ಸೊನ್ನೆ ಟಿಕೆಟ್‌ ನಂಬಿ ಬಂದವರ ಶಕ್ತಿ ಕಳೆದ ಮುಷ್ಕರ

KannadaprabhaNewsNetwork |  
Published : Aug 06, 2025, 01:15 AM IST
ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಮರಳಿ ತಮ್ಮ ಊರಿಗೆ ತೆರಳಲು ಹೊಸ ಬಸ್‌ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತ ಕುಳಿತಿದ್ದ ದಂಪತಿಯನ್ನು ಅಪರ ಸಾರಿಗೆ ಆಯುಕ್ತರು ವಿಚಾರಿಸಿದರು. | Kannada Prabha

ಸಾರಾಂಶ

ಕೆಲ ಖಾಸಗಿ ವಾಹನಗಳು ನಿಗದಿಯಂತೆ ಹಣ ಪಡೆದರೆ, ಇನ್ನೂ ಕೆಲವರು ಹೆಚ್ಚು ಹಣ ಪಡೆದಿದ್ದರಿಂದ ಸೊನ್ನೆ ಟಿಕೆಟ್ ಮಹಿಳೆಯರ ಕೈಸುಟ್ಟಿತ್ತು. ಇವತ್ತೊಂದಿನ ನಾವು ಹುಬ್ಬಳ್ಳಿಗೆ ಬರದಿದ್ದರೆ ಹಣವಾದರೂ ಉಳಿಯುತ್ತಿತ್ತು ಎಂದು ಗೊಣಗುತ್ತಲೇ ಖಾಸಗಿ ವಾಹನ ಏರುತ್ತಿದ್ದರು.

ಮಹಮ್ಮದ ರಫೀಕ್ ಬೀಳಗಿ

ಹುಬ್ಬಳ್ಳಿ: ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಹುದು ಎಂದು ಹುಬ್ಬಳ್ಳಿಗೆ ಬಂದಿದ್ದ ಕೆಲ ಮಹಿಳೆಯರು ಮಂಗಳವಾರದ ಸಾರಿಗೆ ನೌಕರರ ಮುಷ್ಕರದಿಂದ ಹಣ ನೀಡಿ ಖಾಸಗಿ ವಾಹನಗಳಲ್ಲಿ ಪ್ರಯಾಣಿಸಿ ಕೈಸುಟ್ಟುಕೊ‍ಳ್ಳುವಂತಾಯಿತು. ಕೆಲ ಖಾಸಗಿ ವಾಹನಗಳು ಎಂದಿಗಿಂತ ಹೆಚ್ಚು ಹಣ ಪಡೆದಿದ್ದರಿಂದ ಸೊನ್ನೆ ಟಿಕೆಟ್ ನಂಬಿ ಬಂದವರ ಶಕ್ತಿ ಕಳೆದಿತ್ತು.

ಗದಗದಿಂದ ಬಂದಿದ್ದ ನಾಲ್ಕೈದು ಜನ ಮಹಿಳೆಯರು ಸವದತ್ತಿ ಯಲ್ಲಮನ ದರ್ಶನಕ್ಕೆ ಹೊರಟಿದ್ದರು. ಆದರೆ, ಬಸ್‌ ಇಲ್ಲದೆ ಹೊಸ ಬಸ್‌ ನಿಲ್ದಾಣದಿಂದ ಹೊಸೂರು ಬಸ್ ನಿಲ್ದಾಣಕ್ಕೆ ಬಂದು ಧಾರವಾಡಕ್ಕೆ ಯಾವ ಬಸ್, ಯಾವಾಗ ಹೋಗುತ್ತದೆ ಎಂದು ಕಂಡ ಕಂಡವರಲ್ಲಿ ವಿಚಾರಿಸುತ್ತಿದ್ದರು. ಆದರೆ, ಬೇಗ ಬಸ್ ಸಿಗದ ಕಾರಣ ಅವರು ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವಂತಾಯಿತು.

ಕೆಲ ಖಾಸಗಿ ವಾಹನಗಳು ನಿಗದಿಯಂತೆ ಹಣ ಪಡೆದರೆ, ಇನ್ನೂ ಕೆಲವರು ಹೆಚ್ಚು ಹಣ ಪಡೆದಿದ್ದರಿಂದ ಸೊನ್ನೆ ಟಿಕೆಟ್ ಮಹಿಳೆಯರ ಕೈಸುಟ್ಟಿತ್ತು. ಇವತ್ತೊಂದಿನ ನಾವು ಹುಬ್ಬಳ್ಳಿಗೆ ಬರದಿದ್ದರೆ ಹಣವಾದರೂ ಉಳಿಯುತ್ತಿತ್ತು ಎಂದು ಗೊಣಗುತ್ತಲೇ ಖಾಸಗಿ ವಾಹನ ಏರುತ್ತಿದ್ದರು.

ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಮಾಡಿ ಬಂದ ದಂಪತಿಗೆ ಹುಬ್ಬಳ್ಳಿಯಲ್ಲಿ ಬಸ್ ಬಂದ್‌ನಿಂದಾಗಿ ಪರದಾಡಿದರು. ಬೆ‍‍ಳಗಾವಿ ಜಿಲ್ಲೆ ಸವದತ್ತಿಯ ದಂಪತಿ ಚಿಕ್ಕ ಮಗುವಿನ ಜೊತೆ ಇತ್ತೀಚಿಗೆ ತಿಮ್ಮಪ್ಪನ ದರ್ಶನಕ್ಕೆಂದು ತಿರುಪತಿಗೆ ಹೋಗಿದ್ದರು. ದರ್ಶನ, ಕೇಶ ಮುಂಡನವೆಲ್ಲ ಆಗಿ ವಾಪಸ್‌ ಊರಿನ ಬಸ್ ಹತ್ತಿದ್ದರು. ಹುಬ್ಬಳ್ಳಿಗೆ ಬಂದಿದ್ದ ಅವರಿಗೆ ತಮ್ಮ ಊರಿಗೆ ಮರಳುವ ಧಾವಂತ. ಆದರೆ, ಮುಷ್ಕರದ ಮಾಹಿತಿ ಇರಲಿಲ್ಲ. ಮಂಗಳವಾರ ಬೆಳ್ಳಂಬೆಳಿಗ್ಗೆ ಹುಬ್ಬಳ್ಳಿಗೆ ಆಗಮಿಸಿದ್ದ ಅವರು ಹೇಗಾದರೂ ಮಾಡಿ ಧಾರವಾಡ ತಲುಪಿ ಅಲ್ಲಿಂದ ಸವದತ್ತಿಗೆ ಹೋಗುವುದಾಗಿ ಯೋಚಿಸಿದ್ದರು. ಆದರೆ, ಬಸ್‌ ಸಂಚಾರವಿಲ್ಲದೆ ಹೊಸೂರು ಬಸ್ ನಿಲ್ದಾಣದಲ್ಲಿ ಇದ್ದ ಸಾರಿಗೆ ಇಲಾಖೆ ಸಿಬ್ಬಂದಿಯನ್ನು ಪದೇ ಪದೇ ಬಸ್‌ ಸಂಚಾರ ಯಾವಾಗ ಶುರುವಾಗುತ್ತೆ ಎಂದು ಕೇಳುತ್ತಿದ್ದರು. ಸುಮಾರು 10 ಗಂಟೆ ವರೆಗೂ ಯಾವುದೇ ಬಸ್ ಇರಲಿಲ್ಲ. ಹೀಗಾಗಿ, ಸಪ್ಪೆ ಮುಖ ಮಾಡಿಕೊಂಡು ನಿಲ್ದಾಣದಲ್ಲಿರುವ ಒಂದು ಆಸನದಲ್ಲಿ ಕುಳಿತುಕೊಂಡಿದ್ದರು.

ಈ ವೇಳೆ ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಸಂಚಾರದ ಕುರಿತಂತೆ ಮಾಹಿತಿ ಪಡೆಯುತ್ತಿದ್ದರು. ಬೇಸತ್ತು ಆಸನದಲ್ಲಿ ಕುಳಿತಿದ್ದ ದಂಪತಿಯನ್ನು ಮಾತನಾಡಿಸಿದಾಗ "ಸರ್ ಬೆಳಗ್ಗೆಯಿಂದ ಬಸ್‌ಗಾಗಿ ಕಾಯುತ್ತಿದ್ದೇವೆ. ಬಂದ್‌ನಿಂದಾಗಿ ತಿರುಪತಿಯಿಂದ ಬಂದ ನಾವು ನಮ್ಮೂರು ತಲುಪುವುದು ಯಾವಾಗ ತಿಳಿಯದಾಗಿದೆ " ಎಂದು ಅಳಲು ತೋಡಿಕೊಂಡರು.

ಆಗ ಅಪರ ಸಾರಿಗೆ ಆಯುಕ್ತರು ಸರ್ಕಾರಿ ಬಸ್‌ ಇಲ್ಲದಿದ್ದರೂ ನಿಮಗೆ ಖಾಸಗಿ ಬಸ್‌ ವ್ಯವಸ್ಥೆ ಮಾಡಿ ನಿಮ್ಮೂರು ತಲುಪುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದರಿಂದಾಗಿ ದಂಪತಿ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟರು. ಇನ್ನು ಇದೇ ರೀತಿ ಹಲವರು ವಿವಿಧ ಕಾರ್ಯಗಳಿಗೆಂದು ಹುಬ್ಬಳ್ಳಿ ಬಸ್‌ ನಿಲ್ದಾಣಕ್ಕೆ ಬಂದವರು ಮುಷ್ಕರದಿಂದಾಗಿ ಪರದಾಡುವಂತಾಯಿತು.

ಜಮಖಂಡಿಯಿಂದ ಆಸ್ಪತ್ರೆಗೆಂದು ಬಂದಿದ್ದ ವೃದ್ಧರಿಬ್ಬರು ಇದೇ ರೀತಿ ಬಸ್‌ ಇಲ್ಲದೆ ಪರದಾಡುತ್ತಿದ್ದರು. ಹಾಗೂ ಹೀಗೋ ಜನರಿಂದ ತುಂಬಿ ತುಳುಕುತ್ತಿದ್ದ ಬೇಂದ್ರೆ ಬಸ್ ಹಿಡಿದು ಧಾರವಾಡದತ್ತ ಪ್ರಯಾಣಿಸಿದರು. ಯಪ್ಪಾ ಧಾರ್ವಾಡ್ ಮಟಾ ಬೇಂದ್ರೆ ಬಸ್ಸಿಗೆ ಹೋಗಿ ಆ ಕಡೆ ಯಾವ್ದಾರ ಗಾಡಿಗೆ ಹೊಕ್ಕೇವಿ ಅಂತ ಬಸ್ ಏರಿದರು.

ಇದೇ ರೀತಿ ವಿವಿಧ ಕಾರ್ಯಗ‍‍ಳ ನಿಮಿತ್ತ ಹುಬ್ಬ‍ಳ್ಳಿಯ ಹೊಸ ನಿಲ್ದಾಣಕ್ಕೆ ಬಂದಿದ್ದ ಹಲವರು ನಿಲ್ದಾಣದಲ್ಲಿದ್ದ ಅಧಿಕಾರಿ‍ಗಳನ್ನು ಬಸ್ ಯಾವಾಗ ಆರಂಭವಾಗುತ್ತದೆ ಎಂದು ಕೇಳುತ್ತಿರುವುದು ಸಾಮಾನ್ಯವಾಗಿತ್ತು.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಕಳೇಬರ ಸಿಗದಿದ್ರೆ ಮುಸುಕುಧಾರಿ ಲೋಪವಲ್ಲ
ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ 35 ಬೀದಿ ನಾಯಿಗಳ ಬಂಧನ