ಕನ್ನಡಪ್ರಭ ವಾರ್ತೆ ಯಾದಗಿರಿ
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ರಾಜ್ಯದಲ್ಲಿ ಎಲ್ಲ ಸ್ಥಾನಗಳೂ ಎನ್‌ಡಿಎ ಒಕ್ಕೂಟದ ಪಾಲಾಗಲಿವೆ ಎಂದು ಮಾಜಿ ಸಚಿವ ಎ.ಬಿ. ಮಾಲಕರಡ್ಡಿ ತಿಳಿಸಿದರು.ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಯಾದಗಿರಿ ಮತಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಇಂತಹ ಒಂದು ಅಪರೂಪದ ಮೈತ್ರಿ ಕಾರಣದಿಂದಾಗಿ ಎಲ್ಲ ಸ್ಥಾನಗಳನ್ನೂ ಎನ್‌ಡಿಎ ಮೈತ್ರಿಕೂಟ ಗೆಲ್ಲಲಿದ್ದು, ಜೆಡಿಎಸ್ ಮೂರು ಸ್ಥಾನಗಳಲ್ಲೂ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಯಚೂರು ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರಗಳಲ್ಲಿ ಸಹ ಉತ್ತಮ ವಾತಾವರಣ ಇದ್ದು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ದೂರದೃಷ್ಟಿ ಕಾರ್ಯ, ಯೋಜನೆಗಳ ಬಗ್ಗೆ ಜನತೆಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕು ಎಂದರು.
ಪ್ರಸಕ್ತ ಚುನಾವಣೆ ದೇಶದ ಆಡಳಿತ ಆಯ್ಕೆ ಮಾಡುವ ಚುನಾವಣೆಯಾಗಿದ್ದು, ದೇಶ ಯಾರಕೈಲಿ ಸುಭದ್ರವಾಗಿರುತ್ತದೆ ಎಂಬ ಅಂಶವನ್ನು ಪ್ರಧಾನವಾಗಿಸಿಕೊಂಡು ಮತಚಲಾಯಿಸಲು ಜನರಿಗೆ ತಿಳಿಸುವ ಕೆಲಸವನ್ನು ಉಭಯ ಪಕ್ಷಗಳ ಕಾರ್ಯಕರ್ತರು ಮಾಡಬೇಕೆಂದು ತಿಳಿಸಿದರು.ದೇಶದ ಸಮಗ್ರತೆ ಏಕತೆಯನ್ನು ಕಾಯಲು ಎನ್.ಡಿ.ಎ. ಮೈತ್ರಿಕೂಟದಿಂದ ಮಾತ್ರ ಸಾಧ್ಯ. ಇಂಡಿ ಒಕ್ಕೂಟದಲ್ಲಿ ಯಾವುದೇ ಒಮ್ಮತವಿಲ್ಲ, ಹಿತವಿಲ್ಲ. ಕೇವಲ ಅಧಿಕಾರದ ದುರಾಸೆಗಾಗಿ ಒಂದಾದ ದುಷ್ಟಕೂಟವಾಗಿದ್ದು, ಅದನ್ನು ಪ್ರಜ್ಞಾವಂತ ನಾಗರಿಕರು ಮಾತ್ರ ಗುರುತಿಸುತ್ತಾರೆ. ಆದರೆ, ಎಲ್ಲರಿಗೂ ಈ ಬಗ್ಗೆ ತಿಳಿವಳಿಕೆ ಮೂಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ರಾಜ್ಯ ಕಾಂಗ್ರೆಸ್ ಗ್ಯಾರಂಟಿ ಹೆಸರಿನಲ್ಲಿ ಆಮಿಷವೊಡ್ಡಿ ಮತಗಳಿಕೆ ಮಾಡಿಕೊಂಡು ಅಧಿಕಾರ ಹಿಡಿಯಿತೇ ಹೊರತು ದೂರದೃಷ್ಟಿ ಅಭಿವೃದ್ಧಿಪರತೆ ಎಂಬುದಿಲ್ಲ. ಇಂತಹ ಆಮಿಷ ಒಡ್ಡಿ, ಅಧಿಕಾರ ಹಿಡಿದವರು ಲೂಟಿ ಮಾಡುವುದು ಬಿಟ್ಟರೆ ಇನ್ನೇನು ಮಾಡುವುದಿಲ್ಲ ಎಂಬುದನ್ನು ರಾಜ್ಯದ ಜನತೆ ಅರಿತುಕೊಂಡಿದ್ದಾರೆ ಎಂದರು.ಜೆಡಿಎಸ್ ಮುಖಂಡ ಶ್ರೀನಿವಾಸರಡ್ಡಿ ಕಂದಕೂರ ಮತ್ತು ಜೆಡಿಎಸ್ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಮಾತನಾಡಿದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲಣ್ಣಗೌಡ ಹಳಿಮನಿ, ವಿಶ್ವನಾಥ ಸಿರವಾರ, ನಾಗರತ್ನ ಅನಪೂರ, ಬಾಪಯ್ಯ ವಡಗೇರಾ, ಡಾ. ಸುಭಾಸ ಕರಣಿಗಿ, ರಾಹುಲಗೌಡ ಎಂ. ಅರಿಕೇರಿ, ಮಲ್ಲಿಕಾರ್ಜುನ ಬೆಳಗೇರಿ, ಬಂದಪ್ಪ ಅರಳಿ, ಬಾಬುಗೌಡ ಮುಷ್ಟೂರ್, ಖಂಡಪ್ಪ ಪೂಜಾರಿ, ಶಿವರಾಜ ಜಕಾತಿ, ಅನಿಲ್ ಕೊಡಿಲ್, ರುದ್ರುಗೌಡ ಗುರುಸುಣಗಿ, ಮಲ್ಲಕರಡ್ಡಿ ತಂಗಡಗಿ, ಮಲ್ಲಿಕಾರ್ಜುನ ಮೇಟಿ, ದೇವರಡ್ಡಿ ಟಿ. ವಡಿಗೇರಿ, ಮಲ್ಲಿಕಾರ್ಜುನ ತಳಕ ಸೇರಿದಂತೆ ಇತರರಿದ್ದರು.