ಸಂತ್ರಸ್ತೆ ದೂರು ಕೊಟ್ಟರೆ ಶಾಸಕರ ವಿರುದ್ಧವೂ ಕ್ರಮ

KannadaprabhaNewsNetwork | Published : May 2, 2024 12:16 AM

ಸಾರಾಂಶ

ರಾಮನಗರ: ಸಂತ್ರಸ್ತೆ ದೂರು ನೀಡಿದರೆ ರಾಮನಗರ ಕ್ಷೇತ್ರದ ಜನಪ್ರತಿನಿಧಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ರಾಮನಗರ: ಸಂತ್ರಸ್ತೆ ದೂರು ನೀಡಿದರೆ ರಾಮನಗರ ಕ್ಷೇತ್ರದ ಜನಪ್ರತಿನಿಧಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಮನಗರ ಶಾಸಕರಿಗೆ ಸಂಬಂಧಿಸಿದ ವಿಡಿಯೋ ಬಿಡುಗಡೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುರೇಶ್‌ ಅವರು, ವಿಡಿಯೋ ಬಿಡುಗಡೆ ಮಾಡಲಿ. ಸಂತ್ರಸ್ತೆ ದೂರು ನೀಡಿದರೆ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ ಎಂದರು.

ನಿಮ್ಮ ಆಪ್ತರು ಎಂದು ವಿಡಿಯೋ ವೈರಲ್ ಮಾಡಿದ್ದಾರಾ ಎಂದು ಕೇಳಿದಾಗ, ಅಂತಹ ನೂರೆಂಟು ಇವೆ. ಬಾಂಬೆ ಬ್ಲೂ ಬಾಯ್ಸ್ ಗಳದ್ದು ಆಯ್ತು, ಯೋಗೇಶ್ವರ್ ಅವರು ಎಲ್ಲ ಮಠಗಳ ಪ್ರವಾಸ ಮಾಡಿದ್ದು ಆಯ್ತಾ? ಮಠದವರು ನಿಮ್ಮ ಬಳಿ ಖಾಸಗಿಯಾಗಿ ಆ ಬಗ್ಗೆ ಮಾತಾಡಿರಬೇಕಲ್ಲವೇ? ಅಮಿತ್ ಶಾ ಬಳಿ ಹೋಗಿ ಕೊಟ್ಟಿದ್ದಾಯ್ತು. ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರು ಬದಲಾವಣೆಯಾಗಲು ಕಾರಣವೇನು? ಅದನ್ನು ಯೋಗೇಶ್ವರ್ ಅವರೇ ಹೇಳಿದ್ದಾರೆ. ಹೀಗಾಗಿ ಒಬ್ಬೊಬ್ಬರದ್ದು ಒಂದೊಂದು ಇರುತ್ತದೆ ಎಂದು ತಿಳಿಸಿದರು.

ಸಂತ್ರಸ್ತೆಯರಿಗೆ ನ್ಯಾಯ ಒದಗಿಸಿಕೊಡುವುದು ಎಷ್ಟು ಮುಖ್ಯವೋ ವಿಡಿಯೋ ಬಿಡುಗಡೆ ಮಾಡಿದವರಿಗೆ ಶಿಕ್ಷೆಯಾಗುವುದು ಅಷ್ಟೇ ಮುಖ್ಯವಲ್ಲವೇ ಎಂದು ಪ್ರಶ್ನಿಸಿದಾಗ, ಯಾರೆಲ್ಲಾ ಕಾನೂನು ಚೌಕಟ್ಟಿನಲ್ಲಿ ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ಜರುಗಿಸಬೇಕು. ಇದು ಒಬ್ಬರ ವಿಚಾರವಲ್ಲ, ನೂಲಿನಂತೆ ಸೀರೆ ಎಂದು ಯಾರೋ ವ್ಯಾಖ್ಯಾನ ಮಾಡುತ್ತಿದ್ದರು. ಮೇಲಿನಿಂದಲೂ ಇದೇ ರೀತಿ ಇದೆಯಂತೆ. ಹಾಸನದಲ್ಲಿ ಹೋಗಿ ಒಂದು ರೌಂಡ್ ಹಾಕಿ, ಎಲ್ಲೆಲ್ಲಿ ಏನು ಚರ್ಚೆಯಾಗುತ್ತಿದೆ ಗೊತ್ತಾಗುತ್ತದೆ ಎಂದು ತಿಳಿಸಿದರು.

ದೂರಿನಲ್ಲಿ ಏನಿದೆ ಎಂಬ ಮಾಹಿತಿ ನನಗಿಲ್ಲ. ನಾನು ಮಾಧ್ಯಮಗಳ ಮೂಲಕ ವಿಚಾರ ತಿಳಿದೆ. ಸಂತ್ರಸ್ತೆ ದೂರಿನ ಆಧಾರದ ಮೇಲೆ ಎ1 ಮಾಡಿರುತ್ತಾರೆ. ಇದರಲ್ಲಿ ಯಾವುದೇ ರಾಜಕೀಯ ಬಣ್ಣವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಸ್ಐಟಿ ಬಳಿಕ ರಾಮನಗರ ಶಾಸಕರ ವಿಡಿಯೋ ಲೀಕ್ ಹಾಗೂ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರು ತಮ್ಮ ವಿಡಿಯೋ ಬಯಲಾಗದಂತೆ ತಡೆಯಾಜ್ಞೆ ಕೋರಿದ್ದು, ಇಂತಹ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ಎಸ್ಐಟಿ ಮೂಲಕ ತನಿಖೆ ಮಾಡುವುದು ಉತ್ತಮವಲ್ಲವೇ ಎಂದು ಕೇಳಿದಾಗ, ಇದಕ್ಕೆ ವಿಶೇಷವಾದ ಕಾನೂನು ತರಬೇಕು. ಈ ರೀತಿ ಬೆದರಿಸುವುದು, ಖಾಸಗಿ ಬದುಕಿಗೆ ಧಕ್ಕೆ ತರುವುದು, ಅಧಿಕಾರ ದುರ್ಬಳಕೆ ತಡೆಯಲು ಪ್ರತ್ಯೇಕ ಕಾನೂನು ತರಬೇಕು ಎಂದರು.

ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ಹೋಗುವುದಿಲ್ಲವೇ ಎಂಬ ಪ್ರಶ್ನೆಗೆ ಹೋಗಬೇಕಾಗಿತ್ತು. ನನ್ನ ಗಂಟಲು ಸರಿ ಇಲ್ಲ, ಔಷಧಿ ತೆಗೆದುಕೊಳ್ಳುತ್ತಿದ್ದೇನೆ ಎಂದು ಡಿ.ಕೆ.ಸುರೇಶ್ ತಿಳಿಸಿದರು.

ಬಾಕ್ಸ್‌........

ಶಾಸಕರ ವಿಡಿಯೋ ಹಂಚಿಕೆ ಸಂಬಂಧ ದೂರು

ರಾಮನಗರ: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರ ಖಾಸಗಿ ವಿಡಿಯೋ ಹರಿದಾಡಿದ ಬೆನ್ನಲ್ಲೇ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಜೋಗೀಂದರ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡಿರುವವರ ವಿರುದ್ಧ ದೂರು ನೀಡಿದ್ದಾರೆ.

ಶಾಸಕರ ತೇಜೋವಧೆ ಮಾಡಲು ಕೆಲ ಮಂದಿ ನಕಲಿ ವಿಡಿಯೋವನ್ನು ಎಡಿಟ್ ಮಾಡಿ ಈರೀತಿ ಪ್ರಸಾರ ಮಾಡುತ್ತಿದ್ದು, ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ. ಸದ್ಯಕ್ಕೆ ಎನ್‌ಸಿಆರ್ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.1ಕೆಆರ್ ಎಂಎನ್‌ 9.ಜೆಪಿಜಿ

ಸಂಸದ ಡಿ.ಕೆ.ಸುರೇಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article