ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಛಲವಾದಿ ನಾರಾಯಣಸ್ವಾಮಿ

KannadaprabhaNewsNetwork | Published : Nov 8, 2024 12:33 AM

ಸಾರಾಂಶ

ಲೋಕಾಯುಕ್ತ ತನಿಖೆ ಎರಡು ಗಂಟೆಯಲ್ಲಿ ಮುಗಿಯುತ್ತದೆ ಎಂದು ಮೊದಲೇ ಗೊತ್ತಾಗಿದ್ದು ಹೇಗೆ? ಇವರೇ ತೊಟ್ಟಿಲು ತೂಗಿ, ಮಗು ಚಿವುಟೋದು ಎಂದು ವ್ಯಂಗ್ಯವಾಡಿದರು.

ಲೋಕಾಯುಕ್ತ ಕಾಂಗ್ರೆಸ್ ಕೈಗೊಂಬೆಯಾ? -ವಿಧಾನಪರಿಷತ್ ವಿರೋಧಪಕ್ಷದ ನಾಯಕ ಕಿಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸಿಎಂ ಆದವರನ್ನೇ ಲೋಕಾಯುಕ್ತರು ತನಿಖೆ ಮಾಡುವುದು ಎಷ್ಟು ಸರಿ? ಮೊದಲು ನೈತಿಕತೆ ಇದ್ದರೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ಅವರು ತನಿಖೆ ಎದುರಿಸಲಿ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಬಿಜೆಪಿಯ ಕೈಗೊಂಬೆ ಎನ್ನುತ್ತಾರೆ, ಲೋಕಾಯುಕ್ತ ಕಾಂಗ್ರೆಸ್ ಕೈಗೊಂಬೆಯಾ? ಎಂದು ಕಿಡಿಕಾರಿದರು.

ಈ ಹಿಂದೆ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿದ್ದೇ ಇವರು, ಈಗ ಅದೇ ಲೋಕಾಯುಕ್ತ ಸಂಸ್ಥೆಯಿಂದ ತನಿಖೆ ಎದುರಿಸುವಂತಾಗಿದ್ದರೂ ರಾಜೀನಾಮೆ ನೀಡದೆ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

ಸಚಿವರಾಗಿದ್ದ ನಾಗೇಂದ್ರ ಮೇಲೆ ಆರೋಪ ಬಂದಾಕ್ಷಣ ಅವರ ರಾಜೀನಾಮೆ ಪಡೆದಿದ್ದೀರಿ, ಈಗ ನಿಮ್ಮ ವಿಷಯದಲ್ಲಿ ಮಾತ್ರ ಅದು ಯಾಕೆ ಆಗಲ್ಲ? ದಲಿತರಿಗೊಂದು ನ್ಯಾಯ, ನಿಮಗೊಂದು ನ್ಯಾಯನಾ? ಎಂದು ಕಿಡಿಕಾರಿದರು.

ಲೋಕಾಯುಕ್ತ ತನಿಖೆ ಎರಡು ಗಂಟೆಯಲ್ಲಿ ಮುಗಿಯುತ್ತದೆ ಎಂದು ಮೊದಲೇ ಗೊತ್ತಾಗಿದ್ದು ಹೇಗೆ? ಇವರೇ ತೊಟ್ಟಿಲು ತೂಗಿ, ಮಗು ಚಿವುಟೋದು ಎಂದು ವ್ಯಂಗ್ಯವಾಡಿದರು. ಲೋಕಾಯುಕ್ತ ತನಿಖೆಯಲ್ಲಿ ಯಾವುದೇ ಹುರುಳಿಲ್ಲ, ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ ಎಂದರು.

ವಕ್ಫ್‌ ಬೋರ್ಡ್‌ನಿಂದ ಆಗುತ್ತಿರುವ ಸಮಸ್ಯೆಯನ್ನು ಈಗಾಗಲೇ ಬಿಜೆಪಿ ಪ್ರಶ್ನೆ ಮಾಡಿದೆ. ಅಷ್ಟೇ ಅಲ್ಲ, ಸದನ ಸಮಿತಿ ಬಂದಿದ್ದು, ಅದರ ಮುಂದೆಯೇ ಅಹವಾಲು ಸಲ್ಲಿಸಲಾಗಿದೆ. ರೈತರು ನೂರಾರು ವರ್ಷಗಳ ಕಾಲ ಉಳುಮೆ ಮಾಡಿಕೊಡು ಬಂದಿದ್ದ ಭೂಮಿಯನ್ನು ವಕ್ಫ್‌ ಆಸ್ತಿಯಾಗಿ ಘೋಷಣೆ ಮಾಡಲಾಗಿದೆ. ಇದನ್ನು ಹೇಗೆ ಸಹಿಸಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ವಕ್ಫ್‌ ಸಮಸ್ಯೆ ಹಿಂದೂ-ಮುಸ್ಲಿಂ ಸಮಸ್ಯೆ ಅಲ್ಲ, ಇದು ರೈತರ ಜಮೀನಿನ ಸಮಸ್ಯೆ ಎಂದರು.

ಜಮೀರ್ ಅಹಮದ್ ಅವರ ರಾಜೀನಾಮೆ ಪಡೆಯಬೇಕು. ವಕ್ಫ್‌ ವಿಷಯದಲ್ಲಿ ಅವರು ಕಾಂಗ್ರೆಸ್ ಸರ್ಕಾರಕ್ಕೆ ಸವಾಲು ಹಾಕುತ್ತಾರೆ. ಕೇವಲ ಪಹಣಿಯಲ್ಲಿ ಮಾತ್ರ ವಕ್ಫ್‌ ಹೆಸರು ತೆಗೆಯುವುದಲ್ಲ, ವಕ್ಫ್‌ ಬೋರ್ಡ್‌ನ್ನೇ ತೆಗೆಯಬೇಕು ಎಂದರು.

ಉಪ ಚುನಾವಣೆಯಲ್ಲಿ ನಮ್ಮ ಪರ ಅಲೆ ಇದ್ದು ಗೆಲುತ್ತೇವೆ. ಹಾಗಂತ ಮ್ಯಾಜಿಕ್ ಮಾಡಲು ಆಗಲ್ಲ, ನಾವು ಸಹ ಕೆಲಸ ಮಾಡಬೇಕಾಗುತ್ತದೆ ಎಂದು ನಾರಾಯಣಸ್ವಾಮಿ ಹೇಳಿದರು.

Share this article