ಮನದಲ್ಲಿ ಕಲ್ಮಶವಿದ್ದರೆ ಸದ್ವಿಚಾರ ಮೂಡಲಾರವು

KannadaprabhaNewsNetwork |  
Published : Oct 21, 2025, 01:00 AM IST
ಬೆಳಗಾವಿಯಲ್ಲಿ ನಡೆದ ಅಮವಾಸ್ಯೆ ಅನುಭವ ಗೋಷ್ಠಿಯಲ್ಲಿ ಚಿಂತಕಿ ಡಾ.ಗುರುದೇವಿ ಹುಲೆಪ್ಪನವರಮಠ ಅವರನ್ನು ಸನ್ಮಾನಿಸಲಾಯಿತು | Kannada Prabha

ಸಾರಾಂಶ

ಮನೆಯಲ್ಲಿ ಒಡೆಯನಿಲ್ಲದೆ ಇದ್ದರೆ ಕಸ ಕಡ್ಡಿಗಳಿಂದ ಹೇಗೆ ಅಸ್ತವ್ಯಸ್ತವಾಗಿ ಕಾಣುತ್ತದೆಯೋ ಹಾಗೇ ಮನದಲ್ಲಿ ಹುಸಿ ವಿಷಯಗಳಂತಹ ಕಲ್ಮಶಗಳು ಬೆರೆತು ಹೋಗಿದ್ದರೆ ಸದ್ವಿಚಾರಗಳು ಮೂಡಲಾರವು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪರಮಾತ್ಮನನ್ನು ನಮ್ಮ ಹೃದಯ ಕಮಲದಲ್ಲಿ ನೆಲೆಗೊಳಿಸಿಕೊಂಡು ಸಂತೃಪ್ತಿ ಕಾಣಬೇಕು. ನಮ್ಮ ಹೃದಯದ ಕಲ್ಮಶ ಕಿತ್ತು ಹಾಕುವ ಶಕ್ತಿ ಪರಮಾತ್ಮನ ದಿವ್ಯಸಾನ್ನಿಧ್ಯದಲ್ಲಿದೆ ಎಂಬುದುನ್ನು ಅರಿತು ಶರಣರು ಪರಮಾತ್ಮನನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿ ಮನದ ಕಲ್ಮಶ ಕಿತ್ತು ಹಾಕಿದ್ದಾರೆ ಎಂದು ಚಿಂತಕಿ ಡಾ.ಗುರುದೇವಿ ಹುಲೆಪ್ಪನವರಮಠ ಹೇಳಿದರು.

ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭವ ಗೋಷ್ಠಿಯಲ್ಲಿ ಮನೆಯೊಳಗೆ ಮನೆಯ ಒಡೆಯ ನಿದ್ದಾನೋ ಇಲ್ಲವೋ ಎಂಬುದರ ಕುರಿತು ಉಪನ್ಯಾಸ ನೀಡಿದರು.

ಮನೆಯಲ್ಲಿ ಒಡೆಯನಿಲ್ಲದೆ ಇದ್ದರೆ ಕಸ ಕಡ್ಡಿಗಳಿಂದ ಹೇಗೆ ಅಸ್ತವ್ಯಸ್ತವಾಗಿ ಕಾಣುತ್ತದೆಯೋ ಹಾಗೇ ಮನದಲ್ಲಿ ಹುಸಿ ವಿಷಯಗಳಂತಹ ಕಲ್ಮಶಗಳು ಬೆರೆತು ಹೋಗಿದ್ದರೆ ಸದ್ವಿಚಾರಗಳು ಮೂಡಲಾರವು. ಮನದ ಮೈಲಿಗೆಯನ್ನು ತೊಡೆದು ಹಾಕಿ ಪರಮಾತ್ಮನನ್ನು ಅಲ್ಲಿ ನೆಲೆಸಿಕೊಳ್ಳಬೇಕಾಗಿದೆ. 12ನೇ ಶತಮಾನದ ಬಸವಾದಿ ಶರಣರು ಮನದ ಮೈಲಿಗೆಯನ್ನು ತೊಡೆದು ಹಾಕಿದ ದಾರ್ಶನಿಕರು. ಬದುಕಿನ ಅಸಂಖ್ಯೆ ಜಂಜಡಗಳಿಂದ, ಆಸೆ ಆಮೀಷಗಳಿಂದ ಮನೋವಿಕಾರಗಳು ಹೆಚ್ಚಾಗಿವೆ ಎಂದರು.

ಬದುಕು ನೆಮ್ಮದಿಯನ್ನು ಕಳೆದುಕೊಂಡು ಹತಾಸೆಗುಳುತ್ತಿರುವುದು. ಅದಕ್ಕೆ ದಿವೌಷಧಿ ಎಂದರೆ ದೇವರ ಧ್ಯಾನ. ಅದು ನಮ್ಮ ಮನದ ಮೈಲಿಗೆಯನ್ನು ನಿವಾರಿಸಲು ಸಾಧ್ಯ. ಇಂಥ ಅದ್ಭುತ ಮನೋಔಷಧಿಯನ್ನು ನಿರೂಪಿಸಿದವರು ಬಸವಣ್ಣನವರು. ಎಂಟು ವರ್ಷಗಳಾದರೂ ಅವರು ಹೇಳಿದ ಮಾತುಗಳು ಇಂದಿಗೂ ಜೀವಂತವೆನಿಸಿದೆ. ನಮ್ಮ ಸುಂದರ ಬದುಕಿಗೆ ವಿಕಾಸಕ್ಕೆ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಈ ಜೀವನವನ್ನು ಹಸನಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ. ಅದಕ್ಕಾಗಿ ಮನದೊಳಗೆ ದೇವರನ್ನು ಪ್ರತಿಷ್ಠಾಪಿಸಿ ಕೊಳ್ಳೋಣ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಘಟಕದ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ದೀಪಾವಳಿಯ ಸಂದರ್ಭದಲ್ಲಿ ನಮ್ಮೆಲ್ಲರ ಮನಮನೆಗಳಿಗೆ ಡಾ.ಗುರುದೇವಿಯವರು ದೀಪದ ಮಹಾಬೆಳಕನ್ನು ಮೂಡಿಸಿದ್ದಾರೆ. ಬಸವಣ್ಣವರ ವಿಚಾರಗಳು ತಾರ್ಕಿಕವಾಗಿದ್ದು ಅವುಗಳನ್ನು ತಳಸ್ಪರ್ಶಿಯಾಗಿ ಅಭ್ಯಾಸಬೇಕಾಗಿದೆ. ಅತ್ಯಂತ ಸರಳವಾಗಿ ಸುಂದರವಾಗಿ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಹೇಳಿದ್ದಾರೆ. ಅವರ ಸಂದೇಶಗಳು ನಮ್ಮ ನಡೆ ನುಡಿಯ ಅನುಕರಣೆಯಲ್ಲಿ ಬಂದರೆ ಜೀವನ ಸಾರ್ಥಕ ಅನ್ನಿಸುವುದು. ದೀಪಾವಳಿ ಬೆಳಕಿನ ಹಬ್ಬ. ನಮ್ಮ ಮನಗಳಿಗೆ ಜ್ಞಾನವೆಂಬ ಬೆಳಕನ್ನು ತೊಡಗಿಸಿಕೊಳ್ಳಬೇಕಾಗಿದೆ. ಜಾತಿ ಮತ ಪಂಗಡ ಎಂಬ ವರ್ತುಲದಲ್ಲಿ ಸುತ್ತುತ್ತಿದ್ದೇವೆ ಇದರ ಆಚೆ ಬದುಕಿನ ಸೌಂದರ್ಯವನ್ನು ಕಂಡುಕೊಳ್ಳಬೇಕಾಗಿರುವುದು ಇಂದಿನ ಅಗತ್ಯ. ಸಮಾನತೆ ಶರಣರ ವಚನಗಳ ಜೀವಾಳ. ಅದನ್ನು ಅನುಕರಣೆಯ ರೂಪವನ್ನಾಗಿಸಬೇಕಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಮಹಾ ಸ್ವಾಮೀಜಿ, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡೆಯ್ಯ, ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ ಎಂದು ಹೇಳಿದವರು ಬಸವಣ್ಣವರು. ಅವರ ಮಾತು ವಿಶ್ವಸತ್ಯವಾಗಿದೆ. ಜ್ಞಾನ ಎಂಬ ಬೆಳಕು ಬಿತ್ತಿ ಬೆಳೆಯಬೇಕಾಗಿರುವುದು ಹಿಂದಿನ ಅಗತ್ಯವಾಗಿದೆ. 21ನೇ ಶತಮಾನದಲ್ಲಿ ನಾವು ಅಜ್ಞಾನಿಗಳ ಹಾಗೇ ವರ್ತಿಸುತ್ತಿರುವುದು ಸಲ್ಲದು. ಮನದ ಕತ್ತಲೆ ಕಿತ್ತುಹಾಕಿ ಜ್ಞಾನದ ಬೆಳೆ ಬೆಳೆಯಬೇಕಾಗಿದೆ ಎಂದು ಕರೆ ನೀಡಿದರು.

ಹೀರಾ ಚೌಗುಲೆ ವಚನ ಪ್ರಾರ್ಥನೆ ಮಾಡಿದರು. ನ್ಯಾಯವಾದಿ ಆರ್.ಪಿ.ಪಾಟೀಲ್ ಸ್ವಾಗತಿಸಿದರು. ಮಂಗಳ ಕಾಕತಿಕರ್ ವಚನ ವಿಶ್ಲೇಷಣೆ ಮಾಡಿದರು. ಸರೋಜಿನಿ ನಿಶಾನ್ದಾರ್ ಪರಿಚಯಿಸಿದರು. ವಿ.ಕೆ.ಪಾಟೀಲ್ ವಂದಿಸಿದರು. ವಿದ್ಯಾ ಗೌಡರ ನಿರೂಪಿಸಿದರು. ಡಾ.ಎಚ್.ಬಿ. ರಾಜಶೇಖರ್, ಡಾ.ಎಫ್.ವ್ಹಿ.ಮಾನ್ವಿ, ಬಾಲಚಂದ್ರ ಬಾಗಿ, ಜ್ಯೋತಿ ಬಾದಾಮಿ, ಶಂಕರ್ ಪಟ್ಟೇದ ಮೊದಲಾದವರು ಇದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ