ನೀತಿ ಆಯೋಗ ಬಿಡುಗಡೆ ಮಾಡಿರುವ ಭಾರತ್‌ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ-2025ರಲ್ಲಿ ಕರ್ನಾಟಕ ರಾಜ್ಯವು 73 ಅಂಕಗಳೊಂದಿಗೆ ದೇಶದಲ್ಲಿ ಮೂರನೇ ಸ್ಥಾನ ಪಡೆದಿದ್ದು, ಚಾರ್ಜಿಂಗ್‌ ಮೂಲಸೌಕರ್ಯ ಸಿದ್ಧತೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.

ಬೆಂಗಳೂರು : ನೀತಿ ಆಯೋಗ ಬಿಡುಗಡೆ ಮಾಡಿರುವ ಭಾರತ್‌ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ-2025ರಲ್ಲಿ ಕರ್ನಾಟಕ ರಾಜ್ಯವು 73 ಅಂಕಗಳೊಂದಿಗೆ ದೇಶದಲ್ಲಿ ಮೂರನೇ ಸ್ಥಾನ ಪಡೆದಿದ್ದು, ಚಾರ್ಜಿಂಗ್‌ ಮೂಲಸೌಕರ್ಯ ಸಿದ್ಧತೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.

ತನ್ಮೂಲಕ ಎಲೆಕ್ಟ್ರಿಕ್‌ ಸಾರಿಗೆಗೆ ಉತ್ತೇಜನ ನೀಡುತ್ತಿರುವ ರಾಜ್ಯಗಳ ಪೈಕಿ ದೇಶದ ಮುಂಚೂಣಿ ರಾಜ್ಯವಾಗಿ ಸ್ಥಾನ ಪಡೆದಿದೆ ಎಂದು ಇಂಧನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟಾರೆ ಶ್ರೇಯಾಂಕದಲ್ಲಿ 84 ಅಂಕಗಳೊಂದಿಗೆ ದೆಹಲಿ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರ 78 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 73 ಅಂಕಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಚಾರ್ಜಿಂಗ್ ಮೂಲಸೌಕರ್ಯ ಸಿದ್ಧತೆ ವಿಭಾಗದಲ್ಲಿ ಕರ್ನಾಟಕ 97 ಅಂಕಗಳನ್ನು ಗಳಿಸಿದ್ದು, ದೇಶದಲ್ಲೇ ಅಗ್ರಸ್ಥಾನ ಪಡೆದಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ರಾಜ್ಯ ಸಾಧಿಸಿರುವ ಪ್ರಗತಿಗೆ ಇದು ಸಾಕ್ಷಿ ಎಂದು ಇಲಾಖೆ ಹೇಳಿದೆ.

ರಾಜ್ಯದ ಪರ ಈ ಗೌರವ ಸ್ವೀಕರಿಸಿರುವ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂನ ‘ಇವಿ ಮಿತ್ರ’, ಏಕೀಕೃತ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಅಪ್ಲಿಕೇಶನ್, ಏಕಗವಾಕ್ಷಿ ಅನುಮತಿ ವ್ಯವಸ್ಥೆ ಮತ್ತು ಇವಿ ಆಕ್ಸಿಲರೇಟರ್ ಸೆಲ್ ಸೇರಿ ಹಲವು ಕಾರ್ಯಕ್ರಮ ಮಾಡಿದ್ದೇವೆ. ಇವಿ ವಾಹನಗಳ ಮಾರಾಟ, ಚಾರ್ಜಿಂಗ್ ಮೂಲಸೌಕರ್ಯ ಮತ್ತು ಉತ್ಪಾದನಾ ವಲಯ ಒಳಗೊಂಡ ಪ್ರತ್ಯೇಕ ಎಲೆಕ್ಟ್ರಿಕ್ ವಾಹನ ನೀತಿ-2017 ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಹೇಳಿದರು.

6,979 ಇವಿ ಚಾರ್ಚಿಂಗ್‌ ಕೇಂದ್ರ:

ರಾಜ್ಯದಲ್ಲಿ 6,979 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿದ್ದು, ಬೆಂಗಳೂರಿನಲ್ಲೇ 4,896 ಚಾರ್ಚಿಂಗ್‌ ಕೇಂದ್ರಗಳಿವೆ.

ಮಾರಾಟದಲ್ಲೂ ನಂ.3:

ಎಲೆಕ್ಟ್ರಿಕ್ ವಾಹನಗಳ ಮಾರಾಟವೂ ಹೆಚ್ಚುತ್ತಿದ್ದು, 2026-27ನೇ ಹಣಕಾಸು ವರ್ಷದ ಮೊದಲ 5 ತಿಂಗಳಲ್ಲಿ ಮಾರಾಟ ಶೇ.15ರಷ್ಟಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ನಂತರ ದೇಶದಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನ ಮಾರಾಟ ದಾಖಲಿಸಿರುವ ರಾಜ್ಯ ಕರ್ನಾಟಕ ಎಂದು ಗುಪ್ತಾ ಹೇಳಿದರು.

- ನೀತಿ ಆಯೋಗದ ಭಾರತ್‌ ಎಲೆಕ್ಟ್ರಿಕ್ ಮೊಬಿಲಿಟಿ ಸೂಚ್ಯಂಕ-2025 ಬಿಡುಗಡೆ

- ಎಲೆಕ್ಟ್ರಿಕ್‌ ವಾಹನ ಮೊಬಿಲಿಟಿಯಲ್ಲಿ 84 ಅಂಕ ಗಳಿಸಿ ದೆಹಲಿ ದೇಶದ ನಂ.1

- ಮಹಾರಾಷ್ಟ್ರ 78 ಅಂಕದೊಂದಿಗೆ ನಂ.2, ಕರ್ನಾಟಕ 73 ಅಂಕ ಗಳಿಸಿ ನಂ.3

- ಚಾರ್ಜಿಂಗ್ ಮೂಲಸೌಕರ್ಯದಲ್ಲಿ ಕರ್ನಾಟಕಕ್ಕೆ 97 ಅಂಕ, ದೇಶದ ನಂ.1

- ರಾಜ್ಯದಲ್ಲಿ 6,979 ಇ.ವಿ. ಚಾರ್ಜಿಂಗ್ ಕೇಂದ್ರಗಳು. ಬೆಂಗಳೂರಿನಲ್ಲೇ 4,896

- ಎಲೆಕ್ಟ್ರಿಕ್‌ ವಾಹನ ಮಾರಾಟದಲ್ಲಿ ಕೂಡ ರಾಜ್ಯಕ್ಕೆ ದೇಶದಲ್ಲೇ 3ನೇ ಸ್ಥಾನ

- ಉ.ಪ್ರ., ಮಹಾರಾಷ್ಟ್ರದ ನಂತರ ಕರ್ನಾಟಕದಲ್ಲಿ ಹೆಚ್ಚು ಇವಿಗಳ ಮಾರಾಟ