ಯಲ್ಲಾಪುರ: ಭಕ್ತಿ ಇಲ್ಲದಿದ್ದರೆ ಭಗವಂತನನ್ನೂ ಒಲಿಸಲು ಸಾಧ್ಯವಿಲ್ಲ. ಪರಮ ಪವಿತ್ರವಾದ ಭಕ್ತಿಯನ್ನು ನಾವಿಂದು ಅನುಭವಿಸಿದ್ದೇವೆ. ಅದು ಭಗವಂತನನ್ನು ಸೇರುವುದಕ್ಕೆ ಶ್ರೇಷ್ಠ ಮಾರ್ಗ ಎಂದು ಕೇರಳದ ಕಾಸರಗೋಡಿನ ಎಡನೀರು ಮಹಾಸಂಸ್ಥಾನದ ಸಚ್ಚಿದಾನಂದ ಭಾರತೀ ಸ್ವಾಮೀಜಿ ನುಡಿದರು.
ಯಲ್ಲಾಪುರ ಮತ್ತು ಎಡನೀರು ಮಠಕ್ಕೆ ಕಳೆದ ೨೫ ವರ್ಷಗಳಿಂದ ಅವಿನಾಭಾವ ಸಂಬಂಧ ಬೆಳೆದುಬಂದಿದೆ. ಇಲ್ಲಿನ ಜನರ ಪ್ರೀತಿ ಅನುಸರಣೀಯವಾದದ್ದು. ನಮ್ಮ ಗುರುಗಳು ೨೫ ವರ್ಷಗಳ ಹಿಂದೆ ಯಲ್ಲಾಪುರ ಸಂಕಲ್ಪದಲ್ಲಿ ೨ ತಿಂಗಳುಗಳ ಕಾಲ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿದ್ದರು. ಅದು ಇಂದಿಗೂ ನೆನಪಿಡುವಂತೆ ಮಾಡಿದೆ. ಆ ನೆನಪಿನ ಸಂಬಂಧವೇ ಇಲ್ಲಿ ಇಂದು ಎರಡು ಭಕ್ತಿಪ್ರಧಾನವಾದ ಕಾರ್ಯಕ್ರಮಗಳು ನಡೆದವು. ಬೆಳಗಿನ ಹೊತ್ತಿನಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಮಧ್ಯಾಹ್ನ ಧಾರ್ಮಿಕ ವಿಷಯದ ಕುರಿತು ಮಹತ್ವದ ಉಪನ್ಯಾಸವನ್ನು ಮತ್ತು ಶ್ರೇಷ್ಟ ಕಲಾವಿದರಿಂದ ತಾಳಮದ್ದಲೆ ನಮ್ಮನ್ನು ಸಂತಸಪಡಿಸಿದೆ. ಇಲ್ಲಿನ ಎಲ್ಲ ಅಭಿಮಾನಿಗಳು ಈ ವರ್ಷವೂ ಎಡನೀರಿನಲ್ಲಿ ನಡೆಯುವ ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಬಂದು ಭಾಗವಹಿಸಿದರೆ ಇನ್ನೂ ಹೆಚ್ಚಿನ ಸಂತೋಷ ನಮ್ಮದಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಪ್ರಮೋದ ಹೆಗಡೆ, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಶಂಕರ ಭಟ್ಟ ತಾರೀಮಕ್ಕಿ, ಉಮೇಶ ಭಾಗ್ವತ, ಜಗದೀಶ ದೀಕ್ಷಿತ, ವಿ. ಅನಂತ ಭಟ್ಟ, ನಾಗೇಂದ್ರ ಭಟ್ಟ ಕವಾಳೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ವೈದಿಕ ಪರಿಷತ್ತಿನ ಗೌರವಾಧ್ಯಕ್ಷ ಡಿ. ಶಂಕರ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೈದಿಕ ಪರಿಷತ್ತಿನ ಕಾರ್ಯದರ್ಶಿ ವಿ. ಲಕ್ಷ್ಮೀನಾರಾಯಣ ಭಟ್ಟ ತಾರೀಮಕ್ಕಿ ವಂದಿಸಿದರು.