ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯಾದ್ಯಂತ ಯುವ ಕಾಂಗ್ರೆಸ್ ಸದೃಢವಾದರೆ, ಕಾಂಗ್ರೆಸ್ ಬಲಿಷ್ಟಗೊಂಡು ಸಂಘಟನೆ ಮತ್ತು ಅಧಿಕಾರ ಪಡೆಯುವಲ್ಲಿ ಮುಂಚೂಣಿಯಲ್ಲಿರುತ್ತದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಪ್ರದೇಶದ ಯುವ ಕಾಂಗ್ರೆಸ್ ವತಿಯಿಂದ ನವ ಚಾಮರಾಜನಗರ ನಿರ್ಮಾಣಕ್ಕಾಗಿ ಯುವ ಸಂಕಲ್ಪ ಹಾಗೂ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವಾಗಿದೆ. ಇಂಥ ಪಕ್ಷವನ್ನು ದೇಶಾದ್ಯಂತ ಸಧೃಢವಾಗಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಎಲ್ಲರು ಶ್ರಮಿಸೋಣ. ಕೇವಲ ಫ್ಲೆಕ್ಸ್ ಬ್ಯಾನರ್‌ನಲ್ಲಿ ಪೋಟೋ ಬಂದರಷ್ಟೇ ನಾಯಕರಾಗುವುದಿಲ್ಲ.ನಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿ, ಪಕ್ಷವನ್ನು ಸಂಘಟನೆ ಮಾಡುವ ಜೊತೆಗೆ ವೈಯಕ್ತಿಕವಾಗಿ ನಾಯಕತ್ವ ವೃದ್ದಿಸಿಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮುನ್ನಡೆಯಬೇಕು. ಜಿಲ್ಲೆಯ ಬಗ್ಗೆ ನನಗೆ ಹೆಮ್ಮೆ ಇದೆ. ಇಲ್ಲಿಗೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಅಪ ನಂಬಿಕೆ ಇದೆ. ಇದು ಶುದ್ಧ ಸುಳ್ಳು. ನಾನು ಇಲ್ಲಿಂದಲೇ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಚಾರ ಆರಂಭಿಸಿದೆ. ಅಭೂತವಾಗಿ ಜಯಗಳಿಸಿದ್ದೇನೆ ಎಂದು ಜಿಲ್ಲೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಸಂಘಟನಾ ಚತುರ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಸಂಘಟನೆಯನ್ನು ನೋಡಿ ಬೆಳೆದವನು. ಅವರು ನನ್ನ ಗುರುಗಳು. ಜಿಲ್ಲೆಯಲ್ಲಿ ಡಾ.ಅಂಬೇಡ್ಕರ್ ಅನುಯಾಯಿಗಳು ಹೆಚ್ಚಿದ್ದಾರೆ ಎಂದರು. ಈ ಮೂಲಕ ಅಂಬೇಡ್ಕರ್ ಜನ್ಮ ದಿನೋತ್ಸವದ ಶುಭಾಶಯ ಕೋರಿದರು.
ಇಂದಿನಿಂದಲೇ ನೂತನ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸಂಘಟನೆಗೆ ಒತ್ತು ನೀಡಬೇಕು. ಗ್ರಾಪಂ ಹಾಗೂ ವಾರ್ಡ್‌ಗಳ ಮಟ್ಟದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಬೇಕು. ಬೂತ್ ಮಟ್ಟದ ಪದಾಧಿಕಾರಿಗಳ ಪಟ್ಟಿಯನ್ನು ನೀಡಿ, ಸಂಘಟನೆಗೆ ಮುಂದಾಗಬೇಕು. ಕೇಂದ್ರ ಸರ್ಕಾರ ಜನವಿರೋಧಿ ನೀತಿ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ದಿನವೇ ಸಂಘಟನೆಗೊಂಡು ಕಾರ್ಯಕ್ರಮ ರೂಪಿಸಬೇಕು. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಬೇಕು. ಯುವ ನಿಧಿಗೆ ಪದವಿ ಪೂರ್ಣಗೊಂಡು ಯುವಕ, ಯುವತಿಯರನ್ನು ಸೇರ್ಪಡೆ ಮಾಡಿ ಸರ್ಕಾರ ಅವರಿಗೆ ಹಣ ತಲುಪುವಂತೆ ನೋಡಿಕೊಳ್ಳಬೇಕು. ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದರು. ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ, ಜಿಲ್ಲೆಯ ಉಸ್ತುವಾರಿ, ಮಾಜಿ ವಿಪ ಉಪ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪೂರಕವಾಗಿದೆ. ಕಳೆದ ೭೫ ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಡಾ.ಅಂಬೇಡ್ಕರ್ ಆಶಯದಂತೆ ಪಕ್ಷ ಹಾಗೂ ಸರ್ಕಾರ ಮುನ್ನಡೆಯುತ್ತಿದೆ. ಸಾಮಾಜಿಕ ಬದ್ಧತೆಯನ್ನು ಕಾಂಗ್ರೆಸ್ ಹೊಂದಿದೆ. ಇಂಥ ಪಕ್ಷದ ಯುವ ಕಾಂಗ್ರೆಸ್ ಘಟಕ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುವ ಮೂಲಕ ಭವಿಷ್ಯದ ನಾಯಕರಾಗಿ ಹೊರಹೊಮ್ಮಬೇಕು ಎಂದರು. ಸ್ಥಳೀಯರಿಗೆ ಅಧಿಕಾರ ಹಾಗೂ ನಾಯಕತ್ವವನ್ನು ನೀಡುವ ಜಿಪಂ. ತಾಪಂ ಚುನಾವಣೆ ನಡೆಸಲು ಸರ್ಕಾರ ಮುಂದಾಗಬೇಕು. ಈ ಸಮಾವೇಶದ ಮೂಲಕ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. ಭವಿಷ್ಯದ ನಾಯಕರನ್ನು ಹುಟ್ಟಿ ಹಾಕುವ ಶಕ್ತಿ ಹೊಂದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲು ಸರ್ಕಾರ ಹೆಚ್ಚಿನ ಗಮನ ವಹಿಸಬೇಕು ಎಂದರು.ಸಂಸದ ಸುನೀಲ್ ಬೋಸ್ ಮಾತನಾಡಿ, ಯುವ ಕಾಂಗ್ರೆಸ್ ಸಂಘಟನೆಯ ಜೊತೆಗೆ ಚುನಾವಣೆಯಲ್ಲಿ ಶೇ.೪೦ರಷ್ಟು ಟಿಕೆಟ್ ಅನ್ನು ಯುವಕರಿಗೆ ನೀಡುವ ಮೂಲಕ ಮುಂದಿನ ನಾಯಕತ್ವಕ್ಕೆ ಭದ್ರ ಬುನಾದಿಯಾಗಬೇಕು ಎಂದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಯೋಗೇಂದ್ರ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ೬೩ ಸಾವಿರಕ್ಕು ಹೆಚ್ಚು ಯುವಕರನ್ನು ಪಕ್ಷಕ್ಕೆ ನೋಂದಣಿ ಮಾಡಿಸಲಾಗಿದೆ. ಕಾಂಗ್ರೆಸ್ ತತ್ವ ಸಿದ್ದಾಂತ ಹಾಗೂ ಗಾಂಧಿ ಮತ್ತು ಅಂಬೇಡ್ಕರ್ ಆಶಯದಂತೆ ಸಂಘಟನೆ ಮಾಡಲಾಗುತ್ತಿದೆ. ಪಕ್ಷದಲ್ಲಿ ಸಾಮಾನ್ಯ ವ್ಯಕ್ತಿ ಉನ್ನತ ಸ್ಥಾನ ಪಡೆದುಕೊಳ್ಳಲು ಅವಕಾಶವಿದೆ. ತಳ ಮಟ್ಟದಿಂದ ನಾವೆಲ್ಲ ಸೇರಿ ಸಂಘಟನೆ ಮಾಡೋಣ ಎಂದರು. ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಸಿ.ಬಸವರಾಜು, ಮಿಲಿಂದ್ ಧರ್ಮಸೇನಾ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆರೆಹಳ್ಳಿ ನವೀನ್, ರಫಿಕ್ ಅಹಮದ್, ಚೇತನ ದೊರೆರಾಜ್, ಯುವ ಮುಖಂಡ ನಾಗೇಂದ್ರ ನಾಯಕ್, ಜಿಲ್ಲಾ ಉಪಾಧ್ಯಕ್ಷ ಸೈಯದ್ ಮುಸಾಯಿಬ್, ಸೈಯದ್ ಇಸ್ಮಾಹಿಲ್. ಚಂದನ್ ಪುಟ್ಟಬುದ್ದಿ, ಗೀತಾ, ರವಿ, ಶಿವಕುಮಾರ್, ಚಾ.ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್‌ಕುಮಾರ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಶ್ರೀನಿವಾಸ್, ನಗರ ಘಟಕದ ಅಧ್ಯಕ್ಷ ದ್ವಾರ್ಕಿ ಹಾಗೂ ಪದಾಧಿಕಾರಿಗಳು ಇದ್ದರು.