ಹುಬ್ಬಳ್ಳಿ: ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆಗಳಿವೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಅದರಂತೆ ಮುಖ್ಯಮಂತ್ರಿ ಸ್ಥಾನ ಒಲಿಯಲು ಗುರುಬಲ, ತಾರಾಬಲ ಬೇಕು. ಶನಿಕಾಟ ಕಡಿಮೆಯಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಎಂ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ನಿಗಮ ಮಂಡಳಿಗಳಿಗೆ ಯಾರನ್ನೇ ನೇಮಕ ಮಾಡಬೇಕಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಹುಲ್ ಗಾಂಧಿ ಅವರ ಒಪ್ಪಿಗೆ ಪಡೆಯುತ್ತಾರೆ. ಹೀಗಾಗಿ, ಅವರು ವಾರಕ್ಕೊಮ್ಮೆ ದೆಹಲಿಗೆ ಹೋದರೂ ಅದು ಕಡಿಮೆಯೇ. ಇನ್ನು ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿಲ್ಲ. ರಾಜ್ಯಾಧ್ಯಕ್ಷ ಬದಲಾವಣೆ ಯಾವುದೇ ಅರ್ಜೆಂಟ್ ಇಲ್ಲ. ನಮ್ಮ ಅಭಿಪ್ರಾಯ ಹೇಳಬಹುದು. ಆದರೆ, ಹೈಕಮಾಂಡ್ ತೀರ್ಮಾನ ಅಂತಿಮ. ಸೆಪ್ಟೆಂಬರ್‌ನಲ್ಲಿ ಕ್ರಾಂತಿ ವಿಚಾರ ತಿಳಿದಿಲ್ಲ. ರಾಜಣ್ಣ ಅವರನ್ನು ಭೇಟಿ ಮಾಡಿದಾಗ ಈ ಬಗ್ಗೆ ವಿಚಾರಿಸುತ್ತೇನೆ. ಅಧ್ಯಕ್ಷ ಮತ್ತು ಡಿಸಿಎಂ ಬದಲಾವಣೆ ಬಿಟ್ಟು ಬೇರೆ ಕ್ರಾಂತಿ ಆಗಬಹುದು ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇದೆ. ಅದನ್ನು ಸರಬರಾಜು ಮಾಡುವುದು ಕೇಂದ್ರ ಸರ್ಕಾರ. ಹಂಚಿಕೆ ಮಾತ್ರ ರಾಜ್ಯ ಸರ್ಕಾರದ ಜವಾಬ್ದಾರಿ. ಎರಡು ಸರ್ಕಾರಗಳು ಕೂಡಿ ಸಮಸ್ಯೆ ಬಗೆಹರಿಸಬೇಕು. ಮಹದಾಯಿ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಆದಷ್ಟು ಬೇಗನೆ ಕೇಂದ್ರ ಸರ್ಕಾರ ಪರವಾನಗಿ ಕೊಡಿಸಬೇಕು ಎಂದರು.