ಸಂಶಯವಿದ್ದರೆ ಲಿಖಿತ ರೂಪದಲ್ಲಿ ನೀಡಲಿ : ಸ್ಪೀಕರ್‌ ಖಾದರ್‌

KannadaprabhaNewsNetwork |  
Published : Oct 30, 2025, 02:45 AM ISTUpdated : Oct 30, 2025, 12:43 PM IST
 UT Khader

ಸಾರಾಂಶ

 ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಯು.ಟಿ. ಖಾದರ್‌, ಯಾರಿಗಾದರೂ ಈ ಕುರಿತು ಸಂಶಯ ಇದ್ದರೆ ಗುರುವಾರ ಬೆಳಗ್ಗೆ ನನ್ನ ಕಚೇರಿಯಲ್ಲಿ ಲಭ್ಯ ಇರುತ್ತೇನೆ. ಬರಹ ರೂಪದಲ್ಲಿ ನೀಡಿದರೆ ಸಕಾರಾತ್ಮಕ ಉತ್ತರ ದೊರೆಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಮಂಗಳೂರು: ವಿಧಾನಸಭೆ ಆಡಳಿತ ಸುಧಾರಣೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಭ್ರಷ್ಟಾಚಾರ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಸ್ಪೀಕರ್‌ ಯು.ಟಿ. ಖಾದರ್‌, ಯಾರಿಗಾದರೂ ಈ ಕುರಿತು ಸಂಶಯ ಇದ್ದರೆ ಗುರುವಾರ ಬೆಳಗ್ಗೆ ನನ್ನ ಕಚೇರಿಯಲ್ಲಿ ಲಭ್ಯ ಇರುತ್ತೇನೆ. ಬರಹ ರೂಪದಲ್ಲಿ ನೀಡಿದರೆ ಸಕಾರಾತ್ಮಕ ಉತ್ತರ ದೊರೆಯಲಿದೆ, ಈ ಬಗ್ಗೆ ಸಕಾರಾತ್ಮಕ ಚರ್ಚೆಗೂ ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ವಿದೇಶ ಪ್ರವಾಸ ಮುಗಿಸಿ ಮಂಗಳೂರಿಗೆ ಆಗಮಿಸಿದ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಯಾವ ಸಂಶಯದ ಬಗ್ಗೆ ಏನೇ ಕೇಳುವುದಿದ್ದರೂ ಲಿಖಿತವಾಗಿಯೇ ಕೊಡಬೇಕು. ಎಲ್ಲರೂ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು. ಲಿಖಿತವಾಗಿ ಏನನ್ನು ನೀಡುತ್ತಾರೋ ಅದರ ಬಗ್ಗೆ ಮಾತ್ರ ವಿಚಾರ ಮಾಡುತ್ತೇನೆ. ಎಲ್ಲಿಯೋ ಕುಳಿತು ಆರೋಪ ಮಾಡಿದರೆ ಅದಕ್ಕೆ ಉತ್ತರ ಕೊಡಲು ಆಗಲ್ಲ, ಲಿಖಿತವಾಗಿ ನೀಡಿದರೆ ಮಾತ್ರ ಉತ್ತರ ಕೊಡುತ್ತೇನೆ ಹಾಗೂ ತನಿಖೆಗೆ ಕೊಡಬೇಕೋ ಬೇಡವೊ ಅಂತ ತೀರ್ಮಾನ ಮಾಡುತ್ತೇನೆ ಎಂದರು. 

ಅಸೂಯೆಗೆ ಮದ್ದಿಲ್ಲ : 

ಎಲ್ಲ ರೋಗಗಳಿಗೆ ಮದ್ದು ಇದೆ, ಆದರೆ ಅಸೂಯೆಗೆ ಮದ್ದೇ ಇಲ್ಲ ಎಂದ ಯು.ಟಿ. ಖಾದರ್‌, ಹೊಸದಾಗಿ ಮನೆ ಕಟ್ಟುವಾಗ ದೃಷ್ಟಿ ಬೀಳದಂತೆ ದೃಷ್ಟಿಗೊಂಬೆ ಹಾಕುವುದು ಸಾಮಾನ್ಯ. ಈಗ ಕರ್ನಾಟಕ ಶಾಸಕಾಂಗದ ಬಗ್ಗೆ ರಾಜ್ಯ, ದೇಶ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗೌರವ ವ್ಯಕ್ತವಾಗುತ್ತಿದೆ. ಇದಕ್ಕಾಗಿ ಇಷ್ಟೆಲ್ಲ ಒಳ್ಳೆಯ ಕಾರ್ಯ ಆಗುವಾಗ ಅದಕ್ಕೆ ದೃಷ್ಟಿ ಬೊಟ್ಟು ಇಟ್ಟಂತೆ ಆರೋಪ ಮಾಡಿದ್ದಾರೆ ಎಂದು ಹೇಳಿದರು.

ಸಂತೋಷ ಆಗುವುದಾದರೆ ಆರೋಪಿಸಲಿ:

ರಾಜಕೀಯ ವ್ಯಕ್ತಿಗಳು ಏನನ್ನೂ ಆರೋಪ ಮಾಡಬಹುದು. ಅದೇ ರೀತಿ ನನಗೂ ಬಹಳಷ್ಟು ಹೇಳುವುದಕ್ಕಿದೆ. ಆದರೆ ಸಂವಿಧಾನಬದ್ಧ ಸ್ಪೀಕರ್‌ ಸ್ಥಾನದಲ್ಲಿದ್ದು ಆ ರೀತಿ ಮಾತನಾಡಲು ಆಗಲ್ಲ. ನಾನೀಗ ಪ್ರತಿ ಪಕ್ಷದ ಮಿತ್ರ. ನಮ್ಮ ಶಾಸಕರಿಗೆ ಏನೆಲ್ಲ ಒಳ್ಳೆಯದಾಗಬೇಕು, ಯಾವುದೆಲ್ಲ ಸವಲತ್ತು ಕೊಡಬೇಕೋ ಅದನ್ನು ಕೊಡುವುದು ನನ್ನ ಕರ್ತವ್ಯ. ಅದನ್ನೇ ಮಾಡುತ್ತಿದ್ದು, ಮುಂದೆ ಕೂಡ ಮಾಡುತ್ತೇನೆ. ಇಂತಹ ಆರೋಪ ಮಾಡಿ ನನಗೆ ಡ್ಯಾಮೇಜ್ ಮಾಡಿದರೆ ಅದರಿಂದ ಅವರಿಗೆ ಸಂತೋಷ ಆಗುವುದಾದರೆ ಆಗಲಿ. ದಿನವೂ ಒಂದೊಂದು ಮಾತನಾಡಲಿ. ನನಗೆ ಯಾವುದೇ ಬೇಸರ ಇಲ್ಲ ಎಂದು ಹೇಳಿದರು.

ನಾನು ಏನು, ಹೇಗೆ ಎನ್ನುವುದು ಗೊತ್ತಿದೆ, ನನ್ನ ವಿರುದ್ಧ ಆರೋಪ ಇದು ಮೊದಲಲ್ಲ. ನಾನು ಮೊದಲ ಬಾರಿ ಶಾಸಕ ಆಗಿದಾಗಿಂದಲೂ ಈ ರೀತಿಯ ಮಾತುಗಳನ್ನು ಕೇಳಿದ್ದೇನೆ ಎಂದು ಯು.ಟಿ. ಖಾದರ್‌ ಹೇಳಿದರು.

PREV
Read more Articles on

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು