ಮೈಸೂರು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್ ಪ್ರೆಸ್ ವೇಗಳು ಮತ್ತು ರೈಲು ಸಂಪರ್ಕಗಳ ಮೂಲಕ ಬೆಂಗಳೂರು, ಚೆನ್ನೈ ಮತ್ತು ಕೇರಳಕ್ಕೆ ಅತ್ಯುತ್ತಮ ಸಂಪರ್ಕ ಹೊಂದಿದೆ.
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನಲ್ಲಿ ಕೈಗಾರಿಕೆಗೆ ಇನ್ನಷ್ಟು ಒತ್ತು ನೀಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ ಮಾಡಬೇಕು ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.ಈ ಸಂಬಂಧ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿರುವ ಯದುವೀರ್ ಅವರು, ಮೈಸೂರು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಆದ್ಯತೆ ನೀಡಬೇಕು ಎಂದು ಕೋರಿದ್ದಾರೆ.ಮೈಸೂರು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್ ಪ್ರೆಸ್ ವೇಗಳು ಮತ್ತು ರೈಲು ಸಂಪರ್ಕಗಳ ಮೂಲಕ ಬೆಂಗಳೂರು, ಚೆನ್ನೈ ಮತ್ತು ಕೇರಳಕ್ಕೆ ಅತ್ಯುತ್ತಮ ಸಂಪರ್ಕ ಹೊಂದಿದೆ. ನಗರವು ಬೆಂಗಳೂರು ಮತ್ತು ಕಣ್ಣೂರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಗೂ ಸಂಪರ್ಕ ಹೊಂದಿದೆ. ಈ ನಿಟ್ಟಿನಲ್ಲಿ ಆಟೋಮೊಬೈಲ್ ಮತ್ತು ವಾಹನ ಉತ್ಪಾದನಾ ಘಟಕ ಆರಂಭಿಸಿದರೆ ಅನುಕೂಲ ಹೆಚ್ಚು ಎಂದು ಅವರು ವಿವರಿಸಿದ್ದಾರೆ.ಎಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಗಳು ಮತ್ತು ಸಂಶೋಧನಾ ಸಂಸ್ಥೆಗಳು ಕೂಡ ಇಲ್ಲಿವೆ. ಇಲ್ಲಿ ತಾಂತ್ರಿಕ ತರಬೇತಿಯೂ ಹೆಚ್ಚಾಗಿದೆ. ಮೈಸೂರಿನಲ್ಲಿ ಭೂ ಲಭ್ಯತೆ, ಕಡಿಮೆ ದಟ್ಟಣೆ, ಉತ್ತಮ ಗುಣಮಟ್ಟದ ಜೀವನ ಮತ್ತು ಕೈಗಾರಿಕೆಗೆ ಪೂರಕವಾದ ವಾತಾವರಣವಿದೆ ಎಂದಿದ್ದಾರೆ. ಉದ್ಯೋಗಾವಕಾಶ ಹೆಚ್ಚಳಮೈಸೂರಿನಲ್ಲಿ ಆಟೋಮೊಬೈಲ್ ಮತ್ತು ಇವಿ ಉತ್ಪಾದನಾ ಕ್ಲಸ್ಟರ್ ಸ್ಥಾಪನೆ ಮಾಡುವುದರಿಂದ ಕೈಗಾರಿಕಾ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ, ಯುವಕರಿಗೆ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದು ಆಟೋ ಘಟಕಗಳು, ಬ್ಯಾಟರಿಗಳು, ಎಲೆಕ್ಟ್ರಾನಿಕ್ಸ್, ಲಾಜಿಸ್ಟಿಕ್ಸ್ ಕೈಗಾರಿಕೆಗಳನ್ನೂ ಬೆಂಬಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತ್ ಮತ್ತು ಇವಿ ಕ್ಷೇತ್ರದತ್ತ ಕೇಂದ್ರ ಬಿಜೆಪಿ ಸರ್ಕಾರ ನೀಡಿರುವ ಆದ್ಯತೆಗೆ ಅನುಗುಣವಾಗಿ ಕ್ರಮ ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಪ್ರಮುಖ ಕೈಗಾರಿಕಾ ಕ್ಲಸ್ಟರ್ ಆರಂಭಿಸಲು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.