ಕೆ ಸ್ಪಂದಿಸದಿದ್ದರೆ ನೀವು ಅಧ್ಯಕ್ಷರಾಗಿ ಇರುವುದಕ್ಕಿಂತ ರಾಜೀನಾಮೆ ಕೊಟ್ಟು ಹೋಗಿ ಎಂದು ಪಪಂ ಅಧ್ಯಕ್ಷರ ವಿರುದ್ಧ ಸ್ವಪಕ್ಷ ಸದಸ್ಯರಾದ ಕಳಕಪ್ಪ ತಳವಾರ ಹಾಗೂ ಅಮರೇಶ ಹುಬ್ಬಳ್ಳಿ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನೀವು ಅಧ್ಯಕ್ಷರಾದ ಮೇಲೆ ಯಾವ ವಾರ್ಡುಗಳಲ್ಲಿಯೂ ಇದುವರೆಗೊ ಒಂದು ಕೆಲಸವಾಗಿಲ್ಲ. ನಿಮಗೆ ಸದಸ್ಯರು, ಪಪಂ ಮುಖ್ಯಾಧಿಕಾರಿ, ಸಿಬ್ಬಂದಿ ಯಾರ ಮೇಲೆಯೂ ವಿಶ್ವಾಸವಿಲ್ಲವೆಂದ ಮೇಲೆ ಈ ಸಭೆ ಯಾಕೆ ನಡೆಸಬೇಕು ಎಂದರು.
ಈ ಸಭೆಗೆ ಉಪಾಧ್ಯಕ್ಷರು ಸೇರಿದಂತೆ ಆಡಳಿತ ಪಕ್ಷದ ಕೆಲ ಸದಸ್ಯರು ಗೈರಾಗಿದ್ದರು. ಸದಸ್ಯರಾದ ವಸಂತ ಭಾವಿಮನಿ, ಅಶೋಕ ಅರಕೇರಿ, ಡಾ. ನಂದಿತಾ ದಾನರಡ್ಡಿ, ಬಸಮ್ಮ ಬಣಕಾರ, ಹನುಮಂತ ಭಜೇಂತ್ರಿ, ಬಸವಲಿಂಗಪ್ಪ ಕೊತ್ತಲ, ರೇವಣೆಪ್ಪ ಹಿರೇಕುರಬರ ಸೇರಿದಂತೆ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಇದಕ್ಕೆ ಬೆಂಬಲ ವ್ಯಕ್ತಪಡಿಸಿ ನಮ್ಮ ವಾರ್ಡುಗಳಲ್ಲಿ ಕುಡಿಯುವ ನೀರು, ಚರಂಡಿ ಸ್ವಚ್ಛತೆ ಮೂಲಭೂತ ಸೌಕರ್ಯಗಳಿಲ್ಲದೆ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವಲ್ಲಿ ಪಪಂ ಅಧ್ಯಕ್ಷರು ವಿಫಲರಾಗಿದ್ದಾರೆ. ನಮ್ಮ ಸಮಸ್ಯೆ ಆಲಿಸಿ ಇತ್ಯರ್ಥ ಪಡಿಸಲು ಆಗುವುದಿಲ್ಲ ಅಂದ್ರೆ ನೀವು ಅಧ್ಯಕ್ಷರಾಗಿ ಇರುವುದಕ್ಕಿಂತ ರಾಜೀನಾಮೆ ಕೊಟ್ಟು ಹೋಗುವುದು ಉತ್ತಮ. ನಾವು ಎಲ್ಲಾ ಸದಸ್ಯರು ಸೇರಿಕೊಂಡು ಏನಾದರೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ಈ ಸಭೆಯನ್ನು ಕಾಟಾಚಾರಕ್ಕಾಗಿ ನಡೆಸುವುದು ಅಗತ್ಯವಿಲ್ಲವೆಂದು ಅರ್ಧಕ್ಕೆ ಸಭೆಯಿಂದ ಸದಸ್ಯರು ಹೊರನಡೆದರು.೭ನೇ ವಾರ್ಡನ ಸದಸ್ಯ ಅಶೋಕ ಅರಕೇರಿ ಮಾತನಾಡಿ, ೭ನೇ ವಾರ್ಡ್‌ನಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಕಟ್ಟೆ, ಮೆಟ್ಟಲು ನಿರ್ಮಿಸಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಈ ಕುರಿತು ಹಲವಾರು ಬಾರಿ ಪಪಂ ಅಧ್ಯಕ್ಷರ ಗಮನಕ್ಕೆ ತಂದರೂ ಸಮಸ್ಯೆ ಇತ್ಯರ್ಥವಾಗಿಲ್ಲ. ಕೂಡಲೇ ಅಧ್ಯಕ್ಷರು, ಮುಖ್ಯಾಧಿಕಾರಿ ಸ್ಥಳಕ್ಕೆ ಆಗಮಿಸಿ ಅಕ್ರಮ ಜಾಗ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.
ಮುಖ್ಯಾಧಿಕಾರಿ ನಾಗೇಶ ಮಾತನಾಡಿ, ೧೫ನೇ ಹಣಕಾಸು ಮತ್ತು ಎಸ್‌ಎಫ್‌ಸಿ ಅನುದಾನಗುಣವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕ್ರಿಯಾ ಯೋಜನೆ ಅನುಮತಿ ಪಡೆದು ಎಲ್ಲಾ ವಾರ್ಡಗಳಲ್ಲಿನ ಕಾಮಗಾರಿಗಳು ಈಗಾಗಲೇ ಮುಕ್ತಾಯದ ಹಂತದಲ್ಲಿವೆ. ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ಮೇರೆಗೆ ಕೆಲಸ ನಿರ್ವೆಹಿಸಲಾಗುತ್ತಿದೆ. ಅನುದಾನಕ್ಕೆ ಯಾವ ಕೊರತೆಯಿಲ್ಲ. ಮುಂದಿನ ಸಾಮಾನ್ಯ ಸಭೆ ದಿನಾಂಕವನ್ನು ಅಧ್ಯಕ್ಷ, ಸದಸ್ಯರ ಜತೆ ಚರ್ಚಿಸಿ ತಿಳಿಸುವುದಾಗಿ ಹೇಳಿದರು.ಅಧ್ಯಕ್ಷ ಅಂದಯ್ಯ ಕಳ್ಳಿಮಠ ಯಾವ ಸದಸ್ಯರ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡದೆ ಮೌನವಹಿಸಿ ಸಭೆ ಮುಂದೂಡಿದರು.