ಕನ್ನಡಪ್ರಭ ವಾರ್ತೆ, ಕಡೂರು
ಉತ್ತಮ ಮಾರ್ಗದರ್ಶನದ ಮೂಲಕ ಸಾಧಿಸುವ ಗುರಿ ಮತ್ತು ಕಠಿಣ ಪರಿಶ್ರಮ ಇದ್ದರೆ ಯಶಸ್ಸುಗಳಿಸಲು ಸಾಧ್ಯ ಎಂದು ಅರ್ಜುನ ಪ್ರಶಸ್ತಿ ಪುರಸ್ಕೃತ ಅಂತರ ರಾಷ್ಟ್ರೀಯ ಕಬಡ್ಡಿ ಆಟಗಾರ ಡಾ.ಸಿ. ಹೊನ್ನಪ್ಪ ಗೌಡ ಹೇಳಿದರು. ತಾಲೂಕಿನ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಕಬಡ್ಡಿ 2023-24 ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಯಾವ ಹಿನ್ನೆಲೆಯೂ ಇಲ್ಲದೆ ಬಡ ಕುಟುಂಬದಿಂದ ಬಂದು ಪರಿಶ್ರಮದಿಂದ ಈ ಸ್ಥಾನಕ್ಕೆ ಬಂದಿದ್ದೇನೆ. ಕಬಡ್ಡಿ ಅಪಾರ ದೈಹಿಕ ಶ್ರಮವನ್ನು ಬಯಸುವ ಕ್ರೀಡೆ. ಈ ಕ್ರೀಡೆಯಲ್ಲಿ ಯಶಸ್ಸುಗಳಿಸಲು ನಿಖರ ಗುರಿ ಮತ್ತು ಸತತ ಅಭ್ಯಾಸ ಬಹುಮುಖ್ಯ. ದೈಹಿಕ ಮತ್ತು ಮಾನಸಿಕವಾಗಿ ಬಹು ಗಟ್ಟಿ ಯಾಗಿರುವುದು ಅತ್ಯಂತ ಅವಶ್ಯಕ. ದುಶ್ಚಟಗಳ ದಾಸರಾದಲ್ಲಿ ಈ ಕ್ರೀಡೆಯಲ್ಲಿ ವಿಫಲರಾಗುವುದು ನಿಶ್ಚಿತ ಎಂದರು.ಕ್ರೀಡಾಳುಗಳು ದೈಹಿಕ ಆರೋಗ್ಯ ಕಾಪಾಡಿಕೊಂಡು ಕಬಡ್ಡಿ ಕ್ರೀಡೆಯಲ್ಲಿ ಸಾಧನೆ ಮಾಡಬಹುದು. ಎಲ್ಲ ಜಿಲ್ಲೆಗಳಲ್ಲಿ ಕಬಡ್ಡಿ ಹಾಸ್ಟೆಲ್ ಆರಂಭಿಸಲು ಸರ್ಕಾರ ಮುಂದಾಗಬೇಕು. ಕಡೂರಿಲ್ಲೂ ಈ ಕಾರ್ಯವಾದರೆ ಅಪ್ಪಟ ದೇಸೀ ಕ್ರೀಡೆಗೆ ಅಪಾರ ಮನ್ನಣೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಶಾಸಕ ಕೆ.ಎಸ್.ಆನಂದ್ ಆಸಕ್ತಿ ವಹಿಸಲಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕಬಡ್ಡಿ ಕೇವಲ ಕ್ರೀಡೆಯಲ್ಲ. ನಮ್ಮ ದೈಹಿಕ ಮತ್ತು ಮಾನಸಿಕ ಸ್ಥಿತಿ ಸಮತೋಲನದಲ್ಲಿಡುವ ಹಾಗೂ ಉತ್ಸಾಹ ಮೂಡಿಸುವ ಆಟ ಎಂದರು. ಯುವ ಸಬಲೀಕರಣ ಇಲಾಖೆ ಉಪ ನಿರ್ದೇಶಕಿ ಡಾ.ಮಂಜುಳಾ ಹುಲ್ಲಹಳ್ಳಿಮಾತನಾಡಿ, ನಮ್ಮ ಸಂಸ್ಕೃತಿ ಪ್ರತೀಕವಾದ ಕಬಡ್ಡಿ ಈಗ ಗ್ರಾಮೀಣ ಕ್ರೀಡೆಯಾಗಿಯೇ ಉಳಿಯದೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಇದು ನಮ್ಮ ನೆಲದ ಸಂಸ್ಕೃತಿಗೆ ಸಂದ ಗೌರವ ಎಂದರು.ಪುರಸಭೆ ಹಿರಿಯ ಸದಸ್ಯ ಈರಳ್ಳಿ ರಮೇಶ್ ಮಾತನಾಡಿ, ನಮ್ಮ ದೇಸಿ ಕ್ರೀಡೆಯಾದ ಕಬ್ಬಡಿ ದೈಹಿಕ ಆರೋಗ್ಯ ಕಾಪಾಡುವ ಕ್ರೀ ಡೆ ಆಗಿದ್ದು ಸರಕಾರ ಕಬ್ಬಡಿ ಸೇರಿದಂತೆ ಸಾಂಪ್ರದಾಯಿಕ ಆಟಗಳನ್ನು ರಾಷ್ಟ್ರೀಯ ಕ್ರೀಡೆಗಳಾಗಿ ಮಾನ್ಯ ಮಾಡಿರುವ ಕಾರಣ ಉತ್ತಮ ಕ್ರೀಡಾ ಪ್ರತಿಭೆಗಳು ಹೊರಬರಲು ಸಾಧ್ಯವಾಗಿದೆ ಎಂದರು.
ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ 29 ಪ್ರಥಮ ದರ್ಜೆ ಕಾಲೇಜಿನ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಿಮ್ಮರಾಜು ತಿಳಿಸಿದರು.ಪ್ರಾಚಾರ್ಯ ಡಾ.ಕೆ.ಎ.ರಾಜಣ್ಣ, ಪುರಸಭಾ ಸದಸ್ಯ ಈರಳ್ಳಿ ರಮೇಶ್, ,ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಎನ್.ಡಿ.ವಿರೂಪಾಕ್ಷ, ಉಪನ್ಯಾಸಕರಾದ ತಿಮ್ಮೇಗೌಡ, ಮಂಜುನಾಥ್, ಜಯಪ್ರಕಾಶ್,ಸವಿತಾ ಮತ್ತಿತರರು ಇದ್ದರು.
2ಕೆಕೆಡಿಯು2.ಕಡೂರು ತಾಲ್ಲೂಕಿನ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಕಬಡ್ಡಿ 2023-24 ಪಂದ್ಯಾವಳಿ ಉದ್ಘಾಟನಾ ಸಮಾರಂಭ ನಡೆಯಿತು.
2ಕೆಕೆಡಿಯು2ಎ ಕಡೂರು. ತಾಲೂಕಿನ ಮಲ್ಲೇಶ್ವರದ ಶ್ರೀಮತಿ ಪುಟ್ಟಮ್ಮ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ನಡೆದ ಕುವೆಂಪು ವಿಶ್ವವಿದ್ಯಾಲಯದ ಅಂತರ ಕಾಲೇಜು ಕಬಡ್ಡಿ ಪಂದ್ಯಾವಳಿಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಹೊನ್ನಪ್ಪಗೌಡ, ಡಾ. ಕೆ.ಎ.ರಾಜಣ್ಣ ತಂಡಗಳ ಪರಿಚಯ ಮಾಡಿಕೊಂಡರು.