ಶಾಸಕರಿಗೆ ಜೀವ ಬೆದರಿಕೆ ಇದ್ದರೆ ದೂರು ಕೊಡಲಿ: ಮಾಜಿ ಶಾಸಕ ಡಾ.ಅನ್ನದಾನಿ

KannadaprabhaNewsNetwork |  
Published : Aug 08, 2025, 01:00 AM IST
೭ಕೆಎಂಎನ್‌ಡಿ-೧ಮಳವಳ್ಳಿ ಕ್ಷೇತ್ರದ ಡಾ.ಕೆ.ಅನ್ನದಾನಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶಾಸಕರೊಬ್ಬರಿಗೆ ಜೀವಬೆದರಿಕೆ ಹಾಕುವುದೆಂದರೆ ಅದು ಸಾಮಾನ್ಯ ವಿಷಯವಲ್ಲ. ಶಾಸಕರಿಗೇ ರಕ್ಷಣೆ ಇಲ್ಲವೆಂದ ಮೇಲೆ ಕ್ಷೇತ್ರದ ಜನರ ಗತಿ ಏನು?. ಶಾಸಕರು ಜೀವಬೆದರಿಕೆ ವಿಷಯವನ್ನು ಮುಚ್ಚಿಡುವುತ್ತಿರುವುದಾದರೂ ಏಕೆ. ಒಮ್ಮೆ ಶಾಸಕರು ದೂರು ಕೊಡದಿದ್ದರೆ ಶಾಸಕರಿಗೆ ರಕ್ಷಣೆ ನೀಡುವಂತೆ ಕೋರಿ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಳವಳ್ಳಿ ತಾಲೂಕಿನ ಶಾಸಕರಿಗೆ ಜೀವಬೆದರಿಕೆ ಇದೆ ಎನ್ನುವುದಾದರೆ ಇದುವರೆಗೂ ಏಕೆ ಪೊಲೀಸರಿಗೆ ದೂರು ಕೊಟ್ಟಿಲ್ಲ. ಜನಪ್ರತಿನಿಧಿಯೊಬ್ಬರಿಗೆ ಕೊಲೆ ಬೆದರಿಕೆ ಇರುವುದನ್ನು ಕಂಡೂ ಪೊಲೀಸರು ಏಕೆ ಸುಮೋಟೋ ದೂರು ದಾಖಲಿಸಿಕೊಂಡಿಲ್ಲ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನಿಸಿದರು.ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಕೇವಲ ಪ್ರಚಾರಕ್ಕೆ ಅಥವಾ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಜೀವಬೆದರಿಕೆ ಇರುವುದಾಗಿ ತಿಳಿಸಿದ್ದಾರೆಯೇ. ಜೀವಬೆದರಿಕೆ ಇರುವುದಾದರೆ ಅವರು ಯಾರು, ಫೋನ್ ಮೂಲಕ ಬೆದರಿಕೆ ಹಾಕಿದ್ದಾರೋ, ನೇರಾ ನೇರವಾಗಿಯೇ ಬೆದರಿಕೆ ಹಾಕಿದ್ದಾರೆಯೋ ಎಂಬುದನ್ನು ಜನರೆದುರು ಬಹಿರಂಗಪಡಿಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಶಾಸಕರೊಬ್ಬರಿಗೆ ಜೀವಬೆದರಿಕೆ ಹಾಕುವುದೆಂದರೆ ಅದು ಸಾಮಾನ್ಯ ವಿಷಯವಲ್ಲ. ಶಾಸಕರಿಗೇ ರಕ್ಷಣೆ ಇಲ್ಲವೆಂದ ಮೇಲೆ ಕ್ಷೇತ್ರದ ಜನರ ಗತಿ ಏನು?. ಶಾಸಕರು ಜೀವಬೆದರಿಕೆ ವಿಷಯವನ್ನು ಮುಚ್ಚಿಡುವುತ್ತಿರುವುದಾದರೂ ಏಕೆ. ಒಮ್ಮೆ ಶಾಸಕರು ದೂರು ಕೊಡದಿದ್ದರೆ ಶಾಸಕರಿಗೆ ರಕ್ಷಣೆ ನೀಡುವಂತೆ ಕೋರಿ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಂದೆಂದೂ ಆರೋಪ ಮಾಡೋಲ್ಲ:

ಮಳವಳ್ಳಿ ತಾಲೂಕಿನಲ್ಲಿ ಸರ್ಕಾರಕ್ಕೆ ಸೇರಿದ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡುತ್ತಿರುವುದರ ವಿರುದ್ಧ ಮೊದಲು ಹೋರಾಟ ನಡೆಸಿದವನು ನಾನು. ನನಗಿಂತಲೂ ಮುಂಚಿತವಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ದನಿ ಎತ್ತಿರುವುದನ್ನು ದಾಖಲೆ ಸಹಿತ ಸಾಬೀತುಪಡಿಸಿದರೆ ನಾನು ಮುಂದೆಂದೂ ಅವರ ವಿರುದ್ಧ ಕುಳಿತು ಮಾತನಾಡುವುದಿಲ್ಲ ಎಂದು ಸವಾಲೆಸೆದರು.

ನನ್ನ ಹೋರಾಟದ ಫಲವಾಗಿ ತನಿಖೆ ನಡೆದು ಅಕ್ರಮವಾಗಿ ಪರಭಾರೆಯಾಗಿದ್ದ ಜಮೀನುಗಳ ಖಾತೆ ರದ್ದುಮಾಡಲಾಗುತ್ತಿದೆ. ಇದುವರೆಗೂ ೩೦೦ ಆರ್‌ಟಿಸಿಗಳು ರದ್ದುಗೊಂಡಿವೆ. ಆದರೆ, ಜಿಲ್ಲಾಧಿಕಾರಿಗಳು ಸುಮಾರು ೮೦೦ ಎಕರೆ ಭೂಮಿಗೆ ಒಂದು ಸಾವಿರ ಆರ್‌ಟಿಸಿಗಳಲ್ಲಿ ಸರ್ಕಾರ ಎಂದು ನಮೂದಿಸಿರುವುದಾಗಿ ಕೆಡಿಪಿ ಸಭೆಯಲ್ಲಿ ಸುಳ್ಳು ಹೇಳಿದ್ದಾರೆ. ಜಿಲ್ಲಾಧಿಕಾರಿಗಳು ಇದುವರೆಗೂ ಅಕ್ರಮವಾಗಿ ಪರಭಾರೆಯಾಗಿರುವ ಜಮೀನುಗಳ ಬಳಿ ಬಂದು ಪರಿಶೀಲಿಸಿಲ್ಲ, ಅಕ್ರಮವಾಗಿ ಜಮೀನು ಪಡೆದವರಿಗೆ ಒಂದೇ ಒಂದು ನೋಟಿಸ್ ಜಾರಿಗೊಳಿಸಿಲ್ಲ. ಅವರನ್ನು ಸ್ಥಳದಿಂದಲೂ ತೆರವುಗೊಳಿಸಿಲ್ಲ ಎಂದು ಆರೋಪಿಸಿದರು.

ಶಾಸಕರ ಅವಧಿಯಲ್ಲೇ 300 ಆರ್‌ಟಿಸಿ ಅಕ್ರಮ ಖಾತೆ:

೨೦೨೩ರ ನಂತರ ನರೇಂದ್ರಸ್ವಾಮಿ ಅಧಿಕಾರದ ಅವಧಿಯಲ್ಲಿಯೇ ೩೦೦ಕ್ಕೂ ಹೆಚ್ಚು ಆರ್‌ಟಿಸಿಗಳು ಅಕ್ರಮವಾಗಿ ಇತರರಿಗೆ ಖಾತೆಯಾಗಿದೆ. ಅಧಿಕಾರಿಗಳಂತೆಯೇ ಶಾಸಕರೂ ಸರ್ಕಾರದ ಅಂಗ, ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾಯಿಸಿಕೊಂಡು, ಅಧಿಕಾರಿಗಳ ದುರ್ಬಳಕೆ ಮಾಡಿ ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮಳವಳ್ಳಿ ಭೂ ದಾಖಲೆಗಳ ನಕಲಿ ಕೇಂದ್ರವಾಗಿದೆ. ಸೈಬರ್ ಸೆಂಟರ್, ತಾಲೂಕು ಕಚೇರಿ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ನಕಲಿ ಭೂ ದಾಖಲೆಗಳು ಸೃಷ್ಟಿಯಾಗುತ್ತಿರುವುದನ್ನು ಸ್ವತಃ ಶಾಸಕರೇ ಒಪ್ಪಿಕೊಂಡಿದ್ದಾರೆ. ಅಂದ ಮೇಲೆ ನಿಮ್ಮ ಸರ್ಕಾರದ ಆಡಳಿತವಿರುವಾಗಲೇ ಈಗಲೂ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಂತಾಯಿತು. ಮಂಡ್ಯ ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಅವರನ್ನೂ ನೀವೇ ಆ ಸ್ಥಾನಕ್ಕೆ ತಂದು ಕೂರಿಸಿದ್ದು, ಮಂಡ್ಯ ಉಪವಿಭಾಗಾಧಿಕಾರಿ ಕಚೇರಿಯನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರೂ ನೀವೇ ಆಗಿದ್ದೀರಿ. ಹಾಗಾಗಿ ನೀವು ಶಾಸಕ ಸ್ಥಾನದಲ್ಲಿರಲು ಯೋಗ್ಯರಲ್ಲ. ಕೂಡಲೇ ಆ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಕೂಲಂಕಷ ತನಿಖೆಯಾಗಲಿ:

ಸರ್ಕಾರಿ ಜಮೀನು ಅಕ್ರಮ ಪರಭಾರೆ ನನ್ನ ಅವಧಿಯಲ್ಲಿ ನಡೆದಿಲ್ಲವೆಂದು ನಾನು ಹೇಳುವುದಿಲ್ಲ. ಯಾರ ಯಾರ ಕಾಲದಲ್ಲಿ ಎಷ್ಟೆಷ್ಟು ಸರ್ಕಾರಿ ಜಮೀನು ಅಕ್ರಮವಾಗಿ ಪರಭಾರೆಯಾಗಿದೆ ಎಂಬ ಬಗ್ಗೆ ಕೂಲಂಕಷ ತನಿಖೆಯಾಗಲಿ. ಜೊತೆಗೆ ಅಕ್ರಮವಾಗಿ ಪರಭಾರೆಯಾಗಿರುವ ಜಮೀನುಗಳನ್ನು ಸರ್ಕಾರದ ಹೆಸರಿಗೆ ಆರ್‌ಟಿಸಿ ಕೂರಿಸಿ ಆ ಜಾಗದಲ್ಲಿರುವವರನ್ನು ತೆರವುಗೊಳಿಸುವಂತೆ ಆಗ್ರಹಪಡಿಸಿದರು.

ಮಳವಳ್ಳಿ ಕ್ಷೇತ್ರದ ಶಾಸಕರಾಗಿ ಪಿ.ಎಂ.ನರೇಂದ್ರಸ್ವಾಮಿ ಅವರು ತಮ್ಮ ಮನೆಯ ಖಾಸಗಿ ಕಾರ್ಯಕ್ರಮಕ್ಕೆ ನೂರಾರು ಪೊಲೀಸರನ್ನು ಬಳಸಿಕೊಂಡಿದ್ದಾರೆ. ಇದರ ಅವಶ್ಯಕತೆ ಏನಿತ್ತು. ಪೊಲೀಸರು ಕಾನೂನು-ಸುವ್ಯವಸ್ಥೆ ಕಾಪಾಡುವುದನ್ನು ಮರೆತು ಅತ್ತ ಮುಖ ಮಾಡಿದ್ದರಿಂದಲೇ ಮಳವಳ್ಳಿಯ ಬಾರ್‌ವೊಂದರಲ್ಲಿ ಕೊಲೆ ಮತ್ತು ಗಂಡನೇ ಪತ್ನಿಯನ್ನು ಕೊಲೆಗೈದಿರುವ ಧಾರುಣ ಘಟನೆಗಳು ನಡೆಯುವುದಕ್ಕೆ ಕಾರಣವಾಗಿವೆ ಎಂದು ದೂರಿದರು.

ಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಶ್ರೀಧರ್, ಸಿದ್ದಾಚಾರಿ, ಸಾತನೂರು ಜಯರಾಂ, ಕಾಂತರಾಜು, ಶಂಕರ್ ಇದ್ದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು