ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ತಾಲೂಕಿನ ಮನಗೂಳಿ ಸರ್ಕಾರಿ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಕೊರತೆ ಇರುವ ಬಗ್ಗೆ ನನ್ನ ಗಮನಕ್ಕೆ ಏಕೆ ತಂದಿಲ್ಲ?. ಒಟ್ಟು ತಾಲೂಕಿನ ಪಿಎಚ್‌ಸಿ ಕೇಂದ್ರಗಳಲ್ಲಿ ಎಷ್ಟು ವೈದ್ಯರ ಕೊರತೆ ಇದೆ ಎಂಬುವುದರ ಬಗ್ಗೆ ಸಂಪೂರ್ಣವಾಗಿ ನನಗೆ ಮಾಹಿತಿ ನೀಡಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಖಡಕ್ಕಾಗಿ ಸಚಿವ ಶಿವಾನಂದ ಪಾಟೀಲ ಸೂಚಿಸಿದರು.ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ಜರುಗಿದ ಅಖಂಡ ತಾಲೂಕಿನ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಎಚ್‌ಒ ಗುನಾರೆ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು ತಾಲೂಕಿನ ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳಿವೆ. ತಾಲೂಕು ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಸಮಸ್ಯೆ ಪರಿಹರಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಇಲಾಖೆ ವಸತಿ ಗೃಹದಲ್ಲಿಯೇ ವಾಸಿಸಬೇಕು. ತಾಲೂಕಿನಲ್ಲಿ ಎಂ.ಸಿ.ಎಚ್ ಆಸ್ಪತ್ರೆ ಸೇರಿದಂತೆ ಹೆಚ್ಚುವರಿಯಾಗಿ ಆ್ಯಂಬುಲೆನ್ಸ್ ಕಲ್ಪಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಚಿವರಿಗೆ ಮನವಿ ಮಾಡಿದರು.
ಪಟ್ಟಣದಲ್ಲಿ ಬೀದಿ ದೀಪಗಳಿಗೆ ವಾಹನಗಳು ಡಿಕ್ಕಿ ಹೊಡೆಯುತ್ತಿರುವುದರಿಂದ ಹಾನಿ ಉಂಟಾಗುತ್ತಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರೇ ಸಾಲದು. ಅಪಘಾತ ತಡೆಕಟ್ಟುವ ನಿಟ್ಟಿನಲ್ಲಿ ಹಾಗೂ ಹಾನಿಗೊಳಗಾದ ವಿದ್ಯುತ್ ಕಂಬಗಳ ದುರಸ್ತಿಗೆ ಕ್ರಮಕೈಗೊಳ್ಳಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಬಳೂತಿ ಮತ್ತು ಚಿಮ್ಮಲಗಿಯಲ್ಲಿ ಸರ್ಕಾರಿ ಜಾಗದ ಒತ್ತುವರಿಯಾದ ಬಗ್ಗೆ ಆರೋಪ ಕೇಳಿಬರುತ್ತಿದೆ. ಸಂಬಂಧಿಸಿದ ಅಧಿಕಾರಿಗು ಈ ಕುರಿತು ಸಂಪೂರ್ಣ ವಿವರ ಪಡೆದುಕೊಂಡು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಪಟ್ಟಣದಲ್ಲಿ ಕುರಿ, ದನಕರುಗಳ ಔಷಧಿ ಅಂಗಡಿಗಳಿವೆ. ಅಂಗಡಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಅಂಗಡಿಗಳ ಪರವಾನಿಗೆ ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಅಖಂಡ ತಾಲೂಕಿನಲ್ಲಿರುವ ಪಶು ಆಸ್ಪತ್ರೆಗಳಲ್ಲಿ ಮಧ್ಯಾಹ್ನ 3 ಗಂಟೆ ನಂತರ ವೈದ್ಯರು ಇರುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಪಶು ಸಂಜೀವಿನಿ ವಾಹನದ ಮೂಲಕ ರೈತರ ಮನೆ ಬಾಗಿಲಿಗೆ ತೆರಳಿ ಸೇವೆ ನೀಡಬೇಕು. ಆದರೆ, ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಗಮನ ಹರಿಸುವಂತೆ ಪಶು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತಿ ಪಿಡಿಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ಒದಗಿಸುತ್ತಿಲ್ಲ ಹಾಗೂ ಪಿಡಿಒಗಳ ಮೊಬೈಲ್ ಸ್ವಿಚ್ ಆಫ್ ಇರುತ್ತದೆ ಎಂಬ ಆರೋಪ ಕೇಳಿಬಂದಿದೆ. ಈ ನಿಟ್ಟಿನಲ್ಲಿ ತಾಲೂಕು ಪಂಚಾಯತಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.ವರ್ಷಕ್ಕೆ ₹2 ಕೋಟಿ ತೆರಿಗೆ ಸಂಗ್ರಹಿಸುತ್ತಿರುವ ಕೂಡಗಿ ಪಂಚಾಯತಿಯಲ್ಲಿ ಪಿಡಿಒ ನಿರ್ಲಕ್ಷದಿಂದ ಇನ್ನು ಬಯಲು ಶೌಚಾಲಯ ಜಾರಿಯಲ್ಲಿದೆ ಎಂದು ಸಚಿವರು ಕೂಡಗಿ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಎಲ್ಲ ಪಿಡಿಒಗಳು ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಮುಳ್ಳುಕಂಟಿ ಗಿಡಗಳನ್ನು ತೆರವುಗೊಳಿಸಬೇಕು. ಗ್ರಾಮದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಜನರ ಅನುಕೂಲಕ್ಕಾಗಿ ಗ್ರಾಮ ಲೆಕ್ಕಾಧಿಕಾರಿಗಳು ಮಧ್ಯಾಹ್ನ 2 ಗಂಟೆಯವರೆಗೆ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಹಸೀಲ್ದಾರ್‌ಗೆ ಸೂಚಿಸಿದರು.
ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧೆಡೆ ಖಾಸಗಿಯರು ಹೊಸ ಲೇಔಟ್‌ಗಳನ್ನು ಹಾಕಿದ್ದಾರೆ. ಲೇಔಟ್‌ಗಳಿಗೆ ಪರವಾನಿಗೆ ಪಡೆದುಕೊಂಡಿರುವ ಬಗ್ಗೆ ತಿಳಿದುಕೊಳ್ಳಬೇಕು. ಅನಧಿಕೃತ ಲೇಔಟ್‌ಗಳು ಕಂಡು ಬಂದರೆ ಅಂತಹವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಗುರುನಾಥ ದಡ್ಡಿ, ಬಸವನಬಾಗೇವಾಡಿ ತಹಸೀಲ್ದಾರ್ ವೈ.ಎಸ್.ಸೋಮನಟ್ಟಿ, ನಿಡಗುಂದಿ ತಹಸೀಲ್ದಾರ್ ಎ.ಡಿ.ಅಮರವಾಡಗಿ, ಕೊಲ್ಹಾರ ತಹಸೀಲ್ದಾರ್ ಎಸ್.ಎಸ್.ನಾಯಕಲಮಠ, ಇಒಗಳಾ ಪ್ರಕಾಶ ದೇಸಾಯಿ, ವೆಂಕಟೇಶ ವಂದಾಲ, ಸುನೀಲ ಮದ್ದಿನ ಇದ್ದರು. 19 ಬಿಜಿಡಿ 1ಬಸವನಬಾಗೇವಾಡಿಯ ಪುರಸಭೆ ಸಭಾಭವನದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಸಚಿವ ಶಿವಾನಂದ ಪಾಟೀಲ ಮಾತನಾಡಿದರು.