-ಸಂವಿಧಾನ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ
ಕನ್ನಡಪ್ರಭ ವಾರ್ತೆ ಹಿರಿಯೂರು: ಎಲ್ಲಾ ಧರ್ಮ, ಜಾತಿಯ ಜನರ ಹಕ್ಕು ಬಾಧ್ಯತೆಗಳನ್ನು ರಕ್ಷಿಸುವಂತಹ ಭಾರತದ ಸಂವಿಧಾನವನ್ನು ಬಾಬಾ ಸಾಹೇಬರು ರಚಿಸದಿದ್ದರೆ ಮತ್ತು ಅವರು ಬೌದ್ಧಧರ್ಮ ಅಲ್ಲದೇ ಬೇರೆ ಧರ್ಮ ಆಯ್ಕೆ ಮಾಡಿಕೊಂಡಿದ್ದರೆ ಇಷ್ಟೊತ್ತಿಗೆ ರಕ್ತ ಕ್ರಾಂತಿಯಾಗಿ ಭಾರತ ಅದೆಷ್ಟೋ ಭಾಗವಾಗಿ ವಿಂಗಡಣೆಯಾಗುವ ಸಂಭವವಿತ್ತು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿಪಿ.ತಿಪ್ಪೇಸ್ವಾಮಿ ಹೇಳಿದರು.
ನಗರದ ಟಿಬಿ ವೃತ್ತದ ಸಮೀಪದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜು, ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಾಗೂ ನಗರಸಭೆ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪ್ರಸ್ತಾವನೆ ಭೋಧಿಸಿ ಮಾತನಾಡಿದರು.ಸಂವಿಧಾನ ಗೌರವಿಸುವುದೆಂದರೆ ಅದನ್ನು ಪವಿತ್ರ ಗ್ರಂಥವೆoದು ಪೂಜಿಸುವುದು ಆರಾಧಿಸುವುದಲ್ಲ, ಬದಲಾಗಿ ಅದರ ಆಶಯಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದು. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ತಮ್ಮ ಕರ್ತವ್ಯಗಳನ್ನು ಪಾಲಿಸುವುದು ಇತಿಮಿತಿ ಮೀರದಿರುವುದು ಆಗಿದೆ.
ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ, ಭಾರತದ ಸಂವಿಧಾನ ಸರ್ವರಿಗೂ ಸಮಾನತೆ ಒದಗಿಸಿದೆ. ಮೂಲಭೂತ ಹಕ್ಕುಗಳು, ಕರ್ತವ್ಯಗಳನ್ನು ನೀಡಿದೆ. ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ನಮ್ಮ ಸಂವಿಧಾನವು ನಮ್ಮೆಲ್ಲರನ್ನು ರಕ್ಷಿಸುವ ಬಹುದೊಡ್ಡ ಕಾನೂನಿನ ಬಲ ಎಂದರು.
ಫೋಟೊ: ನಗರದ ಟಿಬಿ ವೃತ್ತದ ಸಮೀಪದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಪದವಿ ಪೂರ್ವ ಕಾಲೇಜು, ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಾಗೂ ನಗರಸಭೆ ನೇತೃತ್ವದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು.