ಹುಬ್ಬಳ್ಳಿ: ಏರೋಸ್ಪೇಸ್ ಯೋಜನೆಯನ್ನು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಅಥವಾ ಉತ್ತರ ಕರ್ನಾಟಕದ ಬೇರೆ ಯಾವುದೇ ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕ ಭಾಗ ಇನ್ನೂ ಕೈಗಾರಿಕಾ ಅಭಿವೃದ್ಧಿಯಲ್ಲಿ ಹಿಂದಿರುವುದು ತೀವ್ರ ಗಮನಾರ್ಹ. ಈ ಭಾಗದಲ್ಲಿ ಸಾಕಷ್ಟು ಭೂಮಿ ಲಭ್ಯವಿದ್ದು, ಹವಾಮಾನವೂ ತಾಂತ್ರಿಕ ಕೈಗಾರಿಕೆಗಳಿಗೆ ಸೂಕ್ತವಾಗಿದೆ. ಜತೆಗೆ, ಧಾರವಾಡ, ಹುಬ್ಬಳ್ಳಿ, ಬೆಳಗಾವಿ, ಹಾವೇರಿ, ಬಾಗಲಕೋಟೆ, ಬಳ್ಳಾರಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಯವರು ಅತ್ಯುತ್ತಮ ಶಿಕ್ಷಣ ಪಡೆದ, ಉದ್ಯೋಗ ನಿರೀಕ್ಷೆಯಲ್ಲಿರುವ ಯುವ ಶಕ್ತಿಯನ್ನು ಹೊಂದಿವೆ. ಏರೋಸ್ಪೇಸ್ ಪಾರ್ಕ್ ಸ್ಥಾಪನೆಯಂತಹ ದೊಡ್ಡ ಮಟ್ಟದ ಯೋಜನೆಯು ಈ ಭಾಗಕ್ಕೆ ಬಂದರೆ ಅನೇಕ ಉದ್ಯೋಗಾವಕಾಶ, ಆರ್ಥಿಕ ಅಭಿವೃದ್ಧಿ ಸೇರಿ ಅನೇಕ ರೀತಿಯ ಅನುಕೂಲಗಳನ್ನು ಕಲ್ಪಿಸುವ ಜತೆಗೆ ಉತ್ತರ ಕರ್ನಾಟಕದ ನೂತನ ಯುಗದ ಪ್ರಾರಂಭವಾಗಲಿದೆ. ಆದ್ದರಿಂದ, ಉತ್ತರ ಕರ್ನಾಟಕದ ಯಾವುದೇ ತಾಂತ್ರಿಕವಾಗಿ ಅನುಕೂಲಕರ ಪ್ರದೇಶದಲ್ಲಿ ಏರೋಸ್ಪೇಸ್ ಪಾರ್ಕ್ ಸ್ಥಾಪನೆಯ ಪ್ರಸ್ತಾವನೆಗೆ ಅನುಕೂಲ ಕಲ್ಪಿಸಿ, ಅಧ್ಯಯನ ಮಾಡಲು ಹಾಗೂ ಮುಂದಿನ ಕಾರ್ಯಚಟುವಟಿಕೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.