ಕನ್ನಡಪ್ರಭ ವಾರ್ತೆ ಮಂಗಳೂರು
ಸ್ಥಳೀಯ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕಿದರೆ ಸಾರ್ವಜನಿಕರು ಪೊಲೀಸ್ ಆಯುಕ್ತರ ಕಚೇರಿಗೆ ಲಿಖಿತವಾಗಿ ದೂರು ಸಲ್ಲಿಸಬಹುದು ಎಂದು ಡಿಸಿಪಿ ದಿನೇಶ್ ಕುಮಾರ್ ಹೇಳಿದ್ದಾರೆ.ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ, ಪಂಗಡದವರ ಕುಂದುಕೊರತೆ ಸಭೆಯಲ್ಲಿ ಅವರು ಈ ಮಾತು ಹೇಳಿದರು.
ಕೆಲವು ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುತ್ತಿಲ್ಲ ಎಂದು ದಲಿತ ಮುಖಂಡರ ದೂರಿನ ಹಿನ್ನೆಲೆಯಲ್ಲಿ ಡಿಸಿಪಿಯವರು ಎಲ್ಲ ಠಾಣೆಗಳ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಒಂದು ವೇಳೆ ಸಿವಿಲ್ ಪ್ರಕರಣದಲ್ಲಿ ಕ್ರಿಮಿನಲ್‌ಗೆ ಸಂಬಂಧಿಸಿದ ಅಂಶಗಳಿದ್ದರೂ ಅದರ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಬೇಕು. ಪೊಲೀಸರಿಂದ ತಪ್ಪಾದರೆ ಅವರ ಮೇಲೆಯೇ ಕ್ರಮ ಕೈಗೊಳ್ಳಲಾಗುವುದು. ಪೊಲೀಸರು ಎಫ್‌ಐಆರ್ ದಾಖಲಿಸುವ ಬದಲು ಅವರಾಗಿಯೇ ರಾಜಿ ಸಂಧಾನ ನಡೆಸುವುದು ಸರಿಯಲ್ಲ ಎಂದರು.ಆಟಿ ಕಳಂಜಕ್ಕೆ ಆಕ್ಷೇಪ:
ಆಟಿ ತಿಂಗಳಿನಲ್ಲಿ ಕೆಲವೆಡೆ ಇತರ ಸಮುದಾಯದವರು ದಲಿತರಿಂದ ಆಟಿ ಕಳೆಂಜದ ವೇಷ ಹಾಕಿಸಿ ಹಣ ಸಂಗ್ರಹಿಸುತ್ತಿದ್ದಾರೆ. ಇದೊಂದು ರೀತಿಯ ದೌರ್ಜನ್ಯ. ಹಾಗಾಗಿ ‘ಆಟಿಕಳೆಂಜ’ ವೇಷ ಹಾಕಿಸುವವರು ಕಡ್ಡಾಯವಾಗಿ ಪೊಲೀಸರಿಂದ ಅನುಮತಿ ಪಡೆಯುವಂತೆ ಸೂಚನೆ ನೀಡಬೇಕು. ಮಂಗಳೂರಿನಲ್ಲಿ ಕಳೆದ ವರ್ಷವೂ ಇದೇ ರೀತಿ ದೌರ್ಜನ್ಯ ನಡೆಸಲಾಗಿತ್ತು ಎಂದು ಸದಾಶಿವ ಉರ್ವಸ್ಟೋರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್, ಯಾರಾದರೂ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ನಿರ್ದಿಷ್ಟವಾಗಿ ದೂರುಗಳಿದ್ದರೆ ನೀಡಬಹುದು. ಆದರೆ ಪರವಾನಿಗೆ ಪಡೆಯಬೇಕೆಂಬ ನಿಯಮ ರೂಪಿಸುವುದು ಅಸಾಧ್ಯ ಎಂದರು.ಕಾರ್ನಾಡು ಅಮೃತನಗರದಲ್ಲಿರುವ ಮನೆಗೆ ನುಗ್ಗಿ ಸಹೋದರನ ಕೊಲೆಗೆ ಯತ್ನಿಸಿರುವ ಬಗ್ಗೆ ಎಫ್‌ಐಆರ್ ದಾಖಲಾಗಿ 3 ತಿಂಗಳಾದರೂ ಆರೋಪಿಗಳನ್ನು ಬಂಧಿಸಿಲ್ಲ. ಹಲ್ಲೆಯ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದ್ದ ನನ್ನನ್ನು ತುಂಬ ಹೊತ್ತು ಠಾಣೆಯಲ್ಲಿ ಕುಳ್ಳಿರಿಸಿದ್ದರು ಎಂದು ತುಳಸಿ ಎಂಬವರು ದೂರಿದರು. ಈ ಸಂದರ್ಭದಲ್ಲಿ ಹಲವು ಮಂದಿ ದಲಿತ ಮುಂದಾಳುಗಳು ಮೂಲ್ಕಿ ಠಾಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಪ್ರಕರಣವೂ ಸೇರಿದಂತೆ ಮೂಲ್ಕಿ ಠಾಣಾಧಿಕಾರಿಯ ನಿರ್ಲಕ್ಷ್ಯ, ದುರ್ವರ್ತನೆ ಬಗ್ಗೆ ತನಿಖೆ ನಡೆಸುವಂತೆ ದಲಿತ ಮುಖಂಡರು ಒತ್ತಾಯಿಸಿದರು. ಈ ಬಗ್ಗೆ ವಿಚಾರಣೆ ನಡೆಸುವುದಾಗಿ ಉತ್ತರ ವಲಯ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಭರವಸೆ ನೀಡಿದರು.
ಕಾಲನಿಗಳಲ್ಲಿ ಸಭೆ: ಇಂತಹ ಸಭೆಗಳು ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಕಾಲನಿಗಳ ಮಟ್ಟದಲ್ಲಿ ಸಭೆ ನಡೆಯಬೇಕು. ಇದರಲ್ಲಿ ಪೊಲೀಸ್, ಮೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳು ಪಾಲ್ಗೊಳ್ಳಬೇಕು. ಇತ್ತೀಚೆಗೆ ಉಳ್ಳಾಲ ಠಾಣಾ ವಾಪ್ತಿಯ ಕಾಲನಿಯಲ್ಲಿ ನಡೆದ ಇಂತಹ ಸಭೆ ಯಶಸ್ವಿಯಾಗಿದೆ ಎಂದು ಗಿರೀಶ್ ಕುಮಾರ್ ಹೇಳಿದರು. ಇದೇ ಮಾದರಿಯಲ್ಲಿ ಇತರ ಕಾಲೊನಿಗಳಲ್ಲಿಯೂ ಸಭೆ ನಡೆಸುವಂತೆ ಡಿಸಿಪಿ ದಿನೇಶ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮೂಡುಬಿದಿರೆ ಠಾಣಾ ವ್ಯಾಪ್ತಿಯ ಧರೆಗುಡ್ಡೆಯಲ್ಲಿ ತಲವಾರು ಹಿಡಿದು ಬಂದು ವಿಕಲಚೇತನರ ಮೇಲೆ ದೌರ್ಜನ್ಯ ಎಸಗಿದ ಘಟನೆ ಕಳೆದ ಎಪ್ರಿಲ್‌ನಲ್ಲಿ ಸಂಭವಿಸಿತ್ತು. ಆದರೆ ಇದುವರೆಗೂ ಎಫ್‌ಐಆರ್ ಮಾಡಿ ಆರೋಪಿಗಳನ್ನು ಬಂಧಿಸಿಲ್ಲ ಎಂದು ದಲಿತ ಮುಖಂಡ ಎಸ್.ಪಿ ಆನಂದ ದೂರಿದರು. ಈ ಬಗ್ಗೆ ಕೂಡಲೇ ಎಫ್‌ಐಆರ್ ದಾಖಲಿಸುವಂತೆ ಡಿಸಿಪಿ ಸೂಚನೆ ನೀಡಿದರು.