ಭಕ್ತಿ, ನಿಷ್ಠೆಯಿದ್ದರೆ ಆಂಜನೇಯನ ಕೃಪೆ: ಸದ್ಯೋಜಾತ ಶ್ರೀ

KannadaprabhaNewsNetwork | Published : May 10, 2025 1:06 AM
Follow Us

ಸಾರಾಂಶ

ದೇವಸ್ಥಾನ ನಿರ್ಮಾಣ ಪುಣ್ಯ ಕಾರ್ಯ ಆಗಿದ್ದು, ಇದರಲ್ಲಿ ಸಮಾಜದವರು ಶ್ರದ್ಧಾ ಭಕ್ತಿಪೂರ್ವಕವಾಗಿ ಪಾಲ್ಗೊಂಡಿರುವುದು ಒಳಿತನ್ನುಂಟು ಮಾಡಲಿದೆ.

ಭಟ್ಕಳ: ಪಟ್ಟಣದ ಮಣ್ಕುಳಿಯಲ್ಲಿ ವಿಜೃಂಭಣೆಯಿಂದ ಏರ್ಪಡಿಸಲಾದ ಹನುಮಂತ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಬೆಳಿಗ್ಗೆ ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ನೆರವೇರಿಸಿದರು.

ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ದೇವಸ್ಥಾನವನ್ನು ಶಾಸ್ತ್ರೋಕ್ತ ಮತ್ತು ವಾಸ್ತು ಪ್ರಕಾರ ಸುಂದರವಾಗಿ ನಿರ್ಮಿಸಿರುವುದು ಸಂತಸ ತಂದಿದೆ. 41 ಅಡಿ ಎತ್ತರದ ಅಭಯ ಮುದ್ರೆಯ ಆಂಜನೇಯನ ಮೂರ್ತಿ ಸುಂದರವಾಗಿದೆ. ಶ್ರದ್ಧಾ ಭಕ್ತಿ, ನಿಷ್ಠೆಯಿಂದ ಪ್ರಾರ್ಥಿಸಿದರೆ ಆಂಜನೇಯ ಕೃಪೆಗೆ ಪಾತ್ರರಾಗಬಹುದು. ಗಾಣಿಗ ಸಮುದಾಯದವರು ಸಂಘಟಿತರಾಗಿ ಪಟ್ಟಣದಲ್ಲಿ ಬೃಹತ್ ದೇವಸ್ಥಾನ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯ. ದೇವಸ್ಥಾನ ನಿರ್ಮಾಣ ಪುಣ್ಯ ಕಾರ್ಯ ಆಗಿದ್ದು, ಇದರಲ್ಲಿ ಸಮಾಜದವರು ಶ್ರದ್ಧಾ ಭಕ್ತಿಪೂರ್ವಕವಾಗಿ ಪಾಲ್ಗೊಂಡಿರುವುದು ಒಳಿತನ್ನುಂಟು ಮಾಡಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಭಟ್ಕಳದಲ್ಲಿ ನಮ್ಮ ಸಮಾಜದವರು ಸಂಘಟಿತರಾಗಿ ಇಷ್ಟೊಂದು ದೊಡ್ಡ ದೇವಸ್ಥಾನ ನಿರ್ಮಿಸಿರುವುದು ಹೆಮ್ಮೆ ಎನಿಸಿದೆ. ಸಮಾಜ ಸಂಘಟಿತವಾದರೆ ಏನೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಸಮಾಜ ಶಿಕ್ಷಣಕ್ಕೆ ಹೆಚ್ಚಿ ಆದ್ಯತೆ ಕೊಡಬೇಕು. ಶಿಕ್ಷಣ ಇಲ್ಲದಿದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸಮಾಜದವರು ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ಸುಭಾಶ ಶೆಟ್ಟಿ, ಉದ್ಯಮಿ ದಿಲೀಪ ಶೆಟ್ಟಿ, ಹೊಸಾಕುಳಿ ಗ್ರಾಪಂ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ತಾರಮತಿ ಶೆಟ್ಟಿ ಮುಂಬೈ, ಆರತಿ ಶೆಟ್ಟಿ ಮುರುಡೇಶ್ವರ, ಮಾರಿಕಾಂಬ ದೇವಸ್ಥಾನದ ಅಧ್ಯಕ್ಷ ಪರಮೇಶ್ವರ ನಾಯ್ಕ, ಪಶ್ವಿಮಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ ಉಪಸ್ಥಿತರಿದ್ದರು. ಮನೋಜ ಶೆಟ್ಟಿ, ಉಷಾ ಶೆಟ್ಟಿ, ಪೂರ್ಣಿಮಾ ಶೆಟ್ಟಿ ನಿರೂಪಿಸಿದರು. ಪ್ರಕಾಶ ಶಿರಾಲಿ ವಂದಿಸಿದರು.

ಶ್ರೀಗಳನ್ನು ವಾದ್ಯಘೋಷ, ಬೈಕ್ ರ್‍ಯಾಲಿ, ಪೂರ್ಣಕುಂಭದ ಮೂಲಕ ಸ್ವಾಗತಿಸಲಾಯಿತು. ದೇವಸ್ಥಾನವನ್ನು ವೀಕ್ಷಿಸಿದ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಗೋಕರ್ಣದ ತಂತ್ರಿಗಳಾದ ವೇಮೂ. ಷಡಕ್ಷರಿ ಸಾಂಬ ಹಿರೇಗಂಗೆ ನೇತೃತ್ವದ ತಂಡ ಧಾರ್ಮಿಕ ಕೈಂಕರ್ಯ ನಡೆಸಿತು.