ಎನ್‌ಡಿಎ ನಾಯಕರು ನಮ್ಮ ಪ್ರಶ್ನೆಗಳಿಗೆ ಉತ್ತರಿಸಲಿ: ಡಿ.ಕೆ.ಶಿವಕುಮಾರ್‌

KannadaprabhaNewsNetwork | Published : Aug 3, 2024 12:39 AM

ಸಾರಾಂಶ

ಎನ್ ಡಿಎ ಮಿತ್ರಪಕ್ಷಗಳಾದ ಬಿಜೆಪಿ - ಜೆಡಿಎಸ್ ಬೆಂಗಳೂರಿನಿಂದ ಮೈಸೂರುವರೆಗೆ ಕೈಗೊಂಡಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ರಾಮನಗರದಲ್ಲಿ ಜನಾಂದೋಲನ ನಡೆಸುವ ಮೂಲಕ ಟಕ್ಕರ್ ನೀಡಿದೆ.

- ಕುಮಾರಣ್ಣ ನಿಮ್ಮ ಕುಟುಂಬದ ಆಸ್ತಿ ಎಷ್ಟಿದೆ ಹೇಳಿ - ವಿಜಯೇಂದ್ರ ತಾಕತ್ತಿದ್ರೆ ಕುಮ್ಮಕ್ಕು ಕೊಟ್ಟವನ ಹೆಸರೇಳಲಿಕನ್ನಡಪ್ರಭ ವಾರ್ತೆ ರಾಮನಗರ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರು ಕೇಳಿ ಬಂದಿರುವುದನ್ನೇ ಅಸ್ತ್ರವಾಗಿ ಬಳಕೆ ಮಾಡಿಕೊಂಡು ಎನ್ ಡಿಎ ಮಿತ್ರಪಕ್ಷಗಳಾದ ಬಿಜೆಪಿ - ಜೆಡಿಎಸ್ ಬೆಂಗಳೂರಿನಿಂದ ಮೈಸೂರುವರೆಗೆ ಕೈಗೊಂಡಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಜನಾಂದೋಲನ ನಡೆಸುವ ಮೂಲಕ ಟಕ್ಕರ್ ನೀಡಿದೆ.

ಬಿಡದಿ ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಎನ್ ಡಿಎ ನೇತೃತ್ವದ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಹಾಗೂ ಬಿಜಿಪಿಯ 21 ಭ್ರಷ್ಟ ಹಗರಣಗಳ ವಿರುದ್ಧ ಜನಾಂದೋಲನ ನಡೆಸಿದ ಕಾಂಗ್ರೆಸ್ ನಾಯಕರು ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ತರಾಟೆ ತೆಗೆದುಕೊಂಡರು. ಅಲ್ಲದೇ ಅವರ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ಚರ್ಚೆಗೆ ಪಂಥಾಹ್ವಾನ ನೀಡಿದರು.

ಜನಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಭ್ರಷ್ಟಾಚಾರಿಗಳಿಂದ ಭ್ರಷ್ಟಾಚಾರಿಗಳಿಗೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಪಾದಯಾತ್ರೆ ಮೂಲಕ ನಮಗೆ ಈ ಪವಿತ್ರವಾದ ಜನಾಂದೋಲನವನ್ನು ಹಮ್ಮಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಈ ಪಾದಯಾತ್ರೆ ಹಮ್ಮಿಕೊಳ್ಳದಿದ್ದರೆ, ಜನತಾದಳವನ್ನು ಬಿಜೆಪಿ ಜತೆ ವಿಲೀನ ಮಾಡದಿದ್ದರೆ, ನಾವು ಈ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಲೇವಡಿ ಮಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಮೂಲಕ ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿಗೆ ಬಂದಾಗ ಅವರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಬಿಜೆಪಿ ಅವಧಿಯಲ್ಲಿ ಬೋವಿ ನಿಗಮದಲ್ಲಿ 87 ಕೋಟಿ, ಕೃಷಿ ಮಾರುಕಟ್ಟೆಗಳಲ್ಲಿ 47 ಕೋಟಿ ಅಕ್ರಮ ನಡೆದಿದೆ. ಈ ಹಗರಣ ನಡೆದಾಗ ಯಾರು ಮುಖ್ಯಮಂತ್ರಿ, ಯಾರು ಮಂತ್ರಿ, ಯಾರು ನಿಗಮದ ಅಧ್ಯಕ್ಷರಾಗಿದ್ದರು? ಈ ಬಗ್ಗೆ ನೀವು ಉತ್ತರ ನೀಡಬೇಕು ಎಂದು ಹೇಳಿದರು.

ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿಜೆಪಿಯ ವೀರಯ್ಯ ಅವರು 47 ಕೋಟಿ ನುಂಗಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಆತ ಜೈಲು ಸೇರಿದ್ದಾನೆ. ಬಿಜೆಪಿ ಹಾಗೂ ಜೆಡಿಎಸ್‌ನವರು ಈ ಅಕ್ರಮದ ಬಗ್ಗೆ ಏಕೆ ಹೋರಾಟ ಮಾಡುತ್ತಿಲ್ಲ? ಈ ಅಕ್ರಮದ ತನಿಖೆಯನ್ನು ಅವರೇ ಏಕೆ ತನಿಖೆ ಮಾಡಿಸಲಿಲ್ಲ? ಹೀಗೆ ಅವರ ಕಾಲದಲ್ಲಿ ಆಗಿರುವ ಅಕ್ರಮಗಳ ದೊಡ್ಡ ಪಟ್ಟಿಯೇ ನಮ್ಮ ಬಳಿ ಇದೆ ಎಂದು ತಿಳಿಸಿದರು.

ಕುಮಾರಣ್ಣ, ಅಶೋಕಣ್ಣಾ, ವಿಜಯೇಂದ್ರ, ಅಶ್ವತ್ಥ್ ನಾರಾಯಣ, ಸಿ.ಟಿ ರವಿ ನೀವು ನಮ್ಮ ಈ ಪ್ರಶ್ನೆಗಳಿಗೆ ಪಾದಯಾತ್ರೆ ವೇಳೆ ಉತ್ತರ ನೀಡಬೇಕು. ನೀವು ಹೇಳದಿದ್ದರೆ ನಾವು ಹೇಳುತ್ತೇವೆ. ನಾವು ಹೇಳಲು ಇನ್ನು ಒಂದು ವಾರ ಕಾಲಾವಕಾಶವಿದೆ ಎಂದು ಹೇಳಿದರು.

ತಾಕತ್ತಿದ್ರೆ ಕುಮ್ಮಕ್ಕು ಕೊಟ್ಟವನ ಹೆಸರೇಳಲಿ:

ಇನ್ನು ವಿಜಯೇಂದ್ರ ನನ್ನ ಮೇಲೆ ಆರೋಪ ಮಾಡುತ್ತಾ, ಈ ಪಾದಯಾತ್ರೆ ಹಿಂದೆ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದು ಹೇಳಿದ್ದಾನೆ. ಹೇ.. ವಿಜಯೇಂದ್ರ ನಿನಗೆ ತಾಕತ್ತಿದ್ದರೆ, ಧೈರ್ಯವಿದ್ದರೆ ನೀವು ಹೇಳಿದಂತೆ ಕಾಂಗ್ರೆಸ್ ಪಕ್ಷದ ಯಾವನು ಪಾದಯಾತ್ರೆಗೆ ಕುಮ್ಮಕ್ಕು ನೀಡಿದ್ದಾನೆ ಅವನ ಹೆಸರು ಹೇಳು ಎಂದು ವಿಜಯೇಂದ್ರ ವಿರುದ್ಧ ಗುಡಗಿದ ದಿ.ಕೆ.ಶಿವಕುಮಾರ್‌, ನಿಮ್ಮ ತಂದೆಗೆ ಕಾಂಗ್ರೆಸ್‌ ಸರ್ಕಾರ ಭಿಕ್ಷೆ ಕೊಟ್ಟಿದೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ ಪ್ರಸ್ತಾಪಿಸಿದರು.

ಕುಮಾರಣ್ಣ ನಿಮ್ಮ ಕುಟುಂಬದ ಆಸ್ತಿ ಬಗ್ಗೆ ಮಾತಾಡಿ:

ಕುಮಾರಸ್ವಾಮಿ ಅವರೇ, ನೀವು ಕೇಂದ್ರ ಸಚಿವರನ್ನು ಭೇಟಿ ಮಾಡಿ ನನ್ನ ಕುಟುಂಬದ ಆಸ್ತಿಯ ಪಟ್ಟಿ ಕೊಟ್ಟಿರುವುದು ನನಗೆ ಗೊತ್ತಿದೆ. ನನ್ನ ಆಸ್ತಿ ಎಷ್ಟಿದೆ, ಸಿದ್ದರಾಮಯ್ಯ ಅವರ ಆಸ್ತಿ ಎಷ್ಟಿದೆ ಅಂತ ಪಟ್ಟಿ ಕೊಟ್ಟಿದ್ದೀರಿ. ಬಹಳ ಸಂತೋಷ. ಇದಕ್ಕೆಲ್ಲ ನಾನು ಸಿದ್ಧನಾಗಿದ್ದೇನೆ, ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.

ನಿಮ್ಮ ತಂದೆ ಈ ಜಾಗಕ್ಕೆ ಬಂದಾಗ ನಿಮ್ಮ ತಂದೆ ಬಳಿ ಎಷ್ಟು ಆಸ್ತಿ ಇತ್ತು. ಇಲ್ಲಿ ಬಂದ ನಂತರ ಎಷ್ಟು ಜಮೀನು ಪಡೆದುಕೊಂಡಿರಿ? ಯಾರ ಜಮೀನನ್ನು ಪಡೆದುಕೊಂಡಿರಿ? ಈಗ ಎಷ್ಟು ಎಕರೆ ಅಸ್ತಿಯಾಗಿದೆ? ಆ ಆಸ್ತಿಗಳು ಯಾರ ಹೆಸರಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಮತ್ತೆ ಮರಳಿ ನಿಮ್ಮ ಹೆಸರಿಗೆ ಬಂದಿದ್ದು ಹೇಗೆ? ಎಂದು ಪ್ರಶ್ನಿಸಿದರು.

ನಿಮ್ಮ ಹಾಗೂ ನಿಮ್ಮ ಕುಟುಂಬದವರದ್ದು ಇಲ್ಲಿ ನೂರಾರು ಎಕರೆ, ಕುಂಬಳಗೋಡು ಬಳಿ 200-250 ಎಕರೆ, ದೊಡ್ಡ ಗುಬ್ಬಿ ಹಾಗೂ ಚಿಕ್ಕ ಗುಬ್ಬಿ, ಬೆಂಗಳೂರು ಉತ್ತರದ ಯಲಹಂಕ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ, ಹಾಸನ, ನೆಲಮಂಗಲದಲ್ಲಿ ಎಷ್ಟು ಆಸ್ತಿ ಇದೆ? ಇವುಗಳ ಮೌಲ್ಯ ಎಷ್ಟು? ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.

ನಿಮ್ಮ ಸಹೋದರ ಬಾಲಕೃಷ್ಣಗೌಡ ಒಬ್ಬ ಸರ್ಕಾರಿ ಅಧಿಕಾರಿ, ನೀವು ಸಿನಿಮಾ ಪ್ರದರ್ಶಕರು, ನಿಮ್ಮ ತಂದೆ ಗುತ್ತಿಗೆದಾರರು, ನಿಮ್ಮ ತಂದೆ ಬಳಿ ಜಮೀನು ಇರಲಿಲ್ಲ. ಆದರೂ ಇಷ್ಟು ಆಸ್ತಿ ಎಲ್ಲಿಂದ ಬಂತು? ಹೇಗೆ ಬಂತು ಎಂದು ಹೇಳಿ. ನೀವು ಹೊಲ ಉಳುಮೆ ಮಾಡುತ್ತಿರುವುದು, ವ್ಯಾಪಾರ ಮಾಡುತ್ತಿರುವುದರ ಬಗ್ಗೆ ಮಾತನಾಡಿ, ರಾಜ್ಯದ ಜನರ ಮುಂದೆ ನಿಮ್ಮ ಪ್ರಾಮಾಣಿಕತೆಯನ್ನು ಪ್ರದರ್ಶಿಸಿ ಎಂದು ಸೆಡ್ಡು ಹೊಡೆದರು.

ನನಗೆ ಲುಲುಕುಮಾರ, ಅದೇನೋ ಸಿನಿಮಾ ತೋರಿಸುತ್ತಿದ್ದ ಎನ್ನುತ್ತಿದ್ದರಲ್ಲಾ ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡಲು ಆಹ್ವಾನ ನೀಡಿದೆ. ಆದರೂ ನೀವು ಬರಲಿಲ್ಲ. ಕಳೆದ ಎರಡು ಅಧಿವೇಶನಗಳಲ್ಲೂ ನೀವು ಚರ್ಚೆಗೆ ಬರಲಿಲ್ಲ. ಅಸೆಂಬ್ಲಿಗೆ ಬನ್ನಿ ಎಂದು ಕರೆದೆ, ನೀವು ಪಾರ್ಲಿಮೆಂಟ್‌ಗೆ ಹೋಗಿದ್ದೀರಿ. ಈಗಲೂ ಸಿದ್ದ, ನಾನು ಬರುತ್ತೇನೆ. ಈಗಲೂ ನಿಮ್ಮ ಸಹೋದರ, ಶಾಸಕರ ಬಳಿ ದಾಖಲೆಗಳನ್ನು ಕೊಟ್ಟು ಸದನದಲ್ಲಿ ಚರ್ಚೆ ಮಾಡಲು ಹೇಳಿ, ಎಲ್ಲಾ ಅಂಶಗಳು ಸದನದಲ್ಲಿ ದಾಖಲೆಯಾಗಿ ಉಳಿಯಲಿ ಎಂದು ಸವಾಲು ಹಾಕಿದರು.

ನಿಮ್ಮ ಸಹೋದರ ಬಾಲಕೃಷ್ಣಗೌಡನ ಆಸ್ತಿ ಎಷ್ಟಿದೆ ? :

ನಾನು, ನೀವು ಒಂದಾಗಿ ಸರ್ಕಾರ ಮಾಡಿದಾಗ, ನೀವು ನಿಮ್ಮ ಸಹೋದರ ಬಾಲಕೃಷ್ಣಗೌಡ ಎಂಬ ಅಧಿಕಾರಿ ಮೂಲಕ ನನ್ನ ತಂಗಿ, ಮಡದಿ, ಸಹೋದರ, ರವಿ ಅವರ ಮೇಲೆ ಕೇಸು ದಾಖಲಿಸಿದ್ದನ್ನು ಮರೆತಿದ್ದೆ. ಚಂದ್ರಪ್ಪ ಅವರಿಂದ ಬಾಲಗಂಗಾಧರನಾಥ ಸ್ವಾಮೀಜಿ ಮೇಲೆ ಯಾವ ರೀತಿ ಕೇಸು ದಾಖಲಿಸಿದ್ದೀರಿ ಎಂಬುದನ್ನು ನಾನು ಮರೆತಿದ್ದೆ. ಆದರೆ ಕಳೆದ ಒಂದು ವರ್ಷದಲ್ಲಿ ಅವುಗಳನ್ನು ನೆನೆಸಿಕೊಳ್ಳುವಂತೆ ಮಾಡಿದ್ದೀರಿ. ಇದಕ್ಕೆಲ್ಲಾ ಉತ್ತರ ಕೊಡಲು, ಚರ್ಚೆ ಮಾಡಲು ಸಿದ್ಧನಾಗಿದ್ದೇನೆ. ಮುಂದಿನ ಅಧಿವೇಶನದಲ್ಲಾದರೂ ಚರ್ಚೆಗೆ ಕಳುಹಿಸಿ. ನಿಮ್ಮ ಅನಿಷ್ಟಗಳು, ನಿಮ್ಮ ಸಹೋದರ ಬಾಲಕೃಷ್ಣ ಗೌಡನ ಆಸ್ತಿಗಳ ಬಗ್ಗೆ ಚರ್ಚೆ ಮಾಡೋಣ. ಒಬ್ಬ ಸರ್ಕಾರಿ ನೌಕರ ಎಷ್ಟು ಸಾವಿರ ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾನೆ ಎಂದು ಬಯಲು ಮಾಡಲು ಸಿದ್ಧನಿದ್ದೇನೆ ಎಂದು ಗುಡುಗಿದರು.

ಸಮಾವೇಶದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ್, ಜಮೀರ್ ಅಹ್ಮದ್ ಖಾನ್, ಡಾ.ಎಂ.ಸಿ.ಸುಧಾಕರ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ರೇವಣ್ಣ, ಶಾಸಕರಾದ ಮಾಗಡಿ ಬಾಲಕೃಷ್ಣ, ಅಜಯ್ ಸಿಂಗ್, ಆನೇಕಲ್ ಶಿವಣ್ಣ, ಎಂ.ಸಿ. ಶ್ರೀನಿವಾಸ್, ನೆಲಮಂಗಲ ಶ್ರೀನಿವಾಸ್, ಭೀಮಣ್ಣ ನಾಯಕ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಎಸ್.ರವಿ, ನಸೀರ್ ಅಹಮದ್, ರಾಮೋಜಿಗೌಡ, ಹಿರಿಯ ನಾಯಕರಾದ ಸಿ.ಎಂ.ಲಿಂಗಪ್ಪ, ಪ್ರಕಾಶ್ ರಾಥೋಡ್ ಮತ್ತಿತರರು ಉಪಸ್ಥಿತರಿದ್ದರು.

Share this article