ಪ್ರತಿಭಟನಾಕಾರರಿಂದ ಕರಾಳ ದೀಪಾವಳಿ ಆಚರಣೆ

KannadaprabhaNewsNetwork |  
Published : Oct 21, 2025, 01:00 AM IST
ದೀಫ | Kannada Prabha

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ತೆರವು ಗೊಳಿಸಿದ 140 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖಂಡ ಅಶೋಕಗೌಡ ಪಾಟೀಲ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದೆ. ಹಬ್ಬದ ಹಿನ್ನಲೆಯಲ್ಲಿ ಸೋಮವಾರ ಸಂಜೆ ಧರಣಿ ನಿರತರು ಲಕ್ಷ್ಮೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪಗಳನ್ನು ಹಚ್ಚುವ ಮೂಲಕ ಕರಾಳ ದೀಪಾವಳಿ ಆಚರಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ತಾಲೂಕಿನ ಕುದರಿಸಾಲವಾಡಗಿ ಗ್ರಾಮದಲ್ಲಿ ಯಾಳವಾರ ಮುಖ್ಯರಸ್ತೆಯ ಅಭಿವೃದ್ಧಿ ಹಾಗೂ ಅಗಲೀಕರಣ ನೆಪದಲ್ಲಿ ತೆರವು ಗೊಳಿಸಿದ 140 ಕ್ಕೂ ಹೆಚ್ಚು ಕುಟುಂಬಗಳಿಗೆ ಸೂಕ್ತ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಖಂಡ ಅಶೋಕಗೌಡ ಪಾಟೀಲ ನೇತೃತ್ವದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಆರನೇ ದಿನಕ್ಕೆ ಕಾಲಿಟ್ಟಿದೆ. ಹಬ್ಬದ ಹಿನ್ನಲೆಯಲ್ಲಿ ಸೋಮವಾರ ಸಂಜೆ ಧರಣಿ ನಿರತರು ಲಕ್ಷ್ಮೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪಗಳನ್ನು ಹಚ್ಚುವ ಮೂಲಕ ಕರಾಳ ದೀಪಾವಳಿ ಆಚರಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮುಖಂಡ ಅಶೋಕಗೌಡ ಪಾಟೀಲ ಮಾತನಾಡಿ, ಕುದರಿಸಾಲವಾಡಗಿ ಗ್ರಾಮದಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ಮನೆಗಳನ್ನು ತೆರವು ಗೊಳಿಸಿ ಎರಡು ತಿಂಗಳಾಗಿದೆ. ದೇವರಹಿಪ್ಪರಗಿ ಶಾಸಕರು ಇದೇ ಗ್ರಾಮದವರಾಗಿದ್ದಾರೆ. ಇವರು ಗ್ರಾಮದ ಬಡ ಜನರ ಬದುಕನ್ನು ಲೆಕ್ಕಿಸದೇ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದರಿಂದ ಈ ವರ್ಷ ದೀಪಾವಳಿ ಹಬ್ಬವನ್ನು ಧರಣಿ ಸ್ಥಳದಲ್ಲಿ ಕರಾಳ ದೀಪಾವಳಿಯಾಗಿ ಆಚರಿಸಿದ್ದು, ಶೋಚನೀಯ. ಈ ರಸ್ತೆಯಲ್ಲಿ ಬರುವ ಜನರು ಕಾಲಾವಕಾಶ ನೀಡುವಂತೆ ಕೋರಿದರೂ ಮನೆಗಳನ್ನು ತೆರವುಗೊಳಿಸಿದ್ದಾರೆ. ರಸ್ತೆ ಅಗಲೀಕರಣ ಮಾಡುವ ಅಧಿಕಾರವನ್ನು ಇವರಿಗೆ ಕೊಟ್ಟುವರು ಯಾರು ಎಂದು ಇವರು ಹೇಳಬೇಕು. ಇವರು ಅಗಲೀಕರಣ ಮಾಡುವ ರಸ್ತೆಯೇ ಬೇರೆಯಾಗಿದೆ. ಇದನ್ನು ಅರಿತು ರಸ್ತೆ ಅಗಲೀಕರಣ ಮಾಡಬೇಕಿತ್ತು. ಹೀಗಾಗಿ, ನಿರಾಶ್ರೀತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಮಜಾನ ನದಾಫ ಮಾತನಾಡಿ, ರಸ್ತೆ ಅಗಲೀಕರಣದಿಂದ ಕುಟುಂಬಗಳು ನಿರಾಶ್ರೀತರಾಗಿರುವುದು ನೋವು ತಂದಿದೆ. ದೀಪಾವಳಿ ಸಂದರ್ಭದಲ್ಲಿಯೂ ಜನರು ಕತ್ತಲೆಯಲ್ಲಿ ಕಳೆಯುವಂತಾಗಿದೆ. ಶಾಸಕರು ಈ ರಸ್ತೆ ಬಗ್ಗೆ ಅರಿತು ಮುಂದಿನ ಹೆಜ್ಜೆ ಇಡಬೇಕಾಗಿತ್ತು. ಈಗಲೂ ಸಮಯ ಮಿಂಚಿಲ್ಲ. ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.ರೈತ ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಶಾಸಕರಿಗೆ ಅಧಿಕಾರ ಕೊಟ್ಟಿದ್ದು ತಪ್ಪಾಗಿದೆ ಎಂಬುದು ಈಗ ಜನರಿಗೆ ಅರ್ಥವಾಗಿದೆ. ಮನಸ್ಸು ಒಡೆದಿರುವುದನ್ನು ಯಾರಿಂದಲೂ ಕಟ್ಟಲು ಸಾಧ್ಯವಿಲ್ಲ. ರಾಜುಗೌಡ ಪಾಟೀಲರು ಅನುಕಂಪದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಅವರು ಈ ವರ್ತನೆ ಸರಿಯಲ್ಲ. ಈ ಹೋರಾಟಕ್ಕೆ ರೈತ ಸಂಘ ಬೆಂಬಲಕ್ಕಿದೆ. ಮುಂದಿನ ದಿನಗಳಲ್ಲಿ ಹೋರಾಟ ತೀಕ್ಷ್ಣವಾಗಲಿದೆ ಎಂದರು.ಕಾಂಗ್ರೆಸ್ ಮಹಿಳಾ ಬ್ಲಾಕ್ ತಾಲೂಕಾಧ್ಯಕ್ಷೆ ರುಕ್ಮಿಣಿ ರಾಠೋಡ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿದರು. ಧರಣಿಯಲ್ಲಿ ಶಾಂತಗೌಡ ಪಾಟೀಲ, ಡಾ.ಹಸನ ಢವಳಗಿ, ಗುರುರಾಜ ಗುಡಿಮನಿ, ಯಮನೂರಿ ಚಲವಾದಿ, ಕಾಮೇಶ ಭಜಂತ್ರಿ, ಅದಾಂಸಾಬ ಢವಳಗಿ, ಪ್ರಕಾಶ ಕೋಟಿ, ನಜೀರಪಟೇಲ ಗುಡ್ನಾಳ, ಅಶೋಕ ದೇಸಾಯಿ, ಯೋಗೇಶ ಕೊಣ್ಣೂರ, ಪಾವೆಡವ್ವ ಇಂಗಳಗಿ, ಹುಸ್ಮನಾ ಮುಲ್ಲಾ, ನೂರಲಾ ಪಿರಜಾದೆ, ಉಸ್ಮಾನಗಣಿ ನಾಯ್ಕೋಡಿ, ಬೀಬಿಹಾಜಬಿ ಗುಳಬಾಳ, ಹಜರತಿಬಿ ಅತ್ತಾರ, ಕಾಳಮ್ಮ ಬಡಿಗೇರ, ಸವಿತಾ ಬಡಿಗೇರ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ