ಸಂಸ್ಕಾರವಿಲ್ಲದಿದ್ದರೆ ಬದುಕೇ ಶೂನ್ಯ- ಲೀಲಾ

KannadaprabhaNewsNetwork |  
Published : Aug 06, 2025, 01:15 AM IST

ಸಾರಾಂಶ

ಬದುಕಿನಲ್ಲಿ ಸಂಸ್ಕಾರಗಳಿರಬೇಕು. ಸಂಸ್ಕಾರಗಳೇ ಇಲ್ಲದಿದ್ದರೆ ಆ ಬದುಕು ಶೂನ್ಯ ಮತ್ತು ಅರ್ಥಪೂರ್ಣವಿಲ್ಲದ ಬದುಕಾಗುತ್ತದೆ. ಆದ್ದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಮೊದಲು ಸಂಸ್ಕಾರಗಳನ್ನು ಕಲಿಸಿರಿ ಎಂದು ಶಿಕ್ಷಣ ಚಿಂತಕಿ ಲೀಲಾ ಕಾರಟಗಿ ಹೇಳಿದರು.

ನರೇಗಲ್ಲ: ಬದುಕಿನಲ್ಲಿ ಸಂಸ್ಕಾರಗಳಿರಬೇಕು. ಸಂಸ್ಕಾರಗಳೇ ಇಲ್ಲದಿದ್ದರೆ ಆ ಬದುಕು ಶೂನ್ಯ ಮತ್ತು ಅರ್ಥಪೂರ್ಣವಿಲ್ಲದ ಬದುಕಾಗುತ್ತದೆ. ಆದ್ದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಮೊದಲು ಸಂಸ್ಕಾರಗಳನ್ನು ಕಲಿಸಿರಿ ಎಂದು ಶಿಕ್ಷಣ ಚಿಂತಕಿ ಲೀಲಾ ಕಾರಟಗಿ ಹೇಳಿದರು.

ಸಮೀಪದ ಹಾಲಕೆರೆಯ ಶ್ರೀಮಠದಲ್ಲಿ ಜರುಗಿದ ಬೆಳ್ಳಿರಥೋತ್ಸವದ ನಂತರ ನಡೆದ ಶಿವಾನುಭವಗೋಷ್ಠಿ, ಹಿರಿಯ ತಾಯಂದಿರ ಸನ್ಮಾನದಲ್ಲಿ ಅವರು ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಮಹಿಳೆಗೆ ವಿಶೇಷ ಸ್ಥಾನಮಾನ ನೀಡಿದ ದೇಶ ನಮ್ಮದು. ತಾಯಿ ಸಾಕ್ಷಾತ್ ಭಗವತ್ ಸ್ವರೂಪಿಯಾಗಿದ್ದಾಳೆ. ಅಕ್ಕ-ತಂಗಿ, ಹೆಂಡತಿ, ಸೊಸೆ, ತಾಯಿ ಹೀಗೆ ವಿವಿಧ ಹಂತಗಳನ್ನು ದಾಟಿ ಬರುವ ಆಕೆ ಎಲ್ಲದರಲ್ಲಿಯೂ ತ್ಯಾಗದ ಪ್ರತಿರೂಪವೇ ಆಗಿದ್ದಾಳೆ. ಸಮಾಜ ಅವಳ ಪ್ರತಿಭೆಗೆ, ಸಾಧನೆಗೆ ಪ್ರೋತ್ಸಾಹ ನೀಡಬೇಕು. ಅವಳನ್ನು ಕಟ್ಟಿ ಹಾಕುವ ಕೆಲಸವಾಗಬಾರದು. ತಾಯಂದಿರು ಎಂದಿಗೂ ಮಕ್ಕಳ ಅಂಕಗಳ ಬಗ್ಗೆ ಯೋಚಿಸದೆ ಅವರಲ್ಲಿ ಮೌಲ್ಯಗಳ ಬಗ್ಗೆ ಯೋಚಿಸಬೇಕು. ಜೀವನದ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಲು ತಾಯಂದಿರು ಮುಂದಾಗಬೇಕು. ಮಗುವಿನ ಪ್ರತಿ ಹೆಜ್ಜೆಯಲ್ಲಿಯೂ ತಾಯಿಯ ಗಮನವಿರಬೇಕು. ಹೆಣ್ಣು ತನ್ನ ಪರಿಪೂರ್ಣ ಜೀವನವನ್ನು ಇತರರ ಉದ್ಧಾರಕ್ಕಾಗಿಯೆ ಮೀಸಲಿಡುತ್ತಾಳೆ ಎಂಬುದನ್ನು ಎಲ್ಲರೂ ಗಮನಿಸಬೇಕೆಂದರು.

ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ ಬದುಕನ್ನು ಎಂದಿಗೂ ನಿರರ್ಥಕ ಮಾಡಿಕೊಳ್ಳಬೇಡಿ. ನಿಮ್ಮ ಮನದಲ್ಲಿ ಜ್ಞಾನದ ಸೆಲೆಯಿದ್ದರೆ ನಿಮ್ಮ ಬದುಕು ಸಾರ್ಥಕವಾಗುತ್ತದೆ. ಈ ಜ್ಞಾನ ಸತ್ಸಂಗದಿಂದ ಬರುತ್ತದೆ. ಆದ್ದರಿಂದ ಎಂದಿಗೂ ನೀವುಗಳು ಸತ್ಸಂಗದಲ್ಲಿ ಕಾಲ ಕಳೆಯಬೇಕೆಂದು ಊರಲ್ಲಿ ಜಾತ್ರೆ, ಶಿವಾನುಭವಗೋಷ್ಠಿಯಂತಹ ಕಾರ್ಯಗಳು ಜರುಗುತ್ತವೆ. ಇವುಗಳಲ್ಲಿ ನೀವುಗಳು ಮನಸ್ಸಿನಿಂದ ಪಾಲ್ಗೊಳ್ಳಿ ಎಂದರು. ಈ ಸಂದರ್ಭದಲ್ಲಿ ಶ್ರೀಗಳು ಹಿರಿಯ ತಾಯಂದಿರ ಸನ್ಮಾನವನ್ನು ನೆರವೇರಿಸಿದರು.

ಒಳಬಳ್ಳಾರಿ ಸುವರ್ಣಗಿರಿ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯಸಾನಿಧ್ಯ, ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ನೇತೃತ್ವ ಮತ್ತು ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಸ್.ಎಸ್. ಸಾರಂಗಮಠ ವಿರಚಿತ ಹಾಲಕೆರೆಯ ಶ್ರೀ ಮಹಾತಪಸ್ವಿ ಅನ್ನದಾನೇಶ್ವರ ಮಹಿಮೆ ನಾಟಕ ಮತ್ತು ಗಿರಿರಾಜ ಹೊಸಮನಿಯವರು ಬರೆದ ಹಾಲಕೆರೆಯಿಂದ ಹಿಮಾಲಯದವರೆಗೆ ಕೃತಿಗಳು ಲೋಕಾರ್ಪಣೆಗೊಂಡವು. ಇದೇ ಸಂದರ್ಭದಲ್ಲಿ ಡಾ. ಕಲ್ಲಯ್ಯ ಹಿರೇಮಠ ನೇತೃತ್ವದ ಬೆತ್ತದ ಅಜ್ಜ ಕಿರುಚಿತ್ರವೂ ಬಿಡುಗಡೆಗೊಂಡಿತು.

ರೋಣ ಅಕ್ಕನ ಬಳಗದ ಅಧ್ಯಕ್ಷೆ ಅನ್ನಪೂರ್ಣಮ್ಮ ಜಿ. ಪಾಟೀಲ ಪಾಲ್ಗೊಂಡಿದ್ದರು. ಬೆಳ್ಳಿರಥೋತ್ಸವದ ನಿಮಿತ್ತ ಧಾರವಾಡದ ಎಸ್. ಡಿ. ಎಂ. ನಾರಾಯಣ ಹಾರ್ಟ್ ಸೆಂಟರ್‌ನವರಿಂದ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಜರುಗಿತು. ಬೆಳಿಗ್ಗೆ ಮಕ್ಕಳಿಗಾಗಿ ಅಕ್ಷರಾಭ್ಯಾಸದ ಪ್ರಾರಂಭ, 501 ಮುತ್ತೈ ದೆಯರಿಗೆ ಉಡಿ ತುಂಬುವುದು, ಮರಳಿ ಮಣ್ಣಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮಗಳು ಜರುಗಿದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ