ಕುಷ್ಟಗಿ:
ಐಕ್ಯತೆಯ ಹೋರಾಟಗಳು ತಾತ್ವಿಕವಾಗಿ ರಾಜೀಸಂಧಾನ ಮಾಡಿಕೊಳ್ಳದಿದ್ದರೆ ಗೆಲುವು ಖಚಿತವಾಗಿ ದಕ್ಕುತ್ತದೆ ಎಂದು ಬೆಂಗಳೂರಿನ ಶಿಕ್ಷಣ ಉಳಿಸಿ ಸಮಿತಿ ಮುಖ್ಯಸ್ಥ ವಿ.ಎನ್. ರಾಜಶೇಖರ ಹೇಳಿದರು.ತಾಲೂಕಿನ ತಾವರಗೇರಾ ಪಟ್ಟಣದ ಬುದ್ಧ ವಿಹಾರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಯುವ ಪಡೆ) ನೇತೃತ್ವದಲ್ಲಿ ಜರುಗಿದ ಕೊಪ್ಪಳ ಜಿಲ್ಲಾ ಮಾಲಿನ್ಯಕಾರಿ ಕಾರ್ಖಾನೆ ಬಾಧಿತರ ಎರಡನೇ ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರದಲ್ಲಿ ʻಜನರ ಪ್ರತಿರೋಧದ ಚಳವಳಿಗಳುʼ ಎಂಬ ಗೋಷ್ಠಿ ಕುರಿತು ಮಾತನಾಡಿದರು. ವೈಚಾರಿಕ ಭಿನ್ನಾಭಿಪ್ರಾಯಗಳಿದ್ದರೂ ಬಾಧಿತ ಜನರ ಹಿತಾಸಕ್ತಿಗಾಗಿ ಒಗ್ಗೂಡಿ ಕೆಲಸ ಮಾಡುವುದು ಅತ್ಯವಶ್ಯಕ ಎಂದರು.
ಕಾರ್ಖಾನೆಗಳ ಬಾಧಿತ ಜನರ ಧ್ವನಿ ಗೋಷ್ಠಿ ಕುರಿತು ಮಾತನಾಡಿದ ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯ ಉಪಾಧ್ಯಕ್ಷ ಡಿ.ಎಚ್. ಪೂಜಾರ, ಕೊಪ್ಪಳ ಜಿಲ್ಲೆಯ ಕಾರ್ಖಾನೆ ಬಾಧಿತರು ಕೈಗಾರಿಕಾ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಭೂ ವಂಚನೆ, ಕೃಷಿ ಬೆಳೆ ಹಾನಿ, ರೋಗಗಳಿಗೆ ತುತ್ತಾಗಿದ್ದಾರೆ. ರೈತರ ಹಿತವನ್ನು ಸರ್ಕಾರಗಳು ಕಾಪಾಡುವಲ್ಲಿ ವಿಫಲವಾಗಿವೆ. ಅಂತಹ ಸರ್ಕಾರವನ್ನು ಜನರು ಕಿತ್ತಾಕಿದ್ದಾರೆ. ಪಶ್ಚಿಮ ಬಂಗಾಳದ ಮಾದರಿಯನ್ನಿಟ್ಟುಕೊಂಡು ಇಲ್ಲಿಯೂ ಹೋರಾಟ ಕಟ್ಟಬೇಕಾಗಿದೆ ಎಂದು ಹೇಳಿದರು.ನಿವೃತ್ತ ಕೃಷಿ ವಿವಿ ಪ್ರಾಧ್ಯಾಪಕ ಡಾ. ರಾಜೇಂದ್ರ ಪೋತ್ಸಾರ ಅವರು ಪರಿಸರ ಮಾಲಿನ್ಯಕಾರಿ ಕಾರ್ಖಾನೆಗಳ ಸುರಕ್ಷತೆ ಮತ್ತು ಉದ್ಯೋಗ ಸಾಧ್ಯತೆ ಎನ್ನುವ ವಿಷಯದ ಕುರಿತು ಮಾತನಾಡಿ, ಕಾರ್ಖಾನೆಗಳು ಸಮುದಾಯ ಮುಖಿಯಾಗಿರಬೇಕು. ಜನರ ಜೀವದ, ಆರೋಗ್ಯ, ಕೃಷಿ, ಒಟ್ಟಾರೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳು ಬಂದ್ ಆಗಬೇಕು ಎಂದರು.
ಮಾನವ ಬಂಧುತ್ವ ವೇದಿಕೆಯ ಟಿ. ರತ್ನಾಕರ, ಮುಂದಿನ ಹೋರಾಟದ ರೂಪುರೇಷೆಗಳು ಎನ್ನುವ ಗೋಷ್ಠಿಯಲ್ಲಿ, ನಮ್ಮ ಸಂಸ್ಥೆಯು ದಲಿತ, ಬಡವ, ಶೋಷಿತ, ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಅಭಯ ನೀಡಿದರು.ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ ಮಾತನಾಡಿ, ಕೊಪ್ಪಳದ ಕಾರ್ಖಾನೆಗಳು ಕೃಷಿ ಹಾಗೂ ಜನರ ಬದುಕು ಕಸಿದುಕೊಂಡಿವೆ. ಕಾಲಕಾಲಕ್ಕೆ ಹೋರಾಟಕ್ಕೆ ಧುಮುಕಿ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ ಎಂದರು. ರೈತ ಸಂಘ ಯಾವಾಗಲೂ ಈ ಚಳವಳಿ ಜತೆಗೆ ನಿಲ್ಲುತ್ತದೆ ಎಂದರು.
ಸಂಚಾಲಕ ಶರಣು ಗಡ್ಡಿ, ಗವಿಸಿದ್ದಪ್ಪ ಕುಣಿಕೇರಿ, ಕಾಶಪ್ಪ ಚಲವಾದಿ, ತಿರುಪತಿ, ಇಂದಿರಾನಗರ ಬಾಧಿತರಾಗಿ ಮತ್ತು ಚಳವಳಿ ಕಟ್ಟುವ ರೂಪುರೇಷೆಯ ಭಾಗವಾಗಿ ಮಾತನಾಡಿದರು, ಕಾರ್ಖಾನೆಯಿಂದ ಬಾಧಿತರಾದ ಹಿರೇಬಗನಾಳ, ಗಿಣಿಗೇರಿ, ಕುಣಿಕೇರಿ, ಇಂದಿರಾನಗರ, ಬೂದಗುಂಪಾ, ಹುಲಿಗಿ ಗ್ರಾಮಗಳ ಬಾಧಿತರು ತಮಗಾದ ನೋವುಗಳನ್ನು ತೋಡಿಕೊಂಡರು. ಈ ಆಂದೋಲನ ನಮ್ಮ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದು ಮಾತನಾಡಿದರು.ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆಂದೋಲನದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ವಹಿಸಿದ್ದರು, ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ, ಆಂದೋಲನದ ಸಂಚಾಲಕ ಎಂ.ಕೆ. ಸಾಹೇಬ, ಶರಣು ಶೆಟ್ಟರ, ಶರಣು ಪಾಟೀಲ, ಮುರುಗೇಶ ಬರಗೂರ ಇದ್ದರು.