ತಳಕಲ್ಲು ಕೆರೆಗೆ ನೀರು ಬಾರದಿದ್ರೆ ಬ್ಯಾರೇಜ್‌ಗೆ ಮುತ್ತಿಗೆ, ಆತ್ಮಹತ್ಯೆಗೂ ಸಿದ್ಧ

KannadaprabhaNewsNetwork |  
Published : Aug 02, 2026, 02:15 AM IST
ಹೂವಿನಹಡಗಲಿ ತಾಲೂಕಿನ ತಳಕಲ್ಲು ಕೆರೆಗೆ ನೀರು ತುಂಬಿಸಬೇಕೆಂದು ಒತ್ತಾಯಿಸಿ ಕೆರೆ ಹೋರಾಟ ಸಮಿತಿ ಬೈರ್‌ ರ್ಯಾಲಿ ಮೂಲಕ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷೆ ಎಂ.ಪಿ.ಸುಮಾ ವಿಜಯ ಮಾತನಾಡಿದರು.  | Kannada Prabha

ಸಾರಾಂಶ

ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ರೈತರ ಆಕ್ರೋಶಕ್ಕೆ ಸಿಂಗಟಾಲೂರು ಕಚೇರಿ ಆವರಣ ಶನಿವಾರ ಸಾಕ್ಷಿಯಾಗಿತ್ತು.

ಹೂವಿನಹಡಗಲಿ: ದೂರದ ಕೂಡ್ಲಿಗಿ ಕೆರೆಗಳು, ಮಾಲ್ವಿ ಜಲಾಶಯಕ್ಕೆ ನೀರು ಹರಿಸಲು ಅಧಿಕಾರಿಗಳಿಗೆ ಅಡ್ಡಿ ಆತಂಕವಿಲ್ಲ. ಆದರೆ ತಳಕಲ್ಲು ಕೆರೆಗೆ ನೀರು ತುಂಬಿಸಲು ಹತ್ತಾರು ತೊಡಕು, ತೊಂದರೆಗಳ ಕಾರಣ ಹೇಳುತ್ತೀರಿ. ಭಾನುವಾರ ಕೆರೆಗೆ ನೀರು ತುಂಬಿಸದಿದ್ದರೆ ಸಿಂಗಟಾಲೂರು ಬ್ಯಾರೇಜ್‌ಗೆ ಮುತ್ತಿಗೆ ಹಾಕಿ, ಆತ್ಮಹತ್ಯೆಗೂ ಸಿದ್ಧರಿದ್ದೇವೆ. ಅಲ್ಲಿಯ ಅನಾಹುತಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ರೈತರ ಆಕ್ರೋಶಕ್ಕೆ ಸಿಂಗಟಾಲೂರು ಕಚೇರಿ ಆವರಣ ಶನಿವಾರ ಸಾಕ್ಷಿಯಾಗಿತ್ತು.

ಹೌದು, ತಾಲೂಕಿನ ತಳಕಲ್ಲು ಕೆರೆ ಅಭಿವೃದ್ಧಿ ಹೋರಾಟ ಸಮಿತಿಯ 50ಕ್ಕೂ ಹೆಚ್ಚು ರೈತರು ಇಟ್ಟಿಗಿ ಗ್ರಾಮದಿಂದ ಬೈಕ್‌ ರ್‍ಯಾಲಿ ಮೂಲಕ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಚೇರಿ ಮುಂದೆ ಕೆರೆಗೆ ನೀರು ತುಂಬಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದರು.

ಈ ವೇಳೆ ತಳಕಲ್ಲು ಕೆರೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷೆ ಎಂ.ಪಿ. ಸುಮಾ ವಿಜಯ್‌ ಮಾತನಾಡಿ, ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್‌ ನಿರ್ಮಾಣಕ್ಕಾಗಿ ಆಸ್ತಿ-ಪಾಸ್ತಿ ಕಳಕೊಂಡವರಿಗೆ ನೀರಿಲ್ಲ. ಆದರೆ ದೂರದ ಕೂಡ್ಲಿಗಿ ತಾಲೂಕಿನ 74 ಕೆರೆಗಳು, ಪಕ್ಕದ ಹಗರಿಬೊಮ್ಮನಹಳ್ಳಿಯ ಮಾಲ್ವಿ ಜಲಾಶಯಕ್ಕೆ ನೀರು ಹರಿಸುತ್ತೀರಿ. ನಮ್ಮ ತಾಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದ್ದರೂ ಕೆರೆಗಳು ಮಾತ್ರ ನೀರಿಲ್ಲದೇ ಖಾಲಿ ಇವೆ. ಅಧಿಕಾರಿಗಳು ಇಂತಹ ತಾತ್ಸಾರ ಮಾಡಬಾರದು. ದೂರದ ಕೆರೆಗಳಿಗೆ ನೀರು ಹರಿಯುತ್ತಿದೆ. ನಮ್ಮ ಭಾಗದ ರೈತರಿಗೆ ಘೋರ ಅನ್ಯಾಯವಾಗುತ್ತಿದೆ. ತಾಂತ್ರಿಕ ತೊಂದರೆಗಳನ್ನು ಕೂಡಲೇ ಸರಿಪಡಿಸಿ ನೀರು ಹರಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಯೋಜನೆಯ ಹಿನ್ನೀರು ಸಾಕಷ್ಟು ಇದೆ ಇಂತಹ ಸಂದರ್ಭದಲ್ಲಿಯೂ ಪೈಪ್‌ಲೈನ್‌ ದುರಸ್ತಿ ನೆಪ, ವಿದ್ಯುತ್‌ ಸಮಸ್ಯೆ ಹೇಳಿದರೇ? ಕೆರೆಗೆ ಯಾವಾಗ ನೀರು ಹರಿಸುತ್ತೀರಿ, ಈ ಹಿಂದೆ ಕೆರೆ ನೀರು ತುಂಬಿಸಲು ಯಾವ ರಾಜಕಾರಣಿಯೂ ಹೋರಾಟ ಮಾಡಿಲ್ಲ, ಅದರ ಸಾಧಕ ಬಾಧಕಗಳ ಕುರಿತು ಯಾರೊಂದಿಗೂ ಚರ್ಚಿಸಿಲ್ಲ, ಆದರಿಂದ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಅಗತ್ಯ ಬಿದ್ದರೇ ಹೆದ್ದಾರಿ ಬಂದ್‌ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು.

ಹೋರಾಟ ಸಮಿತಿಯ ರಾಮನಗೌಡ, ವಸಂತಕುಮಾರ ಮಾತನಾಡಿ, ಕೆರೆಗೆ ನೀರು ಹರಿಸದೇ ಕೇವಲ ಮೀಟರ್‌ ರೀಡರ್‌ ಆಧಾರದ ಅಂಕಿ ಅಂಶಗಳನ್ನು ಸರ್ಕಾರ ನೀಡುತ್ತಾರೆ, 10 ಕೆರೆಗಳಿಗೆ ನೀರು ತುಂಬಿಸಬೇಕೆಂಬ ಸರ್ಕಾರದ ನಿರ್ದೇಶನವಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ. ಕಳೆದ 15 ವರ್ಷಗಳಿಂದ ನೀರು ಬಿಟ್ಟಿಲ್ಲ, ಇಡೀ ರಾಜ್ಯದಲ್ಲೇ ವಿಜಯನಗರ ಜಿಲ್ಲೆ ತೀವ್ರ ಬರಗಾಲ ಎದುರಿಸುತ್ತಿದೆ. ಆದರಿಂದ ಜನ ಜಾನುವಾರು ಮತ್ತು ಕಾಡು ಪ್ರಾಣಿಗಳಿಗೆ ಕುಡಿವ ನೀರಿನ ಬವಣೆ ನೀಗಿಸಲು ಕೆರೆಗೆ ನೀಡು ತುಂಬಿಸಿ, ನಾವೇನು ರೈತರ ಬೆಳೆಗಳಿಗೆ ನೀರು ಕೇಳುತ್ತಿಲ್ಲವೆಂದು ಹೇಳಿದರು.

ಕೆರೆಗೆ ನೀರು ತುಂಬಿಸುವಂತೆ, ಶಾಸಕರು, ಜಿಲ್ಲಾಧಿಕಾರಿ ಸೇರಿದಂತೆ ಸಿಎಂಗೂ ಮನವಿ ಸಲ್ಲಿಸಿದ್ದರೂ, ರೈತ ಪರ ಕಾಳಜಿ ಯಾರು ಮೆರೆದಿಲ್ಲ, ಕೆರೆಗೆ ನೀರು ಹರಿಸದಿದ್ದರೇ ಹೆದ್ದಾರಿ ಬಂದ್‌ ಮಾಡುತ್ತೇವೆ, ಸಿಂಗಟಾಲೂರು ಬ್ಯಾರೇಜ್‌ಗೆ ಮುತ್ತಿಗೆ ಹಾಕಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ. ಆ ಸಂದರ್ಭದಲ್ಲಿ ಆಗುವ ಅನಾಹುತಕ್ಕೆ ಅಧಿಕಾರಿಗಳು ಮತ್ತು ಸರ್ಕಾರ ನೇರ ಹೊಣೆಯಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.

ಸತೀಶ ಕುಂಚೂರು, ನಾಗರಾಜ, ಎಸ್‌. ಚಂದ್ರಪ್ಪ ಮಾತನಾಡಿದರು. ಸಮಿತಿ ಗೌರವಾಧ್ಯಕ್ಷ ಎಂ.ಚನ್ನಬಸಪ್ಪ, ಉಪಾಧ್ಯಕ್ಷ ಕೆ.ಪಿ.ನಾಗರಾಜ, ಬಿ.ಸಿದ್ದಪ್ಪ, ಡಿ.ಕರಿಬಸಪ್ಪ ಸೇರಿದಂತೆ 50ಕ್ಕೂ ಹೆಚ್ಚು ರೈತರು ಇಲಾಖೆಯ ಇಇ ಶಿವಮೂರ್ತಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಪ್ರದಾಯಿಕ, ಯಾಂತ್ರೀಕೃತ ಮೀನುಗಾರಿಕೆ ಪುನಾರಂಭ
ಶಿಸ್ತಿನ ಜೀವನವೇ ಆರೋಗ್ಯ, ಆಧ್ಯಾತ್ಮಿಕ ಪ್ರಗತಿಗೆ ದಾರಿ: ರಾಘವೇಶ್ವರ ಶ್ರೀ